ಮಂಗಳವಾರ, ಜೂನ್ 2, 2020
27 °C
ನುಡಿ ನಮನ

ನಾದಪಯಣ ನಿಲ್ಲಿಸಿದ ಉಭಯಗಾನ ವಿದುಷಿ ಶ್ಯಾಮಲಾ ಜಿ.ಭಾವೆ

ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

ಅದೊಂದು ಹೆಮ್ಮರ. ಮನಸ್ಸಿಗೆ ಮುದ ನೀಡುವ ನಾದದ ತಂಗಾಳಿ ಬೀಸುತ್ತಾ ಜಗತ್ತಿನಾದ್ಯಂತ ತನ್ನ ಅಲೆಯನ್ನು ಪಸರಿಸಿದ ವಿದ್ಯಾ ದೇಗುಲ. ಅಲ್ಲಿ ನಿತ್ಯವೂ ನಡೆಯುತ್ತಿದ್ದದು ಒಂದೇ ಜಪ. ಅದೇ ಷಡ್ಜ, ರಿಷಭ, ಗಾಂಧಾರ, ಮಧ್ಯಮ, ಪಂಚಮ, ದೈವತ, ನಿಷಾದ ಸ್ವರಗಳನ್ನು ಒಳಗೊಂಡ ಸ್ವರ ತಪಸ್ಸು. ಇದು ‘ಸ್ವರ ಸತ್ಕಾರ’ದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಚಮತ್ಕಾರ.

ಶ್ಯಾಮಲಾ ಜಿ. ಭಾವೆ, ಬೆಂಗಳೂರಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಎಂಟು ದಶಕಗಳ ಕಾಲ ನಿರಂತರವಾಗಿ ನಾದಲೋಕವನ್ನು ಆಳಿದ ‘ಗಟ್ಟಿಕುಳ’. ಸಂಗೀತದ ದಕ್ಷಿಣಾದಿ ಹಾಗೂ ಉತ್ತರಾದಿ ಎರಡೂ ಪ್ರಕಾರಗಳಲ್ಲಿ ಅಸಾಧಾರಣವಾಗಿ ಸಾಧಿಸಿದ್ದಷ್ಟೇ ಅಲ್ಲದೆ ಸಾವಿರಾರು ಮಂದಿಗೆ ಅದನ್ನು ಉಣಬಡಿಸಿದ ಅದ್ಭುತ ‘ನಾದ ನಕ್ಷತ್ರ’.

ವಿದುಷಿ ಶ್ಯಾಮಲಾ ಭಾವೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ‘ಸರಸ್ವತಿ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಇಡೀ ದಿನ ಸಂಗೀತ ಸೇವೆಯಲ್ಲೇ ತೊಡಗಿಸಿಕೊಂಡಿದ್ದವರು. ಗಾಯನದ ಜೊತೆಗೆ ಜಲತರಂಗ, ಸಿತಾರ್‌, ಹಾರ್ಮೋನಿಯಂ, ದಿಲ್‌ರುಬ, ತಬಲಾ ಮುಂತಾದ ವಾದ್ಯಗಳನ್ನೂ ಕರಗತ ಮಾಡಿಕೊಂಡು ಕಛೇರಿ ಕೊಡುವಷ್ಟರ ಮಟ್ಟಿಗೆ ಪಳಗಿದ್ದವರು. ಈ ಬಹುಶ್ರುತ ವಿದುಷಿ ಗಾಯನದ ವಾದನವನ್ನೂ ಕಲಿಸುತ್ತಿದ್ದರು. ದೇಶವಿದೇಶಗಳಲ್ಲಿ ನೂರಾರು ಕಛೇರಿಗಳನ್ನೂ ನೀಡಿ ನಾದ ಜಗತ್ತಿಗೆ ತನ್ನ ಸಂಗೀತ ಸಾಮರ್ಥ್ಯವನ್ನು ತೋರಿಸಿಕೊಟ್ಟ ಅಪೂರ್ವ ಕಲಾವಿದೆ.

ಇದನ್ನೂ ಓದಿ: ಸಂಗೀತ ವಿದುಷಿ ಶ್ಯಾಮಲಾ ಜಿ.ಭಾವೆ ನಿಧನ

ಸಂಗೀತ ಶಾಲೆ ‘ಸರಸ್ವತಿ ವಿದ್ಯಾಲಯ’ದಲ್ಲಿ ಮಕ್ಕಳಿಗೆ ಯಾವ ರೀತಿಯ ಅಕ್ಕರೆ, ಆತಿಥ್ಯ ಸಿಗುತ್ತಿತ್ತೋ, ವಿದ್ಯಾಲಯಕ್ಕೆ ಹೊಂದಿಕೊಂಡಂತಿರುವ ಅವರ ಮನೆ ‘ಸ್ವರ ಸತ್ಕಾರ’ದಲ್ಲೂ ಅದೇ ರೀತಿಯ ಸತ್ಕಾರ ಮಕ್ಕಳಿಗೆ ಅತಿಥಿಗಳಿಗೆ ಸಿಗುತ್ತಿದ್ದದ್ದು ನಿಜಕ್ಕೂ ಅಚ್ಚರಿ ಎನಿಸುತ್ತದೆ.

ಸಂಗೀತ ಶಾಲೆಯಲ್ಲಿ ಎರಡೂ ಪ್ರಕಾರಗಳ ಸಂಗೀತವನ್ನು ಕಲಿಯುವ ಅವಕಾಶ ಮಕ್ಕಳಿಗೂ ದೊರಕುವಂತೆ ಮಾಡಿದ್ದು ಈ ವಿದುಷಿಯ ಹೆಚ್ಚುಗಾರಿಕೆ. ಹಜಾರದಲ್ಲಿ ಒಂದು ಕಡೆ ಮಾಯಾಮಾಳವಗೌಳ, ಶಂಕರಾಭರಣ, ಮೇಚಕಲ್ಯಾಣಿಗಳಂತಹ ಮೇಳಕರ್ತರಾಗಗಳು ಸುಶ್ರಾವ್ಯವಾಗಿ ಮೊಳಗುತ್ತಿದ್ದರೆ ಇನ್ನೊಂದು ಮಗ್ಗುಲಲ್ಲಿ ಪೂರಿಯ ಧನಾಶ್ರೀ, ಜೋಗ್‌, ಮಾರ್ವ, ಮಾಲ್‌ಕೌಂಸ್‌ಗಳಂತಹ ಹಿಂದೂಸ್ತಾನಿ ರಾಗಗಳ ಸ್ವರ ತಾನ್‌ಗಳು, ಆಕಾರ್‌ತಾನ್‌ಗಳು ಭೋರ್ಗರೆಯುತ್ತಿದ್ದವು. ಇದೊಂದು ಸಂಗೀತ ವಿದ್ಯಾರ್ಥಿಗಳ ಸುಯೋಗ ಎಂದೇ ಹೇಳಬಹುದು.

ಹಿಂದೂಸ್ತಾನಿಯ ಘಮಲು

ಈ ಉಭಯ ಗಾನವಿದುಷಿ ಶ್ಯಾಮಲಾ ಭಾವೆ ಅವರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿ ಬರೀ ಕರ್ನಾಟಕ ಶಾಸ್ತ್ರೀಯ ಸಂಗೀತವಷ್ಟೇ ವೈಭವದಿಂದ ಮೆರೆಯುತ್ತಿತ್ತು. ಹಿಂದೂಸ್ತಾನಿ ಸಂಗೀತದ ಕಂಪು ಇನ್ನೂ ಪಸರಿಸಿರದ ಕಾಲವದು. ಇದಕ್ಕೂ ಮುನ್ನ ಶ್ಯಾಮಲಾ ಅವರ ತಂದೆ ಆಚಾರ್ಯ ಗೋವಿಂದ ವಿಠಲ ಭಾವೆ ಅವರು ನವೆಂಬರ್‌ 5, 1930ರಂದು ಬೆಂಗಳೂರಿನಲ್ಲಿ ಉತ್ತರಾದಿ ಸಂಗೀತಕ್ಕೆ ಅಡಿಪಾಯ ಹಾಕಿದ್ದರು. ಶೇಷಾದ್ರಿಪುರಂನಲ್ಲಿ ತಮ್ಮ ಪತ್ನಿ ಲಕ್ಷ್ಮಿ ವಿಠಲ ಭಾವೆ ಜೊತೆಗೂಡಿ ಗುರುಕುಲ ಪದ್ಧತಿಯಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಆರಂಭಿಸಿದ್ದರು. ಆದರೆ ಆರಂಭದಲ್ಲಿ ನಿರೀಕ್ಷಿತವಾದ ಪ್ರಚಾರ ಸಿಕ್ಕಿರಲಿಲ್ಲ. ಮುಂದೆ ಶ್ಯಾಮಲಾ ಭಾವೆ ಅವರು ಈ ಗಿಡವನ್ನು ಪೋಷಿಸಿ ಹಲವು ಟಿಸಿಲು ಕೊಂಬೆಗಳನ್ನು ನಿರ್ಮಿಸಿದ ನಂತರ ಹಿಂದೂಸ್ತಾನಿ ಸಂಗೀತ ಅಕ್ಷರಶಃ ಮನೆಮಾತಾಗುವಂತಾಯಿತು.

ಉನ್ನತ ಮಟ್ಟದ ಸಂಗೀತ ಕಾರ್ಯಕ್ರಮ, ಪ್ರಾತ್ಯಕ್ಷಿಕೆಗಳು, ಶಿಬಿರಗಳು, ಉಪನ್ಯಾಸಗಳು ನಡೆಯುವಂತಾಯಿತು. ಅಲ್ಲದೆ ಸಂಗೀತ ಕ್ಷೇತ್ರದ ದಿಗ್ಗಜರೆಲ್ಲ ಬಂದು ಈ ಸಂಗೀತ ಶಾಲೆಯ ಬೆಳವಣಿಗೆಗೆ ಶ್ರಮಿಸುವಂತಾಯಿತು. ಘಟಾನುಘಟಿ ಕಲಾವಿದರಾಗಿದ್ದ ಉಸ್ತಾದ್‌ ಬಡೇ ಗುಲಾಂ ಅಲಿ ಖಾನ್‌, ಪಂ.ರವಿಶಂಕರ್‌ ಇಲ್ಲಿ ಸಂಗೀತ ಮಾರ್ಗದರ್ಶನ ನೀಡಿದ್ದು ಎಲ್ಲವೂ ದಾಖಲಾರ್ಹವೇ.

ಇದನ್ನೂ ಓದಿ: ನಾನು ಹುಟ್ಟಿದ ದಿನವೇ ‘ಸ್ವರ ಸತ್ಕಾರ’ ಗೃಹ ಪ್ರವೇಶ ಆಗಿದ್ದು: ಶ್ಯಾಮಲಾ ಜಿ.ಭಾವೆ ಸಂದರ್ಶನ


Caption

ಸಂಗೀತದ ಮನೆತನ

ಶ್ಯಾಮಲಾ ಭಾವೆ ಅವರದ್ದು ಸಂಗೀತದ್ದೇ ಮನೆತನ. 1941 ಮಾರ್ಚ್‌ 14ರಲ್ಲಿ ಹುಟ್ಟಿದ ಶ್ಯಾಮಲಾ ಭಾವೆ ತಂದೆಯವರಿಂದಲೇ ಸಂಗೀತ ಕಲಿತರು. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ತಾನಿ ಶೈಲಿ ಎರಡನ್ನೂ ಸಮಾನವಾಗಿ ಕಲಿತು ಪ್ರಬುದ್ಧತೆ ಸಾಧಿಸಿ ತಮ್ಮ 16ನೇ ವಯಸ್ಸಿಗೇ ಸಂಗೀತ ಕಛೇರಿ ನೀಡಲಾರಂಭಿಸಿದರು. ಸಂಗೀತ ಕಛೇರಿ, ಕಲಿಕೆ, ಮಾರ್ಗದರ್ಶನ ಎಲ್ಲವೂ ಜೊತೆಯಾಗಿಯೇ ಸಾಗುತ್ತಿತ್ತು. ನಮ್ಮಲ್ಲಿ ಮಾತ್ರವಲ್ಲ, ದೂರದ ಆಸ್ಟ್ರೇಲಿಯಾದಲ್ಲೂ ‘ಸರಸ್ವತಿ ಸಂಗೀತ ವಿದ್ಯಾಲಯ’ದ ಶಾಖೆ ತೆರೆದರು. ಇಲ್ಲಿಂದ ಹೋಗಿ ವಿದೇಶದಲ್ಲಿ ನೆಲೆನಿಂತ ಆಸಕ್ತರಿಗೆಲ್ಲ ಸಂಗೀತದ ಧಾರೆ ಎರೆದರು. ಒಬ್ಬ ವಿದುಷಿಯಿಂದ ಇಷ್ಟೊಂದು ಸಂಗೀತ ಕೈಂಕರ್ಯ ನಡೆದಿದೆ ಎಂದರೆ ಅದು ಸುಲಭದ ಮಾತು ಖಂಡಿತಾ ಅಲ್ಲ. ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತ, ಭಜನ್‌ಗಳನ್ನೂ ಹಾಡುತ್ತಿದ್ದ ಈ ಗಾಯಕಿ ಸಂಗೀತದ ಎಲ್ಲ ಆಯಾಮಗಳನ್ನೂ ತನ್ನದಾಗಿಸಿಕೊಂಡಿದ್ದದ್ದು ವಿಶೇಷ. 

ಅವರ ದಕ್ಷಿಣೋತ್ತರ ಎಂಬ ಆಲ್ಬಂ ಜನಪ್ರಿಯವಾಗಿತ್ತು. ಸಂಗೀತ ನ್ರತ್ಯ ಅಕಾಡೆಮಿ ಅಧ್ಯಕ್ಷೆಯಾಗಿದ್ದರು. ರಾಜ್ಯೋತ್ಸವ ಸುರಮಣಿ ಸುರಸಿಂಗಾರ್ ಪ್ರಶಸ್ತಿ ಲಭಿಸಿತ್ತು..

‘ಸಂಗೀತ ಕಲಿಯುವ ಮಕ್ಕಳಲ್ಲಿ ವಿನಯ, ಶ್ರದ್ಧೆ, ನಮ್ರತೆ, ಭಕ್ತಿ ಇರಬೇಕು. ವಿದ್ಯಾಲಯದ ಬಗ್ಗೆ ಆದರ ಇದ್ದರೆ ಮಾತ್ರ ಸಂಗೀತ ಕೈಹಿಡಿಯುತ್ತದೆ’ ಎಂಬ ಮಾತನ್ನು ಶ್ಯಾಮಲಾ ಭಾವೆ ಸದಾ ಹೇಳುತ್ತಿದ್ದರು. ಅವಿವಾಹಿತರಾಗಿದ್ದ ಇವರು ಒಂದು ಮನೆಯ ‘ಹಿರಿಯಕ್ಕ’ಳಂತೆ ಸದಾ ಪ್ರೀತಿಯ ಮಹಾಪೂರವನ್ನೇ ಹರಿಸುತ್ತಿದ್ದು, ಸಂಗೀತದ ಜೊತೆ ಜೊತೆಗೆ ಜೀವನ ಪಯಣ ನಡೆಸಿ ಇದೀಗ ಇಡೀ ನಾದಜಗತ್ತನ್ನೇ ಸ್ತಬ್ಧಗೊಳಿಸಿದ್ದು ಮಾತ್ರ ತುಂಬಲಾರದ ನಷ್ಟವೇ ಸರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು