ಮಂಗಳವಾರ, ಜೂನ್ 2, 2020
27 °C
ಪಕ್ಷಾತೀತವಾಗಿ ಹೋರಾಡದಿದ್ದರೆ ಭವಿಷ್ಯ ಕತ್ತಲುಮಯ: ಸಿದ್ದರಾಮಯ್ಯ ಎಚ್ಚರಿಕೆ

ತೆರಿಗೆ ಪಾಲು: ಕೇಂದ್ರದಿಂದ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಂದ್ರ ಸರ್ಕಾರವು ತೆರಿಗೆ ಪಾಲು ಹಾಗೂ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದು ಈ ಬಗ್ಗೆ ಪಕ್ಷಾತೀತವಾಗಿ ಧ್ವನಿ ಎತ್ತದಿದ್ದರೆ ಮುಂದಿನ ದಿನಗಳು ಕತ್ತಲೆಯಾಗಲಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಎಚ್ಚರಿಸಿದರು. 

ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘15 ನೇ ಹಣಕಾಸು ಆಯೋಗವು ನವೆಂಬರ್‌ನಲ್ಲಿ ತನ್ನ ಅಂತಿಮ ಶಿಫಾರಸುಗಳನ್ನು ಕೇಂದ್ರಕ್ಕೆ ಸಲ್ಲಿಸಲಿದೆ. ಅದಕ್ಕೆ ಮುನ್ನವೇ ದೆಹಲಿಗೆ ಹೋಗಿ ಒತ್ತಡ ಹೇರಬೇಕು. ರಾಜ್ಯದ ಹಿತದೃಷ್ಟಿಯಿಂದ ರಾಜಕೀಯವಾಗಿ ಹೋರಾಟ ನಡೆಸಬೇಕಾದ ಕಾಲ ಇದಾಗಿದೆ. ಇಲ್ಲದಿದ್ದರೆ ನಾವು–ನೀವು (ಆಡಳಿತ ಪಕ್ಷ) ಎಲ್ಲ ಸೇರಿ ರಾಜ್ಯಕ್ಕೆ ದೊಡ್ಡ ಅನ್ಯಾಯಮಾಡಿ, ಪಾಪದ ಕೆಲಸ ಮಾಡಿದಂತಾಗುತ್ತದೆ’ ಎಂದು ಹೇಳಿದರು.

‘2022–23ರಲ್ಲಿ ಕೇಂದ್ರದ ಪಾಲು ಸೇರಿ ರಾಜ್ಯದ ಸಂಪನ್ಮೂಲ ₹1.91 ಲಕ್ಷ ಕೋಟಿ ಇದ್ದರೆ, ವೆಚ್ಚ ₹2.21 ಲಕ್ಷ ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷ ರಾಜಸ್ವ ಹೆಚ್ಚುವರಿ ₹143 ಕೋಟಿ ಇದ್ದರೆ, ಇನ್ನು ಎರಡು ವರ್ಷ ಬಳಿಕ ವಿತ್ತೀಯ ಕೊರತೆ ಪ್ರಮಾಣ ₹30,743 ಕೋಟಿ ಆಗಲಿದೆ. ಹೀಗಾದಾರೆ ಅಭಿವೃದ್ಧಿಗೆ ದುಡ್ಡೇ ಇರುವುದಿಲ್ಲ. ಕೇಂದ್ರದ ಮೇಲೆ ಒತ್ತಡ ಹಾಕುವುದು ನಮ್ಮ ಮುಂದಿರುವ ಏಕೈಕ ದಾರಿ’ ಎಂದರು.

ಅನುದಾನ ಖೋತಾ: ರಾಜ್ಯದ ಬಜೆಟ್‌ ಕುರಿತು ಮಾತನಾಡಿದ ಅವರು, ಸರ್ಕಾರದ ಬದ್ಧ ವೆಚ್ಚ ಹೆಚ್ಚಾಗಿದ್ದು ಆದ್ಯತಾ ಕ್ಷೇತ್ರಗಳಿಗೆ ಅನುದಾನ ಕಡಿಮೆಯಾಗಿದೆ. ಬಜೆಟ್‌ ಅನ್ನು ಆರು ವಲಯಗಳಾಗಿ ವಿಂಗಡಿಸಿ ಅನುದಾನವನ್ನು ಎಲ್ಲೆಲ್ಲೋ ಸೇರಿ ಪಾರದರ್ಶಕತೆ ಇಲ್ಲವಾಗಿದೆ. ಯಾರಿಗೆ ಎಷ್ಟು ಅನುದಾನ ಸಿಕ್ಕಿದೆ ಎಂಬುದು ತಿಳಿಯದಂತೆ ಗೊಂದಲ ಮೂಡಿಸಲಾಗಿದೆ’ ಎಂದು ಹೇಳಿದರು.

ಹಿಂದಿನ ವರ್ಷ ಕೃಷಿಗೆ ₹20 ಸಾವಿರ ಕೋಟಿ ಕೊಟ್ಟಿದ್ದರೆ, ಮುಂದಿನ ವರ್ಷಕ್ಕೆ ₹16,472 ಕೋಟಿ ಕೊಡಲಾಗಿದೆ. ಪರಿಶಿಷ್ಟ ಜಾತಿ/ಪಂಗಡಕ್ಕೆ ಹಿಂದಿನ ವರ್ಷ ₹30 ಸಾವಿರ ಕೋಟಿ ಕೊಟ್ಟಿದ್ದರೆ ಯಡಿಯೂರಪ್ಪನವರು ₹26,131 ಕೋಟಿ ನೀಡಿದ್ದಾರೆ. ಹಿಂದುಳಿದ ವರ್ಗದ ಏಳ್ಗೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ₹2,698 ಕೋಟಿ ಕೊಡಲಾಗಿತ್ತು. ಬಜೆಟ್‌ನಲ್ಲಿ ಈ ಮೊತ್ತವನ್ನು ₹2,453ಕ್ಕೆ ಇಳಿಕೆ ಮಾಡಲಾಗಿದೆ. ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು