ಬೆಂಗಳೂರು: ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗಳಿಗೆ ತೆರಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ದುಬಾರಿ ಬೆಲೆಯ ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದ ಜಾನಕಿ, ಪೊನ್ನುರು ಮಲ್ಲಿ, ಮೇಧ ರಜಿನಿ ಹಾಗೂ ವೆಂಕಟೇಶ್ವರಮ್ಮ ಎಂಬುವರನ್ನು ಬಂಧಿಸಿ, ₹17.5 ಲಕ್ಷ ಮೌಲ್ಯದ 38 ರೇಷ್ಮೆ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆ.ಪಿ. ನಗರ ಠಾಣಾ ವ್ಯಾಪ್ತಿಯ ಸಿಲ್ಕ್ ಹೌಸ್ವೊಂದರಲ್ಲಿ ಆಗಸ್ಟ್ 25ರಂದು ಸೀರೆ ಖರೀದಿ ನೆಪದಲ್ಲಿ ಬಂದ ಆರು ಮಹಿಳೆಯರು, ದುಬಾರಿ ಬೆಲೆಯ ರೇಷ್ಮೆ ಸೀರೆ ತೋರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಸೀರೆಗಳನ್ನು ತೋರಿಸುವಾಗಲೇ ಸಿಬ್ಬಂದಿಯ ಗಮನ ಬೇರೆಡೆ ಸೆಳೆದರು. ಇಬ್ಬರು ಮಹಿಳೆಯರು ತಾವು ಧರಿಸಿದ್ದ ಒಳ ಉಡುಪಿನಲ್ಲಿ ಎಂಟು ಹೊಸ ಸೀರೆ ಅಡಗಿಸಿಟ್ಟುಕೊಂಡು ಪರಾರಿಯಾದರು.
ಬಳಿಕ ಅಂಗಡಿಯಲ್ಲಿದ್ದ ನಾಲ್ವರು ಮಹಿಳೆಯರು ಒಟ್ಟು 10 ಸೀರೆಗಳನ್ನು ಬಚ್ಚಿಟ್ಟುಕೊಂಡು ಅಂಗಡಿಯಿಂದ ಹೊರ ಹೋಗುವಾಗ ಅನುಮಾನಗೊಂಡ ಸಿಬ್ಬಂದಿ ತಡೆದು ಪರಿಶೀಲನೆ ನಡೆಸಿದ್ದರು. ಆಗ ಕಳ್ಳತನ ಮಾಡಿರುವುದು ಗೊತ್ತಾಯಿತು. ಅಂಗಡಿ ಮಾಲೀಕರ ದೂರು ಆಧರಿಸಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ಬಂಧಿಸಿದರು.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಜಯನಗರ, ಜೆ.ಪಿ. ನಗರದ ಸೀರೆ ಅಂಗಡಿಗಳಲ್ಲಿಯೂ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸೀರೆಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಸೀರೆಗಳನ್ನು ಸ್ನೇಹಿತರ ಮೂಲಕ ಕಡಿಮೆ ಬೆಲೆಗೆ ವಿಜಯವಾಡದಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ಬಂಧಿತ ಮಹಿಳೆಯರ ಸ್ನೇಹಿತನೊಬ್ಬ ಕೋರಮಂಗಲದಲ್ಲಿ ವಾಸವಿದ್ದು, 28 ರೇಷ್ಮೆ ಸೀರೆಗಳನ್ನು ತಂದು ಠಾಣೆಗೆ ಒಪ‍್ಪಿಸಿದರು. ಉಳಿದ ಸೀರೆಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
₹1 ಕೋಟಿ ವಂಚನೆ:
ತನಿಖೆ ನೋಟಿನೊಂದಿಗೆ ಬಿಳಿ ಹಾಳೆಯಿಟ್ಟು ವಂಚಿಸಿರುವ ಆರೋಪ ಸೇರಿದಂತೆ ಹಣ ವಂಚನೆಗೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ ಒಂದೇ ತಿಂಗಳಲ್ಲಿ ಮೂರು ಪ್ರಕರಣ ದಾಖಲಾಗಿದೆ. ಒಟ್ಟು ₹1 ಕೋಟಿ ವಂಚನೆ ಮಾಡಿರುವ ಬಗ್ಗೆ ದೂರು ಬಂದಿದೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ದಯಾನಂದ ತಿಳಿಸಿದರು. ಟೊಮೆಟೊ ವ್ಯಾಪಾರಿಯೊಬ್ಬರಿಗೆ ನೋಟಿನೊಂದಿಗೆ ಬಿಳಿ ಹಾಳೆಯಿಟ್ಟು ವಂಚಿಸಿರುವ ಆರೋಪದಡಿ ಪಶ್ಚಿಮ ಬಂಗಾಳದ ಇಬ್ಬರು ತರಕಾರಿ ವ್ಯಾಪಾರಿಗಳಾದ ಜಿ.ಸಂಜಯ್ ಹಾಗೂ ಜಿ.ಮುಖೇಶ್ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ‘ಇಬ್ಬರು ವ್ಯಾಪಾರಿಗಳು ಒಟ್ಟು ₹32 ಲಕ್ಷ ವಂಚಿಸಿದ್ದಾರೆ’ ಎಂದು ಕೋಲಾರದ ಆದಿತ್ಯ ಶಾ ಎಂಬುವವರು ದೂರು ನೀಡಿದ್ದರು. ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದ ಮಹಿಳೆಯ ಸಾವಿನ ತನಿಖೆಯ ಮಾಹಿತಿ ಒದಗಿಸುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬರೆದಿರುವ ಪತ್ರ ನನಗೆ ತಲುಪಿಲ್ಲ. ಪತ್ರ ತಲುಪಿದ ಬಳಿಕ ಅವರಿಗೆ ಮಾಹಿತಿ ನೀಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.