ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲ್ವರ್‌ ಜ್ಯುಬಿಲಿ ರಸ್ತೆ: ನಿತ್ಯವೂ ಗಲಿಬಿಲಿ

ಎಸ್‌ಜೆಪಿ ರಸ್ತೆಯಲ್ಲಿ ಪಾದಚಾರಿಗಳಿಗೆ ತಪ್ಪದ ಕಿರಿಕಿರಿ l ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುವ ತಳ್ಳುಗಾಡಿ
Last Updated 31 ಡಿಸೆಂಬರ್ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಸಾಲುಗಟ್ಟಿ ನಿಂತಿರುವ ವಾಹನಗಳು. ಮಾರ್ಗ ಮಧ್ಯದಲ್ಲೇ ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡು ಹೂವು, ಹಣ್ಣು, ತರಕಾರಿ ಮಾರುತ್ತಿರುವ ವ್ಯಾಪಾರಿಗಳು. ಕಿಷ್ಕಿಂಧೆಯಂತಾದ ಪ್ರದೇಶದಲ್ಲೇ ನುಸುಳಿ ಮುಂದೆ ಸಾಗಲು ಪ್ರಯತ್ನಿಸುವ ದ್ವಿಚಕ್ರ ವಾಹನ ಸವಾರರು...

ನಗರದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ (ಎಸ್‌ಜೆ‍ಪಿ) ರಸ್ತೆಯಲ್ಲಿ ಪ್ರಯಾಣಿಸುವವರಿಗೆ ನಿತ್ಯವೂ ಕಂಡುಬರುವ ದೃಶ್ಯಗಳಿವು.

ಕೆ.ಆರ್‌.ಮಾರುಕಟ್ಟೆ ವೃತ್ತದಿಂದ ಪುರಭವನ, ಕಾರ್ಪೊರೇಷನ್‌ ವೃತ್ತ, ಮೈಸೂರು ಬ್ಯಾಂಕ್ ವೃತ್ತ ಹಾಗೂ ಮೆಜೆಸ್ಟಿಕ್‌ಗೆ ಸಂಪರ್ಕ ಬೆಸೆಯುವ ಈ ರಸ್ತೆ‌ಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಸಂಚಾರ ದಟ್ಟಣೆ ಏರ್ಪಡುತ್ತದೆ. ಇದರಿಂದ ಶಾಲೆ–ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಕಾರ್ಮಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಕೆ.ಆರ್‌.ಮಾರುಕಟ್ಟೆ ಬಸ್‌ ನಿಲ್ದಾಣದಿಂದ ಹೊಸಕೋಟೆ, ನೆಲಮಂಗಲ, ಹಲಸೂರು, ಇಂದಿರಾನಗರ, ಕೆ.ಆರ್‌.ಪುರ, ಮಲ್ಯ ಆಸ್ಪತ್ರೆ, ರಿಚ್ಮಂಡ್‌ ವೃತ್ತ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಟ್ರಿನಿಟಿ ವೃತ್ತ, ಶಿವಾಜಿನಗರ, ವಿಧಾನಸೌಧ, ಆರ್‌.ಟಿ.ನಗರ, ಯಶವಂತಪುರ ಸೇರಿದಂತೆ ನಗರದ ಪ್ರಮುಖ ಭಾಗಗಳಿಗೆ ಹೋಗುವ ಬಿಎಂಟಿಸಿ ಬಸ್‌ಗಳು ಈ ಮಾರ್ಗವನ್ನೇ ಅವಲಂಬಿಸಬೇಕಾಗಿದೆ. ಬ್ಯಾಟರಾಯನಪುರ, ಮೈಸೂರು ರಸ್ತೆ ಭಾಗದಿಂದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಮೇಲ್ಸೇತುವೆ ಮೂಲಕ ಮೆಜೆಸ್ಟಿಕ್‌ ಹಾಗೂ ಇತರೆಡೆ ಹೋಗುವವರು ಸಿಲ್ವರ್‌ ಜ್ಯುಬಿಲಿ ಉದ್ಯಾನದ ಪಕ್ಕದಿಂದ ಸಾಗಿ ಈ ರಸ್ತೆಯನ್ನು ಸೇರಬೇಕಾಗುತ್ತದೆ. ಹೀಗಾಗಿ ವಾರಾಂತ್ಯದ ದಿನಗಳಲ್ಲಿ ದಟ್ಟಣೆ ದುಪ್ಪಟ್ಟಾಗುತ್ತದೆ. ಬಸ್‌, ಕಾರು, ಆಟೊಗಳಲ್ಲಿ ಸಾಗುವವರು ದಟ್ಟಣೆಯಲ್ಲಿ ಸಿಲುಕಿ ಹೈರಾಣಾಗುವುದು ಸಾಮಾನ್ಯವಾಗಿದೆ.

‘ಎಸ್‌ಜೆಪಿ ರಸ್ತೆಯ ಒಂದು ಬದಿಯಲ್ಲಿ ಗೃಹಬಳಕೆ, ಗೃಹಾಲಂಕಾರ, ಗೃಹ ನಿರ್ಮಾಣಕ್ಕೆ ಉಪಯೋಗಿಸುವ ವಸ್ತುಗಳ ಮಾರಾಟ ಮಳಿಗೆಗಳಿವೆ. ಖರೀದಿಗೆಂದು ಬರುವ ಗ್ರಾಹಕರು ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಆ ವಾಹನಗಳ ಮುಂಬದಿಯಲ್ಲೇ ವ್ಯಾಪಾರಿಗಳು ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡಿರುತ್ತಾರೆ. ರಸ್ತೆಯ ಅರ್ಧಭಾಗವನ್ನು ಅವರೇ ಆಕ್ರಮಿಸಿಕೊಂಡಿರುತ್ತಾರೆ. ಉಳಿದ 30 ಅಡಿ ಜಾಗದಲ್ಲೇ ಇತರೆ ವಾಹನಗಳು ಸಂಚರಿಸಬೇಕು. ಹೀಗಾಗಿಯೇ ದಟ್ಟಣೆ ಏರ್ಪಡುತ್ತದೆ’ ಎಂದು ನಗರ್ತರಪೇಟೆಯ ನಿವಾಸಿ ಸತೀಶ್‌ ಬೇಸರ ವ್ಯಕ್ತಪಡಿಸಿದರು.

‘ಕೆಲವೆಡೆ ರಸ್ತೆ ಹಾಳಾಗಿದೆ. ಅಲ್ಲಲ್ಲಿ ಗುಂಡಿಗಳೂ ಬಿದ್ದಿವೆ. ಹೀಗಾಗಿ ದ್ವಿಚಕ್ರವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಸ್ತೆ ಮಧ್ಯೆಯೇ ಸರಕುಸಾಗಣೆ ವಾಹನಗಳನ್ನು ನಿಲ್ಲಿಸಿಕೊಂಡು ವಿವಿಧೆಡೆಯಿಂದ ತಂದ ಸರಕುಗಳನ್ನು ಇಳಿಸುತ್ತಿರುತ್ತಾರೆ. ಪೀಠೋಪಕರಣಗಳು, ಕಬ್ಬಿಣದ ಸಾಮಾಗ್ರಿಗಳನ್ನು ಖರೀದಿಸಿದವರೂ ರಸ್ತೆಯಲ್ಲೇ ವಾಹನಗಳನ್ನು ನಿಲುಗಡೆ ಮಾಡಿ ಅವುಗಳನ್ನು ತುಂಬುತ್ತಿರುತ್ತಾರೆ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ದಟ್ಟಣೆ ಏರ್ಪಡಲು ಇದು ಕೂಡ ಮುಖ್ಯ ಕಾರಣ’ ಎಂದು ವಿವರಿಸಿದರು.

‘ಪುರಭವನ ಬಳಿ ಧರಣಿ ನಡೆದರೆ ಸಂಕಟ’

‘ಪುರಭವನ ಬಳಿ ಆಗಾಗ ಪ್ರತಿಭಟನೆ, ಧರಣಿಗಳು ನಡೆಯುತ್ತಲೇ ಇರುತ್ತವೆ. ಆ ವೇಳೆಯಲ್ಲಿ ವಿಪರೀತ ದಟ್ಟಣೆ ಏರ್ಪಡುತ್ತದೆ. ವಾಹನ ಸವಾರರು, ಬಸ್‌ ಹಾಗೂ ಆಟೊಗಳಲ್ಲಿ ಪ್ರಯಾಣಿಸುವವರ ಸಂಕಟವೂ ಹೆಚ್ಚುತ್ತದೆ’ ಎಂದು ಚಾಮರಾಜಪೇಟೆಯ ಕಾರ್ತಿಕ್‌ ಬೇಸರ ವ್ಯಕ್ತಪಡಿಸಿದರು.

‘ತುರ್ತು ಕಾರ್ಯಗಳಿಗೆ ಹೋಗುವವರು ದಟ್ಟಣೆಯಲ್ಲಿ ಸಿಲುಕಿ ತೊಂದರೆ ಅನುಭವಿಸಬೇಕಾಗುತ್ತದೆ. ಮೆಜೆಸ್ಟಿಕ್‌ ಹಾಗೂ ಜೆ.ಸಿ.ರಸ್ತೆಯಿಂದ ಬರುವ ವಾಹನಗಳು ಪುರಭವನ ಬಸ್‌ ನಿಲ್ದಾಣದ ಬಳಿ ಬಲಕ್ಕೆ ತಿರುವು ಪಡೆದು ಪೈಲ್ವಾನ್‌ ಕೃಷ್ಣಪ್ಪ ರಸ್ತೆಯಲ್ಲಿ ಸಾಗುತ್ತವೆ. ಆಗ ಎಸ್‌ಜೆಪಿ ರಸ್ತೆ ಮೂಲಕ ಬರುವವರು ಸಿಗ್ನಲ್‌ ಬಿಡುವವರೆಗೂ ಕಾಯಬೇಕು’ ಎಂದು ತಿಳಿಸಿದರು.

ರಸ್ತೆಯಲ್ಲಿ ಓಡಾಡಲು ಭಯ

‘ಎಸ್‌ಜೆಪಿ ರಸ್ತೆಯು ಸದಾ ವಾಹನಗಳಿಂದ ಗಿಜಿಗುಡುತ್ತಿರುತ್ತದೆ. ಕೆಲವರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿರುತ್ತಾರೆ. ಹೀಗಾಗಿ ಈ ಮಾರ್ಗದಲ್ಲಿ ಸಾಗುವುದಕ್ಕೆ ಭಯವಾಗುತ್ತದೆ’ ಎಂದು ಹನುಮಂತನಗರದ ನಿವಾಸಿ ಶಿವರಂಜನ್‌ ಹೇಳಿದರು.

‘ಸಂಚಾರ ಪೊಲೀಸ್‌ ಸಿಬ್ಬಂದಿ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಟೋಯಿಂಗ್‌ ಮಾಡುತ್ತಿರುತ್ತಾರೆ. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಕಟ್ಟುನಿಟ್ಟಿನ ನಿಯಮ ರೂಪಿಸಿಬೇಕು. ಹಾಗಾದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂದು ತಿಳಿಸಿದರು.

‘ಸಂಜೆ ವೇಳೆ ಈ ರಸ್ತೆಯಲ್ಲಿ ಸಾಗುವುದೇ ದೊಡ್ಡ ಸವಾಲು. ನಗರ್ತರಪೇಟೆ, ತಿಗಳರಪಾಳ್ಯ, ಎಸ್‌‍.ಪಿ (ಸದರ್‌ ಪತ್ರಪ್ಪ) ರಸ್ತೆಗೆ ಹೋಗುವವರು ಮುಖ್ಯರಸ್ತೆಯಿಂದ ಒಳರಸ್ತೆಗೆ ಏಕಾಏಕಿ ತಿರುವು ಪಡೆಯುತ್ತಾರೆ. ಆಗ ವಾಹನ ಡಿಕ್ಕಿಯಾಗಿ ಗಾಯಗಳಾಗಿರುವ ನಿದರ್ಶನಗಳೂ ಸಾಕಷ್ಟಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT