ಕೊನೆಗೂ ಸಿಕ್ಕಿಬಿದ್ದರು 45 ಕೆ.ಜಿ ಬೆಳ್ಳಿ ಕಳ್ಳರು!

7

ಕೊನೆಗೂ ಸಿಕ್ಕಿಬಿದ್ದರು 45 ಕೆ.ಜಿ ಬೆಳ್ಳಿ ಕಳ್ಳರು!

Published:
Updated:

ಬೆಂಗಳೂರು: ಕೆಲಸ ಮಾಡುತ್ತಿದ್ದ ಆಭರಣ ಮಳಿಗೆಯಲ್ಲೇ ಆರು ತಿಂಗಳಿನಿಂದ ಹಂತ ಹಂತವಾಗಿ 45 ಕೆ.ಜಿ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳು ಕಲಾಸಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಕವಿಕಾ ಲೇಔಟ್‌ನ ಆದೇಶ, ಅಂದಾನಿ ಹಾಗೂ ಕಿರಣ್ ಅಲಿಯಾಸ್ ಕಾಟು ಎಂಬುವರನ್ನು ಬಂಧಿಸಿ, ₹ 18 ಲಕ್ಷ ಮೌಲ್ಯದ ಬೆಳ್ಳಿ ಸಾಮಾನುಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.

ಮೂರು ವರ್ಷಗಳಿಂದ ಅವೆನ್ಯೂ ರಸ್ತೆಯ ‘ಅಂಜನಾದ್ರಿ ಜ್ಯುವೆಲರ್ಸ್‌’ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಅದರ ಮಾಲೀಕ ಸತೀಶ್ ಅವರ ನಂಬಿಕಸ್ಥ ನೌಕರರಾಗಿದ್ದರು. ಮಳಿಗೆಯಿಂದ ಅರ್ಧ ಕಿ.ಮೀ ದೂರದಲ್ಲೇ ಗೋದಾಮು ಹೊಂದಿದ್ದ ಸತೀಶ್, ಬೆಳ್ಳಿ ಸಾಮಾನುಗಳನ್ನು ಅಲ್ಲಿ ದಾಸ್ತಾನು ಮಾಡುತ್ತಿದ್ದರು.

ಅಂಗಡಿಯಲ್ಲಿ ಮಾಲು ಖಾಲಿಯಾದಾಗ, ಈ ನೌಕರರನ್ನೇ ಗೋದಾಮಿಗೆ ಕಳುಹಿಸಿ ಸಾಮಾನುಗಳನ್ನು ತರಿಸುತ್ತಿದ್ದರು. ಪ್ರತಿ ಬಾರಿ ಗೋದಾಮಿಗೆ ಹೋದಾಗಲೂ ಆರೋಪಿಗಳು ಒಂದೊಂದೇ ಸಾಮಾನನ್ನು ಕದ್ದು ಸಮೀಪದ ಪೊದೆಯಲ್ಲಿ ಬಚ್ಚಿಡುತ್ತಿದ್ದರು.

ರಾತ್ರಿ ಮಳಿಗೆ ಬಂದ್ ಮಾಡಿದ ಬಳಿಕ ಅಲ್ಲಿಗೆ ಹೋಗಿ, ಆ ಸಾಮಾನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದರು. ಆರು ತಿಂಗಳಿನಿಂದ ಲೆಕ್ಕ ಪರಿಶೋಧನೆ ಮಾಡಿರದ ಕಾರಣ ಮಾಲೀಕರಿಗೆ ಈ ವಿಷಯ ಗೊತ್ತಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಹೀಗೆ, 45 ಕೆ.ಜಿಯಷ್ಟು ಬೆಳ್ಳಿ ವಸ್ತುಗಳನ್ನು ಸಂಗ್ರಹಿಸಿ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪಿಗಳು, ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಹಳ್ಳಿಗಳಿಗೆ ಹೋಗಿ ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದ್ದರು. ವಿವಿಧ ಜಿಲ್ಲೆಗಳಲ್ಲಿರುವ ತಮ್ಮ ಸ್ನೇಹಿತರಿಗೆ ಕರೆ ಮಾಡಿ, ಆಭರಣ ಮಾರಾಟಕ್ಕೆ ನೆರವನ್ನೂ ಕೋರಿದ್ದರು.

**

ಸಿಕ್ಕಿಬಿದ್ದಿದ್ದು ಹೀಗೆ...

‘ಕದ್ದ ಮಾಲನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡರೆ ತೊಂದರೆ ಆಗಬಹುದೆಂದು, ಆ.12ರಂದು ಬೆಳ್ಳಿ ಸಾಮಾನುಗಳನ್ನು ಗೆಳೆಯನ ಮನೆಗೆ ಸಾಗಿಸುತ್ತಿದ್ದರು. ಸಂಜೆ 5 ಗಂಟೆ ಸುಮಾರಿಗೆ ದೊಡ್ಡಮಾವಳ್ಳಿಯ ಸುಶೀಲಾ ರಸ್ತೆಯಲ್ಲಿ ದೊಡ್ಡ ದೊಡ್ಡ ಬ್ಯಾಗ್‌ಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಇವರನ್ನು ಕಂಡು ಅನುಮಾನಗೊಂಡ ಗಸ್ತು ಸಿಬ್ಬಂದಿ, ಹತ್ತಿರ ಹೋಗಿ ವಿಚಾರಿಸಿದ್ದಾರೆ.

ಬ್ಯಾಗ್ ಪರಿಶೀಲಿಸಿದಾಗ ಬೆಳ್ಳಿ ಸಾಮಾನುಗಳು ಪತ್ತೆಯಾಗಿವೆ. ಬಳಿಕ ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !