ಕೊಲಂಬಿಯಾ ಕಳ್ಳರಿಗೆ ಸಿಮ್

7
ದಾಖಲೆಗಳ ದುರ್ಬಳಕೆ: ಅಂಗಡಿ ಮಾಲೀಕನಿಗೆ ಶೋಧ

ಕೊಲಂಬಿಯಾ ಕಳ್ಳರಿಗೆ ಸಿಮ್

Published:
Updated:

ಬೆಂಗಳೂರು: ಕೊಲಂಬಿಯಾ ಕಳ್ಳರಿಗೆ ₹ 2 ಸಾವಿರಕ್ಕೆ ಒಂದರಂತೆ ಐದು ಸಿಮ್‌ಗಳನ್ನು ಮಾರಿದ್ದ ಎಚ್‌ಆರ್‌ಬಿಆರ್‌ ಲೇಔಟ್‌ನ ಮೊಬೈಲ್ ಅಂಗಡಿ ಮಾಲೀಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಕೌಶಿಕ್ ಮುಖರ್ಜಿ ಅವರ ಮನೆ ಸೇರಿದಂತೆ ನಗರದ ಆರು ಮನೆಗಳಲ್ಲಿ ನಗ–ನಾಣ್ಯ ದೋಚಿದ್ದ ಮಹಿಳೆ ನೇತೃತ್ವದ ಐವರ ಗ್ಯಾಂಗ್‌ ಅನ್ನು ಜಯನಗರ ಪೊಲೀಸರು ಬಂಧಿಸಿದ್ದರು. ಅವರ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅವರ ಬಳಿ ಬಾಣಸವಾಡಿಯ ನರ್ಗಿಸ್, ಸೆನ್ಟ್ರಯಾನ್ ಸೆಟ್ಟು, ಪ್ರದ್ಯುಮ್ನ ಹಾಗೂ ಎಚ್‌.ರಾಜು ಎಂಬುವರ ಹೆಸರಿನ ಸಿಮ್‌ಗಳಿದ್ದವು.

ಆ ಬಗ್ಗೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ‘ಪೊಲೀಸರಿಗೆ ಸುಳಿವು ಸಿಗಬಾರದೆಂದು ಅಕ್ರಮವಾಗಿ ಸಿಮ್ ಖರೀದಿಸಲು ನಿರ್ಧರಿಸಿದ್ದೆವು. ಈ ಕುರಿತು ಎಚ್‌ಆರ್‌ಬಿಆರ್ ಲೇಔಟ್‌ನ ‘ಎ.ಎಸ್.ಮೊಬೈಲ್ ಶಾಪ್‌’ನವರನ್ನು ಸಂಪರ್ಕಿಸಿದಾಗ, ‘ಯಾರದ್ದೋ ದಾಖಲೆಗಳಲ್ಲಿ ನಿಮಗೆ ಸಿಮ್ ಕೊಡುತ್ತೇವೆ. ಆದರೆ, ಒಂದು ಸಿಮ್‌ಗೆ ₹ 2 ಸಾವಿರ ಆಗುತ್ತದೆ’ ಎಂದಿದ್ದರು. ಅದಕ್ಕೆ ಒಪ್ಪಿಕೊಂಡು, ₹ 10 ಸಾವಿರ ಕೊಟ್ಟು ಐದು ಸಿಮ್‌ಗಳನ್ನು ಖರೀದಿಸಿದ್ದೆವು’ ಎಂದು ಬಾಯ್ಬಿಟ್ಟಿದ್ದಾರೆ.

ಅಂಗಡಿ ಮುಚ್ಚಿ ಪರಾರಿ: ಕೊಲಂಬಿಯಾ ಕಳ್ಳರನ್ನು ಬಂಧಿಸಿರುವ ಬಗ್ಗೆ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ನಗರದ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ಇವರಿಗೆ ಸಿಮ್ ಕೊಟ್ಟವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಹೇಳಿದ್ದರು. ಇದರಿಂದ ಹೆದರಿದ ಮೊಬೈಲ್ ಶಾಪ್ ಮಾಲೀಕ ವಾಸೀಂ ಪಾಷಾ ಅಂಗಡಿ ಬಂದ್ ಮಾಡಿ ಪರಾರಿಯಾಗಿದ್ದಾನೆ.

‘ಭಾರತೀಯರಲ್ಲ ಎಂದು ಗೊತ್ತಿದ್ದರೂ ಹಣದಾಸೆಗೆ ಸಿಮ್‌ ಆ್ಯಕ್ಟಿವೇಟ್ ಮಾಡಿಕೊಟ್ಟಿರುವ ವಾಸೀಂ ಪಾಷಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಜಯನಗರ ಇನ್‌ಸ್ಪೆಕ್ಟರ್ ಉಮಾಮಹೇಶ್ ಬಾಣಸವಾಡಿ ಠಾಣೆಗೆ ದೂರು ಕೊಟ್ಟಿದ್ದಾರೆ.

ಅಪರಾಧ ಸಂಚು (ಐಪಿಸಿ 120ಬಿ) ಹಾಗೂ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ (420, 468) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ‘ನಮ್ಮ ದಾಖಲೆ ದುರ್ಬಳಕೆ ಮಾಡಿಕೊಂಡ ಪಾಷಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ನರ್ಗಿಸ್, ಸೆನ್ಟ್ರಯಾನ್ ಸೆಟ್ಟು, ಪ್ರದ್ಯುಮ್ನ ಹಾಗೂ ಎಚ್‌.ರಾಜು ‌ಅವರೂ ಮನವಿ ಮಾಡಿದ್ದಾರೆ ಎಂದು ಬಾಣಸವಾಡಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

2016ರ ಪ್ರಕರಣವೂ ಬಯಲು: ಸದಾಶಿವನಗರದಲ್ಲಿರುವ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅವರ ಮನೆಯಲ್ಲಿ 2016ರಲ್ಲಿ ಕಳ್ಳತನ ನಡೆದಿತ್ತು. ಆ ಕೃತ್ಯ ಎಸಗಿದ್ದೂ ಇದೇ ಗ್ಯಾಂಗ್ ಎಂಬುದು ಖಚಿತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಿಟ್ ಕೊಟ್ಟವರ ವಿಚಾರಣೆ
ಜೂನ್ ಮೊದಲ ವಾರದಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ಮನೆಗಳ ಬೀಗ ಮುರಿಯಲು ಬೇಕಾಗಿದ್ದ ಕಟಿಂಗ್ ಪ್ಲೇಯರ್, ಸ್ಕ್ರೂಡ್ರೈವರ್ ಮತ್ತಿತರ ಸಾಮಗ್ರಿಗಳ ಕಿಟ್ ಅನ್ನು ಜೆ.ಸಿ.ನಗರದಲ್ಲಿ ಖರೀದಿಸಿದ್ದರು. ಗ್ಯಾಂಗ್ ಲೀಡರ್ ಕಿಂಬರ್ಲಿ ಗುಡಿಯಾರಿಸ್, ಶಿವಾಜಿನಗರದ ಅಂಗಡಿಯೊಂದರಲ್ಲಿ ಬುರ್ಖಾ ಖರೀದಿಸಿದ್ದಳು. ಕೃತ್ಯಕ್ಕೆ ಹೋಗುವಾಗ ಅದನ್ನೇ ಧರಿಸಿಕೊಂಡು ಹೋಗುತ್ತಿದ್ದಳು. ಆ ಎಲ್ಲ ಅಂಗಡಿಗಳ ಮಾಲೀಕರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !