ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಬದಲಿ ನಿವೇಶನ–ಮತ್ತೊಂದು ಅಕ್ರಮ

ನಿವೃತ್ತ ಉಪ ಕಾರ್ಯದರ್ಶಿ– 4 ಭಾಗಿ l ತನಿಖೆಗೆ ಪೂರ್ವಾನುಮತಿ ಕೋರಿ ಪ್ರಸ್ತಾವ
Last Updated 27 ಜನವರಿ 2022, 3:27 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಮತ್ತೊಂದು ಬದಲಿ ನಿವೇಶನ ಅಕ್ರಮ ನಡೆದಿದ್ದು, ಇದರಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿಯೇ ಭಾಗಿಯಾಗಿದ್ದಾರೆ.

ಪ್ರಾಧಿಕಾರದ ಉಪಕಾರ್ಯದರ್ಶಿ– 4 ಆಗಿದ್ದ ಬಿ.ರಾಜು (ನಿವೃತ್ತರಾಗಿದ್ದಾರೆ) ಅವರು ಪ್ರತಿಷ್ಠಿತ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಯು ಕರ್ತವ್ಯದಲ್ಲಿ ಲೋಪವೆಸಗಿರುವುದು ಲಭ್ಯವಿರುವ ದಾಖಲಾತಿಗಳ ಪರಿಶೀಲನೆಯಿಂದ ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧ ವಿವರವಾದ ವಿಚಾರಣೆ/ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಕಲಂ 17(ಎ) ರನ್ವಯ ಪೂರ್ವಾನುಮತಿ ನೀಡಬೇಕು ಎಂದು ಕೋರಿ ಬಿಡಿಎ ಆಯುಕ್ತರು ನಗರಾಭಿವೃದ್ಧಿಗೆ ಇಲಾಖೆಗೆ 2022ರ ಜನವರಿ 10ರಂದು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಏನಿದು ಪ್ರಕರಣ: ರಾಜಾಜಿನಗರ ಕೈಗಾರಿಕಾ ಬಡಾವಣೆಯ ಎರಡನೇ ಹಂತದಲ್ಲಿ ಎಂ.ಮರಿಸ್ವಾಮಪ್ಪ ಎಂಬುವರಿಗೆ ಕೈಗಾರಿಕಾ ನಿವೇಶನ (ಸಂಖ್ಯೆ:19/ಬಿ) ಹಂಚಿಕೆಯಾಗಿತ್ತು. ನಂತರ ನಿವೇಶನವನ್ನು ಅವರ ಪುತ್ರಿ ಸರೋಜಾ ಅವರ ಹೆಸರಿಗೆ ವರ್ಗಾಯಿಸಲಾಗಿತ್ತು.

ಈ ನಿವೇಶನದಲ್ಲಿ ವಿದ್ಯುತ್‌ ಹೈಟೆನ್ಶನ್‌ ಮಾರ್ಗ ಹಾದುಹೋಗಿರುವ ಕಾರಣ ಸರೋಜಾ ಅವರು ಬದಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಅದೇ ಬಡಾವಣೆಯಲ್ಲಿ/ಇತರ ಬಡಾವಣೆಯಲ್ಲಿ ವ್ಯತ್ಯಾಸದ ಹಣ ಕಟ್ಟಿಸಿಕೊಂಡು ಬದಲಿ ನಿವೇಶನ ಮಂಜೂರು ಮಾಡಲು ಬದಲಿ ನಿವೇಶನ ಹಂಚಿಕೆ ಸಮಿತಿ ತೀರ್ಮಾನಿಸಿತ್ತು.

ಆದರೆ, ಬದಲಿ ನಿವೇಶನವನ್ನು ಪ್ರತಿಷ್ಠಿತ ಬಡಾವಣೆಗಳಲ್ಲಿ ಹಂಚಿಕೆ ಮಾಡಿ, ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಜತೆಗೆ, 10,740 ಚದರ ಅಡಿಗಳಷ್ಟು ಹೆಚ್ಚುವರಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಬದಲಿ ನಿವೇಶನ ಹಂಚಿಕೆಗೆ ಆಯುಕ್ತರ ಅನುಮೋದನೆಯನ್ನೂ ಪಡೆದಿರಲಿಲ್ಲ.

ಬದಲಿ ನಿವೇಶನ ಹಂಚಿಕೆಯಾದ ನಂತರ ಅವುಗಳನ್ನು ಸರೋಜಾ ಅವರು ಶುದ್ಧ ಕ್ರಯಪತ್ರ ನೋಂದಾಯಿಸಿಕೊಳ್ಳದೆಯೇ ಡಿ.ಮೋಹನ್‌ರಾಜ್‌ ಎಂಬುವವರಿಗೆ ಮಾರಾಟ ಮಾಡಿದ್ದರು. ಅವರು ನಿವೇಶನಗಳ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.

’ಪ್ರಾಧಿಕಾರದ ನಿರ್ಣಯದಂತೆ ಈ ಹಿಂದೆಯೇ ಹೈಟೆನ್ಷನ್‌ ಕೆಳಗೆ ಬರುವ ಜಮೀನಿಗೆ ಮತ್ತು ಉಪಯೋಗಿಸಿಕೊಳ್ಳಲು ಯೋಗ್ಯವಾಗಿರುವ ಜಮೀನಿಗೆ ಚದರ ಗಜಕ್ಕೆ ಇಂತಿಷ್ಟು ಎಂದು ಪ್ರತ್ಯೇಕ ದರ ನಿಗದಿಪಡಿಸಿ ಶುದ್ಧ ಕ್ರಯ ಪತ್ರ ನೋಂದಾಯಿಸಿಕೊಡಲಾಗಿದೆ. ಬದಲಿ ನಿವೇಶನ ಹಂಚಿಕೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೂ ಪ್ರಾಧಿಕಾರದ ಸಿಬ್ಬಂದಿ ಬದಲಿ ನಿವೇಶನ ಹಂಚಿಕೆ ಮಾಡಿ ಕರ್ತವ್ಯ ಲೋಪವೆಸಗಿದ್ದಾರೆ‘ ಎಂದು ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ಬಿ.ರಾಜು ಅವರು 2021ರ ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.

ನಗರಾಭಿವೃದ್ಧಿ ಇಲಾಖೆ ಮೀನಮೇಷ
ವಿವಿಧ ಅಕ್ರಮಗಳ ಭಾಗಿಯಾದ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ನೀಡುವಂತೆ ಬಿಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ 15 ದಿನಗಳು ಕಳೆದಿವೆ.

ಈ ಪ್ರಸ್ತಾವನೆಯನ್ನು ಪ್ರಾಧಿಕಾರದ ವಿಜಿಲೆನ್ಸ್‌ ಅಧಿಕಾರಿ (ಉಪ ಕಾರ್ಯದರ್ಶಿ) ಪರಿಶೀಲನೆ ನಡೆಸಿ ಸಕ್ಷಮ ಪ್ರಾಧಿಕಾರವಾದ ಮುಖ್ಯಮಂತ್ರಿಯವರ ಅನುಮೋದನೆಗೆ ಕಳುಹಿಸಬೇಕು. ಆದರೆ, 15 ದಿನಗಳು ಕಳೆದರೂ ಮುಖ್ಯಮಂತ್ರಿ ಸಚಿವಾಲಯಕ್ಕೆ ಅವರು ಕಡತ ಕಳುಹಿಸಿಲ್ಲ ಎಂದು ಮೂಲಗಳು ಹೇಳಿವೆ.

ಬಿಡಿಎನಲ್ಲಿ ಭೂಸ್ವಾಧೀನ, ಪರಿಹಾರ ಪಾವತಿ, ನಿವೇಶನಗಳ ಹಂಚಿಕೆ, ಸಗಟು ನಿವೇಶನಗಳ ಮಂಜೂರಾತಿ, ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಷನ್‌ ಸೇರಿದಂತೆ ಹಲವು ಬಗೆಯ ಅಕ್ರಮಗಳು ನಡೆದಿವೆ. ಇದರಲ್ಲಿ 10ಕ್ಕೂ ಅಧಿಕ ಕೆಎಎಸ್‌ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಪ್ರಾಧಿಕಾರದಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಕುರಿತು ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಅವರ ಸೂಚನೆಯ ಬಳಿಕವೂ ಅನುಮತಿ ನೀಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT