ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಶಾಸಕರ ಬಳಿ ಕಣ್ಣೀರಿಟ್ಟ ನಿವೇಶನದಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ‘ಸಾಲ ಮಾಡಿ ಮನೆ ಕಟ್ಟಿದ್ದೇವೆ. ಬಿಡಿಎ ಅಧಿಕಾರಿಗಳು ಒಡೆದು ಹಾಕ್ರಿದ್ರೆ ಬೀದಿಗೆ ಬರುತ್ತೇವೆ. ನೀವು ಮನಸ್ಸು ಮಾಡಿದ್ರೆ ಏನಾದರೂ ಮಾಡ್ಬಹುದು. ದುಡ್ಡು ತೆಗೆದ್ಕೊಂಡ ಭೂ ಮಾಲೀಕ ಅರಾಮವಾಗಿ ಇದ್ದಾರೆ. ದುಡ್ಡು ಕೊಟ್ಟು ನಾವು ನೆಮ್ಮದಿ ಕಳದ್ಕೊಂಡು ಇದ್ದೇವೆ ಸ್ವಾಮಿ‘.

ಹೀಗೆ ಕೆಂಪಾಪುರ ಗ್ರಾಮದಲ್ಲಿ ಶಿವರಾಮ ಕಾರಂತ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡ ಗ್ರಾಮಸ್ಥರು ತಮ್ಮ
ದುಃಖವನ್ನು ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಅವರ ಬಳಿ ತೊಡಿಕೊಂಡರು.

ಕೆಂಪಾಪುರ ಗ್ರಾಮಕ್ಕೆ ರಸ್ತೆ ಮತ್ತು ಚರಂಡಿ ಕಾಮಗಾರಿ ಉದ್ಘಾಟನೆ ಸಮಾರಂಭಕ್ಕೆ ಬಂದ ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮಹಿಳೆಯರು ಕಣ್ಣೀರು ಇಟ್ಟರು.

ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಕುಮಾರ್ ಅವರು, ’ಕೆಂಪಾಪುರ ಗ್ರಾಮದಲ್ಲಿ ಮನೆಗಳನ್ನು ಕಟ್ಟಿಕೊಂಡವರು ಬಹುತೇಕರು ಬ್ಯಾಂಕ್ ಸಾಲ ಪಡೆದವರು. ಮನೆಗಳನ್ನು ಕೆಡವಿ ಬಿಟ್ಟರೆ ಸಂಸಾರಗಳು ಬೀದಿಗೆ ಬೀಳಲಿವೆ. ನಿಮ್ಮದೇ ಸರ್ಕಾರವಿದೆ. ಮನೆಗಳನ್ನು ಕೆಡಹುವುದು ಬಿಟ್ಟು ಪರ್ಯಾಯ ಮಾರ್ಗವನ್ನು ಹುಡುಕಿ ರಕ್ಷಣೆ ನೀಡಿ‘ ಎಂದು ಮನವಿ ಸಲ್ಲಿಸಿದರು.

ಗ್ರಾಮಸ್ಥರ ಸಮಸ್ಯೆಗಳನ್ನು ಅಲಿಸಿದ ಎಸ್.ಅರ್.ವಿಶ್ವನಾಥ್, ’ಬಿಡಿಎ ವಿರುದ್ದ ಪ್ರತಿಭಟನೆ ಮಾಡಿದಾಗ ಮುಂಚೂಣಿಯಲ್ಲಿ ನಾನೇ ಇದ್ದೆ. ನಿಮ್ಮ ಕಷ್ಟಗಳ ಅರಿವು ನನಗೆ ಇದೆ. ಆದರೆ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ನಾವು ತಲೆಬಾಗಬೇಕು‘ ಎಂದರು.

’ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕೆ ಇನ್ನೆರಡು ದಿನದಲ್ಲಿ ₹4 ಸಾವಿರ ಕೋಟಿ ಅನುದಾನಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಲಿದ್ದಾರೆ. ಜಾಗ ಕಳೆದುಕೊಂಡ ರೈತರಿಗೆ ಸ್ಥಳದಲ್ಲಿಯೇ ಪರಿಹಾರದ ಪತ್ರ ವಿತರಿಸುವ ಬಗ್ಗೆ ಚಿಂತನೆ ನಡೆದಿದೆ. ರೈತರ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಅದೇ ಜಮೀನಿನಲ್ಲಿ ಸ್ಥಳವಿದ್ದರೆ ಜಾಗ ನೀಡುವ ಬಗ್ಗೆ ಬಿಡಿಎ ಆಲೋಚನೆ ಮಾಡುತ್ತಿದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು