ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಸ್ಕೈಬಸ್‌ ಪರಿಹಾರ: ಗಡ್ಕರಿ

ಎರಡು–ಮೂರು ಅಂತಸ್ತುಗಳ ಫ್ಲೈಓವರ್‌ಗಳ ನಿರ್ಮಾಣಕ್ಕೆ ಗಡ್ಕರಿ ಸಲಹೆ
Last Updated 9 ಸೆಪ್ಟೆಂಬರ್ 2022, 19:12 IST
ಅಕ್ಷರ ಗಾತ್ರ

ಬೆಂಗಳೂರು: ’ಬೆಂಗಳೂರು ನಗರದ ಸಂಚಾರ ಒತ್ತಡವನ್ನು ಕಡಿಮೆ ಮಾಡಲು ‘ಸ್ಕೈಬಸ್‌’ ವ್ಯವಸ್ಥೆಯನ್ನು ನಿರ್ಮಿಸಲು ಆದಷ್ಟು ಬೇಗ ತಾಂತ್ರಿಕ ಅಧ್ಯಯನ ನಡೆಸಿ ವರದಿ ಪಡೆಯುತ್ತೇನೆ‘ ಎಂದುಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಿಳಿಗೊಳಿಸಲು ಸಮೂಹ ತ್ವರಿತ ಸಾರಿಗೆ ವ್ಯವಸ್ಥೆಯೊಂದೇ ಪರಿಹಾರ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಈ ಕುರಿತು ಸಮಾಲೋಚನೆ ನಡೆಸಿದ್ದೇನೆ. ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಮೂಹ ತ್ವರಿತ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಫಿಲಿಪ್ಪೀನ್ಸ್‌ ಮಾದರಿಯಲ್ಲಿ ಸ್ಕೈಬಸ್‌ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಬಹುದು. ಈ ವ್ಯವಸ್ಥೆ ಜಾರಿಗೊಳಿಸಲು ಫ್ರಾನ್ಸ್‌ ಮತ್ತು ಆಸ್ಟ್ರಿಯಾದ ಎರಡು ಕಂಪನಿಗಳಿವೆ. ಇವೆರಡೂ ಸಮರ್ಥ ಕಂಪನಿಗಳೆಂದು ಹೆಸರು ಮಾಡಿವೆ. ಮುಂದಿನ ಮೂರು ತಿಂಗಳಲ್ಲಿ ತಾಂತ್ರಿಕ ವರದಿಯನ್ನು ಪಡೆಯಲು ರಾಜ್ಯ ಸರ್ಕಾರಕ್ಕೆ ನೆರವು ನೀಡುತ್ತೇನೆ’ ಎಂದು ಗಡ್ಕರಿ ಹೇಳಿದರು.

‘ಸ್ಕೈಬಸ್‌ ಅಲ್ಲದೇ, ಟ್ರಾಲಿ ಬಸ್‌ಗಳ ಸಾಧ್ಯತೆಯನ್ನೂ ರಾಜ್ಯ ಸರ್ಕಾರ
ಪರಿಶೀಲಿಸಬಹುದು. ಮೇಲೆ ಹಾದು ಹೋಗುವ ವಿದ್ಯುತ್‌ ತಂತಿಗಳಿಂದ ವಿದ್ಯುತ್ ಶಕ್ತಿಯನ್ನು ಬಳಸಿಕೊಂಡು ಬಸ್‌ಗಳು ಸಂಚರಿಸುತ್ತವೆ. ಇವು ಬ್ಯಾಟರಿ ಚಾಲಿತ ಬಸ್‌ಗಳಿಂತ ಭಿನ್ನ. ಇವುಗಳ ವೆಚ್ಚ ₹50 ಲಕ್ಷದಿಂದ ₹60 ಲಕ್ಷ ಇರುತ್ತವೆ. 88 ಜನ ಕುಳಿತುಕೊಳ್ಳಬಹುದು. ಇವು ಕಡಿಮೆ ವೆಚ್ಚದ ಪರಿಹಾರವಾಗಿವೆ’ ಎಂದು ಅವರು ಹೇಳಿದರು.

‘ನಗರದ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಗಲಗೊಳಿಸುವುದು ಈಗಿನ ಸಂದರ್ಭದಲ್ಲಿ
ಪ್ರಾಯೋಗಿಕವಲ್ಲ. ಭೂಸ್ವಾದೀನ ವೆಚ್ಚವೇ ಅತ್ಯಧಿಕವಾಗುತ್ತದೆ. ಇದರ ಬದಲಿಗೆ ಎರಡು ಅಥವಾ ಮೂರು ಅಂತಸ್ತಿನ ಫ್ಲೈಓವರ್‌ಗಳನ್ನು ನಿರ್ಮಿಸುವುದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು. ಇದಕ್ಕೆ ನಗರದಲ್ಲಿ ಭೂಸ್ವಾದೀನದ ಅಗತ್ಯ ಬೀಳುವುದಿಲ್ಲ’ ಎಂದೂ ಗಡ್ಕರಿ ವಿವರಿಸಿದರು.

ಇನ್ನು ಮುಂದೆ ನಗರದಲ್ಲಿ ಭೂಸ್ವಾದೀನ ಮಾಡಿಕೊಂಡು ರಸ್ತೆಗಳ ವಿಸ್ತೀರ್ಣ ಅಗಲ ಮಾಡುವುದಿಲ್ಲ. ಅದರ ಬದಲಿಗೆ ಈಗ ಇರುವ ರಸ್ತೆಗಳ ಮೇಲೆಯೇ ಎರಡು ಅಥವಾ ಮೂರು ಅಂತಸ್ತುಗಳ ಫ್ಲೈಓವರ್‌ಗಳನ್ನು ನಿರ್ಮಿಸುತ್ತೇವೆ. ಎರಡು ರಸ್ತೆಗಳ ಫ್ಲೈಓವರ್‌ ಜತೆಗೆ ಮೆಟ್ರೊಲೈನ್‌ ಕೂಡ ಒಳಗೊಂಡಿರುತ್ತದೆ. ಇದು ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಿಗೆ ಪರಿಹಾರವಾಗುತ್ತದೆಯೇ ಹೊರತು, ರಾಜ್ಯ ಮತ್ತು ನಗರ ರಸ್ತೆಗಳಿಗೆ ಆಗುವುದಿಲ್ಲ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT