ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ ವಿಧಾನಸಭಾ ಕ್ಷೇತ್ರ: ಕಿರಿದಾದ ರಸ್ತೆಗಳಿಂದ ಹಿರಿದಾದ ಸಮಸ್ಯೆಗಳು

ವ್ಯಾಪ್ತಿಯ ವಿ. ನಾಗೇನಹಳ್ಳಿ, ಮನೋರಾಯನಪಾಳ್ಯ, ಗಂಗೇನಹಳ್ಳಿ, ಜಯಚಾಮರಾಜೇಂದ್ರ ನಗರ ವಾರ್ಡ್‌ಗಳು
Last Updated 24 ಜನವರಿ 2020, 23:18 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಶ್ವನಾಥ ನಾಗೇನಹಳ್ಳಿ, ಮನೋರಾಯನಪಾಳ್ಯ, ಗಂಗೇನಹಳ್ಳಿ ಹಾಗೂ ಜಯಚಾಮರಾಜೇಂದ್ರ ನಗರ ವಾರ್ಡ್‌ಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಎಂದರೆ ಇಕ್ಕಟ್ಟಾದ ರಸ್ತೆಗಳು ಮತ್ತು ಅದರಿಂದ ಉಂಟಾಗುವ ಸಂಚಾರ ದಟ್ಟಣೆ. ಕಂದಾಯ ಭೂಮಿಯ ಪ್ರದೇಶಗಳೇ ಇಲ್ಲಿ ಹೆಚ್ಚಾಗಿರುವುದರಿಂದ ಬಡಾವಣೆಗಳು ಏಕರೂಪವಾಗಿಲ್ಲ. ಇತ್ತೀಚೆಗೆ ಅಭಿವೃದ್ಧಿ ಪಡಿಸಲಾಗಿರುವ ಲೇಔಟ್‌ಗಳನ್ನು ಹೊರತುಪಡಿಸಿದರೆ ಉಳಿದವುಗಳು ಯೋಜನಾಬದ್ಧವಾಗಿ ರೂಪುಗೊಂಡಿಲ್ಲ. ಒಳಚರಂಡಿ ಮತ್ತು ನೀರಿನ ಪೈಪ್‌ಲೈನ್‌ಗಳನ್ನು ಬದಲಿಸುವ ಕಾರ್ಯ ಈ ವಾರ್ಡ್‌ಗಳಲ್ಲಿ ನಡೆಯುತ್ತಿದೆ. ಹಳೆಯ ವಾರ್ಡ್‌ಗಳಾಗಿರುವುದರಿಂದ ಇಲ್ಲಿ ಮೂಲಸೌಲಭ್ಯಗಳ ಕೊರತೆ ಹೆಚ್ಚಾಗಿ ಕಾಣಿಸುವುದಿಲ್ಲ.

ವಿ. ನಾಗೇನಹಳ್ಳಿ ವಾರ್ಡ್‌– 22:ಈ ಭಾಗದಕ್ಕಪಕ್ಕದ ವಾರ್ಡ್‌ಗಳಿಗೆ ಹೋಲಿಸಿದರೆ, ಈ ವಾರ್ಡ್‌ನಲ್ಲಿ ಸಣ್ಣ ಮನೆಗಳು, ಇಕ್ಕಟ್ಟಾದ ರಸ್ತೆಗಳು ಹೆಚ್ಚಾಗಿವೆ. ಆದರೂ, ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿನ ಅತಿ ದೊಡ್ಡ ವಾರ್ಡ್‌ ಇದು. ವಿಶ್ವನಾಥ ನಾಗೇನಹಳ್ಳಿ, ಗುಡ್ಡದಹಳ್ಳಿ, ಕನಕನಗರ, ಮನೋರಾಯನಪಾಳ್ಯ ಗ್ರಾಮ, ಭುವನೇಶ್ವರಿ ನಗರ, ಪಟೇಲ ಮುನಿಯಪ್ಪ ಬಡಾವಣೆ, ಯಾಗಪ್ಪ ಬಡಾವಣೆ ಮತ್ತಿತರ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ. ಈ ವಾರ್ಡ್‌ನಲ್ಲಿ ಒಂದೇ ಒಂದು ಉದ್ಯಾನ ಕಾಣಸಿಗುವುದಿಲ್ಲ. ಸಾರ್ವಜನಿಕ ಶೌಚಾಲಯಗಳ ಕೊರತೆ ಎದ್ದು ಕಾಣುತ್ತಿದೆ.

ಇಲ್ಲಿನ ಸರ್ಕಾರಿ ಶಾಲೆಯ ಹಿಂದೆಯೇ ರೈಲು ಹಳಿ ಇದೆ. ಇದರ ನಡುವಿನ ಖಾಲಿ ಜಾಗದಲ್ಲಿ ಕಸವನ್ನು ತಂದು ಸುರಿಯ
ಲಾಗುತ್ತಿದೆ. ಇದರಿಂದ ದುರ್ವಾಸನೆ ಹೆಚ್ಚಿದ್ದು, ಇಲ್ಲಿಯೇ ಕಸದ ರಾಶಿಯನ್ನು ಸುಡುತ್ತಿರುವುದರಿಂದ ಮಕ್ಕಳ ಆರೋ
ಗ್ಯದ ಮೇಲೂ ದುಷ್ಪರಿಣಾಮವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.ಯಾವುದೇ ನಿರ್ದಿಷ್ಟ ಯೋಜನೆ ಅಥವಾ ವಿನ್ಯಾಸ
ವಿಲ್ಲದೆ ಬಡಾವಣೆಗಳು ರೂಪುಗೊಂಡಿರುವುದರಿಂದ ವಿಶಾಲ ಮತ್ತು ನೇರ ರಸ್ತೆಗಳು ಇಲ್ಲಿ ಕಡಿಮೆ. ಕಸ ಸಂಗ್ರಹ ವಾಹನಗ
ಳನ್ನು ನಿಲ್ಲಿಸಲು,ಕಸ ವಿಂಗಡಿಸಲು ನಿರ್ದಿಷ್ಟ ಸ್ಥಳ ಇಲ್ಲದ ಕಾರಣ, ಖಾಲಿ ನಿವೇಶನದಲ್ಲಿ ಕಸ ಸುರಿಯುವುದು ಸಾಮಾನ್ಯವಾಗಿದೆ.

ಮನೋರಾಯನ ಪಾಳ್ಯ ವಾರ್ಡ್‌– 33:
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿರುವ ಎರಡನೇ ಅತಿ ದೊಡ್ಡ ವಾರ್ಡ್‌ ಇದು. ಆರ್.ಟಿ. ನಗರ, ರಹಮತ್‌ ನಗರ, ಕೌಸರ್‌ ನಗರ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಉತ್ತಮ ರಸ್ತೆಗಳು ಇವೆ. ಆದರೆ, ಪಾದಚಾರಿ ಮಾರ್ಗದ ಮೇಲೆಯೇ ವಾಹನಗಳು ಸಂಚರಿಸುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಹೆಚ್ಚು ಸಂಚಾರದಟ್ಟಣೆ ಉಂಟಾಗುತ್ತಿದೆ. ರವೀಂದ್ರನಾಥ ಟ್ಯಾಗೋರ್‌ ಉದ್ಯಾನ ಇಲ್ಲಿದ್ದು, ವಿಶಾಲವಾಗಿದೆ. ಆದರೆ, ನಿರ್ವಹಣೆ ಕೊರತೆ ಇದೆ.

ಸುತ್ತ–ಮುತ್ತಲಿನ ವಾರ್ಡ್‌ಗಳಿಗೆ ಹೋಲಿಸಿದರೆ, ಇಲ್ಲಿ ಇತ್ತೀಚಿನವರೆಗೆ ಕಾವೇರಿ ನೀರಿನ ಪೂರೈಕೆ ಆಗುತ್ತಿರಲಿಲ್ಲ. ಈಗ ಬಹುತೇಕ ಮನೆಗಳು ಕಾವೇರಿ ನೀರು ಪಡೆಯುತ್ತಿದ್ದು, ಕೆಲವೇ ಪ್ರದೇಶಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ವಾಹನ ಸವಾರರು ಹಲವು ಬಾರಿ ಅಪಘಾತಕ್ಕೆ ಒಳಗಾದ ಉದಾಹರಣೆಗಳಿವೆ.

ಜೆ.ಸಿ.ನಗರ ವಾರ್ಡ್‌ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿ

ಗಂಗೇನಹಳ್ಳಿ ವಾರ್ಡ್–34:

ಹೆಬ್ಬಾಳ ಕ್ಷೇತ್ರದಲ್ಲಿ ದೊಡ್ಡ ವಾರ್ಡ್‌ ಆಗಿದ್ದ ಇದರ ವ್ಯಾಪ್ತಿ ಪುನರ್‌ವಿಂಗಡಣೆ ನಂತರ ಚಿಕ್ಕದಾಗಿದೆ. ನ್ಯಾಯಾಧೀಶರ ಕಾಲೊನಿ, ಕೆಎಚ್‌ಎಂ ಬ್ಲಾಕ್, ನೃಪತುಂಗ ಬಡಾವಣೆ, ಶಾಸಕರ ಬಡಾವಣೆ, ಗಿಡ್ಡಪ್ಪ ಬ್ಲಾಕ್, ದೇನಾ ಬ್ಯಾಂಕ್ ಕಾಲೊನಿ, ಲಕ್ಷ್ಮಿದೇವಮ್ಮ ಬ್ಲಾಕ್‌, ಗಂಗಾನಗರ ಎಕ್ಸ್‌ಟೆನ್ಷನ್‌, ಕೃಷ್ಣಪ್ಪ ಬ್ಲಾಕ್, ಮುತ್ತಪ್ಪ ಬ್ಲಾಕ್‌, ಡಿಜಿಕ್ಯುಎ ಕ್ವಾರ್ಟರ್ಸ್‌ ಮತ್ತು ಅಂಬೇಡ್ಕರ್‌ ನಗರ, ಕೆಂಪೇಗೌಡ ಕಾಲೊನಿ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ.

ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಬಹುತೇಕ ಸಣ್ಣ ರಸ್ತೆಗಳಿದ್ದು ಪಾದಚಾರಿ ಮಾರ್ಗದ ಮೇಲೆಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ ನಂತರ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಉದ್ಯಾನಗಳು ಮತ್ತು ಸರ್ಕಾರಿ, ಬಿಬಿಎಂಪಿ ಶಾಲೆಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಜೆ.ಸಿ.ನಗರ ವಾರ್ಡ್‌–46:ಬಿಬಿಎಂಪಿ (ಸರ್ಕಾರಿ) ಕಟ್ಟಡಗಳು ಹೆಚ್ಚು ತಲೆ ಎತ್ತುತ್ತಿರುವ ವಾರ್ಡ್‌ ಇದು. ನಾಲ್ಕು ವರ್ಷಗಳಲ್ಲಿ ಬಿಬಿಎಂಪಿ ಸದಸ್ಯರ ಕಚೇರಿ, ಕಂದಾಯ ಮತ್ತು ತೆರಿಗೆ ಸಂಗ್ರಹ ಕಟ್ಟಡ, ಟೈಲರಿಂಗ್‌ ಮತ್ತು ಗ್ರಂಥಾಲಯ ನಿರ್ಮಾಣವಾಗಿದ್ದು, ಈಗ ಬಿಬಿಎಂಪಿ ಶಾಲೆ ಕಟ್ಟಲಾಗುತ್ತಿದೆ. ಮುನಿರೆಡ್ಡಿ ಪಾಳ್ಯ, ಮಠದಹಳ್ಳಿ, ಮೋತಿ ನಗರ, ತಿಮ್ಮಯ್ಯ ಗಾರ್ಡನ್‌, ಆರ್.ಟಿ. ನಗರ, ದಿನ್ನೂರು ಭಾಗ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಇಲ್ಲಿನ ಬಹುತೇಕ ಬಡಾವಣೆಗಳಲ್ಲಿ ರಸ್ತೆಗಳು ಇಕ್ಕಟ್ಟಾಗಿವೆ. ಕೆಲವು ಕಡೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ವಿಳಂಬವಾಗಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ಮುಖ್ಯರಸ್ತೆಯ ಬಳಿಯೇ ಕಸವನ್ನು ಸುರಿಯುತ್ತಿರುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಒಂದು ಸಮುದಾಯ ಭವನದ ಅಗತ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಜೆ.ಸಿ.ನಗರ ವಾರ್ಡ್‌ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿ

ಸ್ಥಳೀಯರು ಏನಂತಾರೆ:

ಕಸ ವಿಲೇವಾರಿ ಸಮರ್ಪಕವಾಗಿಲ್ಲ

ವಾರ್ಡ್‌ನ ಮಧ್ಯದಲ್ಲಿ ರೈಲು ಹಳಿ ಹಾದುಹೋಗಿದೆ. ಸಾರ್ವಜನಿಕ ಶೌಚಾಲಯಗಳು ಇಲ್ಲದ ಕಾರಣ ಹಲವರು ಈ ಹಳಿಯ ಬಳಿಯಲ್ಲಿಯೇ ಶೌಚಕ್ಕೆ ತೆರಳಬೇಕಾಗಿದೆ. ಮಹಿಳೆಯರು ಮತ್ತು ಹುಡುಗಿಯರು ಈ ಸಂದರ್ಭದಲ್ಲಿ ಪೋಲಿ ಹುಡುಗರ ಕಾಟ ಎದುರಿಸುವಂತಾಗಿದೆ. ಇದಕ್ಕೆ ತಡೆ ಹಾಕಬೇಕು. ಉದ್ಯಾನಗಳನ್ನು ನಿರ್ಮಿಸಬೇಕು.
-ಸೋಮಶೇಖರ,ವಿ.ನಾಗೇನಹಳ್ಳಿ ವಾರ್ಡ್‌ ನಿವಾಸಿ

**
ಸಂಚಾರ ದಟ್ಟಣೆಯೇ ಸಮಸ್ಯೆ
ವಸತಿ ಪ್ರದೇಶದಲ್ಲಿಯೇ ಪ್ರಮುಖ ಶಾಲೆಗಳು ತಲೆ ಎತ್ತಿವೆ. ಬೆಳಿಗ್ಗೆ ಮತ್ತು ಸಂಜೆಯ ವೇಳೆ ಶಾಲಾ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಶಬ್ದ ಮಾಲಿನ್ಯವೂ ಹೆಚ್ಚಾಗಿರುತ್ತದೆ. ದೊಡ್ಡ ಉದ್ಯಾನಗಳು ಇದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ನೀರು ಅಥವಾ ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಮುಗಿದ ನಂತರ ರಸ್ತೆಗಳನ್ನು ಸರಿಯಾಗಿ ದುರಸ್ತಿ ಮಾಡಿಸಬೇಕು.
-ಶ್ರೀನಿವಾಸ್‌,ಮನೋರಾಯನಪಾಳ್ಯ ವಾರ್ಡ್‌ ನಿವಾಸಿ

**
ದುರಸ್ತಿಗೊಳ್ಳದ ರಸ್ತೆಗಳು
ನೀರಿನ ಪೈಪ್‌ಲೈನ್‌ 10–12 ಅಡಿ ಆಳದಲ್ಲಿದೆ. ಅವುಗಳನ್ನು ಬದಲಿಸುವ ಸಂದರ್ಭದಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಸರಿಯಾಗಿ ದುರಸ್ತಿಗೊಳಿಸಿಲ್ಲ. ವಾಹನದಲ್ಲಿ ಸಂಚರಿಸುವಾಗ ವಿಚಿತ್ರ ಶಬ್ದ ಬರುತ್ತದೆ. ರಸ್ತೆಗಳು ಕುಸಿಯುವ ಭೀತಿ ಇದೆ. ಚೇಂಬರ್‌ಗಳನ್ನು ಕೂಡ ನೆಲದ ಮಟ್ಟಕ್ಕೆ ಎತ್ತರಿಸಬೇಕು. ಬಯಲು ಪ್ರದೇಶಗಳಲ್ಲಿ ಕಸ ಸುರಿಯಲಾಗುತ್ತಿರುವುದರಿಂದ ಸುತ್ತ–ಮುತ್ತ ವಾಸವಿರುವವರಿಗೆ ತೊಂದರೆಯಾಗುತ್ತಿದೆ.
-ಚಂದ್ರಪ್ರಕಾಶ್‌,ಗಂಗೇನಹಳ್ಳಿ ವಾರ್ಡ್‌ ನಿವಾಸಿ

**
ವೀಲಿಂಗ್‌ ಹಾವಳಿ ತಡೆಯಬೇಕು
ದಿನ್ನೂರು ಮುಖ್ಯರಸ್ತೆ ಮತ್ತು ದೇವೇಗೌಡ ರಸ್ತೆಯಲ್ಲಿ ಪಡ್ಡೆ ಹುಡುಗರು ಬೆಳಗಿನ ಜಾವ ಮತ್ತು ರಾತ್ರಿ ವೀಲಿಂಗ್‌ ಮಾಡುತ್ತಾರೆ. ಇದರಿಂದ ಸಂಭವಿಸಿದ ಅಪಘಾತಗಳಲ್ಲಿ ಸಾವು ಕೂಡ ಸಂಭವಿಸಿದೆ. ಆದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ, ವಿವಿಧ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ದುರಸ್ತಿ ಮಾಡುತ್ತಿಲ್ಲ. ಕಸ ಸಂಗ್ರಹ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ.
-ನಾರಾಯಣಸ್ವಾಮಿ,ಜೆ.ಸಿ. ನಗರ ವಾರ್ಡ್‌ ನಿವಾಸಿ

**
ಪಾಲಿಕೆ ಸದಸ್ಯರು ಹೇಳೋದೇನು?

‘ಉದ್ಯಾನಕ್ಕೆ ಜಾಗದ ಕೊರತೆ’

ಒಂದೂ ಉದ್ಯಾನಗಳಿಲ್ಲದಿರುವುದು ನಮ್ಮ ವಾರ್ಡ್‌ನ ದೊಡ್ಡ ಸಮಸ್ಯೆ. ಆದರೆ, ಸರ್ಕಾರಿ ಭೂಮಿ ಇಲ್ಲದಿರುವುದರಿಂದ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಪಾದಚಾರಿ ಮಾರ್ಗದ ಮೇಲೆಯೇ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಅನಿವಾರ್ಯ ಇದೆ. ಕಸ ಸಂಗ್ರಹದ ವಾಹನಗಳಿಗೆ ನಿರ್ದಿಷ್ಟ ಸ್ಥಳ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಈಗ, ₹ 30 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗಲಿದೆ.
-ಎನ್. ರಾಜಶೇಖರ್,ವಿ. ನಾಗೇನಹಳ್ಳಿ ವಾರ್ಡ್‌ ಸದಸ್ಯ

**
‘ಹೈಟೆಕ್‌ ರಸ್ತೆ–ಉದ್ಯಾನ ಅಭಿವೃದ್ಧಿ’
ರವೀಂದ್ರನಾಥ ಟ್ಯಾಗೋರ್‌ ಉದ್ಯಾನ ಸೇರಿದಂತೆ ವಾರ್ಡ್‌ ವ್ಯಾಪ್ತಿಯ ಪ್ರಮುಖ ಉದ್ಯಾನಗಳಿಗೆ ಹೈಟೆಕ್‌ ಸ್ಪರ್ಶ ನೀಡಲಾಗುವುದು. ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೇ ನೀಡಲಾಗುವುದು ಮತ್ತು ಸಿಸಿಟಿವಿ ಕ್ಯಾಮೆರಾ ಒದಗಿಸಲಾಗುವುದು. ಅತ್ಯಾಧುನಿಕ ವ್ಯಾಯಾಮ ಉಪಕರಣಗಳು ಹಾಗೂ ಆಟಿಕೆಗಳನ್ನು ಉದ್ಯಾನಗಳಲ್ಲಿ ಒದಗಿಸಲಾಗುವುದು. ಅಲ್ಲದೆ, ಚರ್ಚ್‌ಸ್ಟ್ರೀಟ್‌ ಮಾದರಿಯಲ್ಲಿ ಆರ್.ಟಿ. ನಗರ ಪೊಲೀಸ್‌ ಠಾಣೆ ಬಳಿಯ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ನಾಲ್ಕು ವರ್ಷಗಳಲ್ಲಿ ಒಟ್ಟು ₹50 ಕೋಟಿ ಅನುದಾನ ದೊರೆತಿದ್ದು, ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
-ಅಬ್ದುಲ್‌ ವಾಜಿದ್‌,ಮನೋರಾಯನಪಾಳ್ಯ ವಾರ್ಡ್‌ ಸದಸ್ಯ

**
‘ಕಡಿಮೆ ಅನುದಾನದಿಂದಲೇ ಅಭಿವೃದ್ಧಿ’
ಅಕ್ಕ–ಪಕ್ಕದ ವಾರ್ಡ್‌ಗಳಿಗೆ ಹೋಲಿಸಿದರೆ ನನ್ನ ವಾರ್ಡ್‌ಗೆ ನೀಡಿದ ಅನುದಾನ ಕಡಿಮೆ. ವಾರ್ಡ್‌ ವಿಶೇಷ ಅನುದಾನದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ₹2.5 ಕೋಟಿ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಮಾಡಲಾಗುತ್ತಿದೆ. ಜಲಮಂಡಳಿಯವರು ಅಗೆದ ರಸ್ತೆಯನ್ನು ದುರಸ್ತಿ ಕಾರ್ಯ ಮಾಡದ ಕಾರಣ ತೊಂದರೆಯಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಂಚಾರ ಪೊಲೀಸರ ಜೊತೆಗೆ ಹಲವು ಬಾರಿ ಸಭೆ ನಡೆಸಿದರೂ ಸಮಸ್ಯೆ ಪರಿಹಾರವಾಗಿಲ್ಲ. ಅರ್ಹರಿಗೆ ಒಂಟಿ ಮನೆಗಳನ್ನು ಒದಗಿಸುವ ಕಾರ್ಯ ನಡೆಯುತ್ತಿದೆ. ವಾರ್ಡ್‌ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
-ಎಂ. ನಾಗರಾಜ,ಗಂಗೇನಹಳ್ಳಿ ವಾರ್ಡ್‌ ಸದಸ್ಯ

‘₹40 ಕೋಟಿ ಮೊತ್ತದ ಕಾಮಗಾರಿ’

**
ನಾಲ್ಕು ವರ್ಷಗಳಲ್ಲಿ ಒಟ್ಟು ₹40 ಕೋಟಿ ಅನುದಾನ ವಾರ್ಡ್‌ಗೆ ಸಿಕ್ಕಿದೆ. ಟೆಂಡರ್‌ ಪ್ರಕ್ರಿಯೆ ಎಲ್ಲ ಮುಗಿದಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಸಮುದಾಯ ಭವನ ನಿರ್ಮಿಸುವ ಯೋಜನೆಯೂ ಇದೆ. ಆರು ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಯೋಗ ಕೇಂದ್ರ ನಿರ್ಮಾಣ ಮಾಡಲಾಗಿದೆ. ಪಡ್ಡೆ ಹುಡುಗರ ವೀಲಿಂಗ್‌ನಿಂದ ಸಮಸ್ಯೆಯಾಗುತ್ತಿದೆ ಎಂದು ಹಲವರು ದೂರು ನೀಡಿದ್ದಾರೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ.
ಕೆ. ಗಣೇಶರಾವ್‌ ಮಾನೆ,ಜೆ.ಸಿ. ನಗರ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT