ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನ ಗತಿಯ ಕೆಲಸ– ಆಡಳಿತಾಧಿಕಾರಿ ಅಸಮಾಧಾನ

ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳ ಪರಿಶೀಲನೆ
Last Updated 24 ಡಿಸೆಂಬರ್ 2020, 20:19 IST
ಅಕ್ಷರ ಗಾತ್ರ

ಬೆಂಗಳೂರು: ಡಿಕನ್ಸನ್ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಅಸಮಾಧಾನ ವ್ಯಕ್ತಪಡಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್‌ಸಿಟಿ ಸಂಸ್ಥೆಯು ಕೈಗೊಂಡಿರುವ ಕಾಮಗಾರಿಗಳನ್ನು ಅವರು ಗುರುವಾರ ಪರಿಶೀಲನೆ ನಡೆಸಿದರು. ಡಿಕನ್ಸ್‌ಸನ್‌ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂ, ಕೆಪಿಟಿಸಿಎಲ್ ಸಂಸ್ಥೆಗಳ ಒಎಫ್‌ಸಿ ಕೇಬಲ್‌ಗಳಿವೆ. ಅವುಗಳನ್ನು ಸ್ಥಳಾಂತರ ಮಾಡಿ ಕಾಂಕ್ರೀಟ್‌ ಕೊಳವೆಮಾರ್ಗವನ್ನು ನಿರ್ಮಿಸಬೇಕಿದೆ. ಹೆಚ್ಚು ಕೇಬಲ್‌ಗಳು ಇಲ್ಲಿ ಇರುವುದರಿಂದ ಕೆಲಸ ತಡವಾಗುತ್ತಿದೆ. ಸ್ಥಳಾಂತರವಾದ ಕೂಡಲೆ ತ್ವರಿತವಾಗಿ ಪೂರ್ಣಗೊಳಿಸಲಾಗುವುದು’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಈ ಉತ್ತರದಿಂದ ಸಮಾಧಾನಗೊಳ್ಳದ ಆಡಳಿತಾಧಿಕಾರಿ, ‘ತೊಡಕುಗಳನ್ನು ಕೂಡಲೆ ಬಗೆಹರಿಸಿಕೊಂಡು ಕೆಲಸ ಮಾಡಬೇಕು. ಕಾಮಗಾರಿ ನಡೆಯುವ ವೇಳೆ ಸುರಕ್ಷಾ ಕ್ರಮಗಳನ್ನು ಕೈಗೊಂಡು ಸರಿಯಾಗಿ ಬ್ಯಾರಿಕೇಡ್ ಅಳವಡಿಸಿಕೊಳ್ಳಬೇಕು. ರಸ್ತೆ ಬದಿಯಿರುವ ಮಣ್ಣಿನ ರಾಶಿ ತೆರವುಗೊಳಿಸಬೇಕು’ ಎಂದು ಸೂಚನೆ ನೀಡಿದರು.

‘ಮಳೆ ನೀರುಗಾಲುವೆ ಹಾಗೂ ಒಎಫ್‌ಸಿ ಕೇಬಲ್‌ಗಳ ಕಾಂಕ್ರೀಟ್‌ ಡಕ್ಟ್ ನಿರ್ಮಾಣ ಕಾಮಗಾರಿ ಮುಗಿದಿರುವ ಕಡೆ ಕುಡಿಯುವ ನೀರಿನ ಕೊಳವೆಮಾರ್ಗ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಅದನ್ನು ತ್ವರಿತವಾಗಿ ಪೂರ್ಣಗೊಳಿಸಿ ಮತ್ತೊಂದು ಭಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಇವೆಲ್ಲವೂ ನಗರದಲ್ಲಿರುವ ಪ್ರಮುಖ ರಸ್ತೆಗಳು. ಹಾಗಾಗಿ ಆದಷ್ಟು ತ್ವರಿತವಾಗಿ ಕಾಮಗಾರಿ ಮುಗಿಸಬೇಕು’ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್‌ಫಾರ್ಮರ್‌ ಇರುವುದು ಕಂಡ ಆಡಳಿತಾಧಿಕಾರಿ ಅದನ್ನು ಬೇರೆಡೆ ಸ್ಥಳಾಂತರ ಮಾಡಲು ತಿಳಿಸಿದರು.

ಕಾಮರಾಜ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ಆಡಳಿತಾಧಿಕಾರಿ ಪರಿಶೀಲಿಸಿದರು. ಇಲ್ಲಿ ಪಾದಚಾರಿ ಮಾರ್ಗದ ಕಾಮಗಾರಿ ಬಹುತೇಕ ಮುಗಿದಿದೆ. ‘ಬಾಕಿ ಕಾಮಗಾರಿಗಳನ್ನೂ ತ್ವರಿತವಾಗಿ ಮುಗಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

‘ಇಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಬೇಕಿದೆ. ಈ ರಸ್ತೆಯ ಒಂದು ಪಾರ್ಶ್ವದಲ್ಲಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯ ಜನವರಿಯಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಜಲಮಂಡಳಿಯ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಕತ್ತರಿಸಿರುವ ಭಾಗದಲ್ಲಿ ತಾತ್ಕಾಲಿಕವಾಗಿ ಡಾಂಬರ್ ಹಾಕಲಾಗಿತ್ತು.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಆಡಳಿತಾಧಿಕಾರಿ, ‘ಈ ರೀತಿ ಕೆಲಸ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದೇ ರೀತಿ ಎಲ್ಲಾ ಕಡೆ ತಾತ್ಕಾಲಿಕ ಕಾಮಗಾರಿ ನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು. ರಾಜಭವನ ರಸ್ತೆ, ನೆಹರೂ ತಾರಾಲಯ ರಸ್ತೆಗಳಲ್ಲೂ ಕಾಮಗಾರಿ ಪರಿಶೀಲನೆ ನಡೆಸಿದರು.

‘ವಿಳಂಬ ಮಾಡಿದರೆ ದಂಡ’
‘ಜನವರಿ ತಿಂಗಳಲ್ಲಿ 10 ರಸ್ತೆಗಳು ಸೇರಿ ಉಳಿದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಯೋಜನೆ ರೂಪಿಸಿಕೊಂಡಿದ್ದಾರೆ. ವಿಳಂಬ ಮಾಡಿದರೆ ನೋಟಿಸ್ ನೀಡಿ ದಂಡ ವಿಧಿಸಲಾಗುತ್ತದೆ’ ಎಂದು ಗೌರವ ಗುಪ್ತ ಹೇಳಿದರು.

‘ನಗರದ 36 ಪ್ರಮುಖ ರಸ್ತೆಗಳನ್ನು ಬೆಂಗಳೂರು ಸ್ಮಾರ್ಟ್‌ಸಿಟಿ ಸಂಸ್ಥೆ ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕಾಮಗಾರಿ ವಿಳಂಬವಾಗಿರುವ ಬಗ್ಗೆ ದೂರುಗಳು ಬಂದ ಕಾರಣ ತಪಾಸಣೆ ನಡೆಸಿದ್ದೇನೆ. ನಾಗರಿಕರಿಗೆ ತೊಂದರೆ ಆಗದಂತೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ರಾಜಭವನ ರಸ್ತೆ, ರೇಸ್ ಕೋರ್ಸ್ ರಸ್ತೆ, ನೆಹರೂ ತಾರಾಲಯ ರಸ್ತೆ ಕಾಮಗಾರಿಗಳು ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT