ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ಕಾಮಗಾರಿ: ಪ್ರಮುಖ ರಸ್ತೆಗಳು ಜನವರಿಗೆ ಸಿದ್ಧ

ಕಾಮಗಾರಿ ಪರಿಶೀಲಿಸಿದ ಸಚಿವ ಬೈರತಿ ಬಸವರಾಜು * ವಿಳಂಬ ಧೋರಣೆಗೆ ಅಸಮಾಧಾನ
Last Updated 20 ನವೆಂಬರ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದಲ್ಲಿ ಕೈಗೊಂಡಿರುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು 2021ರ ಜನವರಿ ಒಳಗೆ ಪೂರ್ಣಗೊಳಿಸಲಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತಿಳಿಸಿದರು.

ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಅವರು ಶುಕ್ರವಾರ ಪರಿಶೀಲಿಸಿದರು. ಪ್ರಮುಖ ರಸ್ತೆಗಳ ಕಾಮಗಾರಿ ವಿಳಂಬವಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಈ ಯೋಜನೆಯ ಮೊದಲ ಹಂತದಲ್ಲಿ ಏಳು ಪ್ಯಾಕೇಜ್‌ಗಳನ್ನು ₹ 271 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಮಗಾರಿಗಳು 2021ರ ಜನವರಿಗೆ ಪೂರ್ಣಗೊಳ್ಳಲಿವೆ.ಮೊದಲ ಹಂತದ ಎಲ್ಲ ಕಾಮಗಾರಿಗಳು 2021ರ ಮಾರ್ಚ್‌ಗೆ ಮುಗಿಯಲಿವೆ. ಎರಡನೇ ಹಂತದಲ್ಲಿ ಆರು ಪ್ಯಾಕೇಜ್‌ಗಳ ಅನುಷ್ಠಾನಕ್ಕೆ ಇನ್ನೂ ಕಾಲಾವಕಾಶ ಇದೆ’ ಎಂದು ತಿಳಿಸಿದರು.

ಜವಾಹರಲಾಲ್ ನೆಹರು ತಾರಾಲಯ ರಸ್ತೆ ಮತ್ತು ರಾಜಭವನ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ, ಪಾದಚಾರಿ ಮಾರ್ಗದಲ್ಲಿ ಕರ್ಬ್ ಸ್ಟೋನ್ಸ್ ಅಳವಡಿಸಬೇಕು. ಕಾಂಕ್ರೀಟ್‌ ಚೇಂಬರ್‌ಗಳನ್ನು ಸರಿಯಾಗಿ ಮುಚ್ಚಬೇಕು. ಪಾದಚಾರಿ ಮಾರ್ಗದಲ್ಲಿರುವ ಮರಗಳ ಸುತ್ತಲು ನೀರು ನಿಲ್ಲಲು ಸರಿಯಾದ ವ್ಯವಸ್ಥೆ ಮಾಡಬೇಕು. ಬೀದಿ ದೀಪಗಳನ್ನು ಸಮರ್ಪಕವಾಗಿ ಅಳವಡಿಸಬೇಕು. ಪಾದಚಾರಿ ಮಾರ್ಗದಲ್ಲಿರುವ ತ್ಯಾಜ್ಯ ಮತ್ತು ಮಣ್ಣಿನ ರಾಶಿಯನ್ನು ಕೂಡಲೆ ತೆಗೆಯಬೇಕು ಎಂದು ಗುತ್ತಿಗೆದಾರರಿಗೆ ಸಚಿವರು ಸೂಚನೆ ನೀಡಿದರು.

‘ರೇಸ್‌ ಕೋರ್ಸ್‌ ರಸ್ತೆಯನ್ನು ಡಿ. 15ರ ಒಳಗೆ ಪೂರ್ಣಗೊಳಿಸಲು ತಾಕೀತು ಮಾಡಿದ್ದೇನೆ. ರಾಜಭವನ ರಸ್ತೆ, ಅದಕ್ಕೆ ಹೊಂದಿಕೊಂಡಂತಿರುವ ಪ್ಲಾನೆಟೋರಿಯಂ ರಸ್ತೆಗಳ ಕಾಮಗಾರಿಗಳು ಬೆಸ್ಕಾಂ, ಜಲಮಂಡಳಿ ಜೊತೆ ಹೊಂದಾಣಿಕೆ ಕೊರತೆಯಿಂದಾಗಿ ವಿಳಂಬವಾಗಿದ್ದವು. ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯರು ಸಂಚರಿಸುವ ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕು.ಜನವರಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನಕ್ಕೆ ಮುಂಚೆ ಈ ರಸ್ತೆಗಳು ಉದ್ಘಾಟನೆಗೆ ಸಜ್ಜಾಗಬೇಕು ಎಂದು ಸೂಚಿಸಿದ್ದೇನೆ’ ಎಂದರು.

ಇನ್ಫೆಂಟ್ರಿ ರಸ್ತೆಯ ಇಕ್ಕೆಲಗಳಲ್ಲೂ ಕಾಮಗಾರಿ ಸಲುವಾಗಿ ಅಗೆದು ಹಾಕಿದ್ದಾರೆ. ಕಮರ್ಷಿಯಲ್‌ ಸ್ಟ್ರೀಟ್‌ ಸದಾ ಜನಜಂಗುಳಿ ಇರುವ ಪ್ರದೇಶ. ಇಲ್ಲಿ ಖರೀದಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ಇಲ್ಲೂ ಅವ್ಯವಸ್ಥೆ ಸೃಷ್ಟಿಯಾಗಿದೆ. ಇಲ್ಲಿನ ವ್ಯಾಪಾರಿಗಳ ಸಂಘಟನೆಯದ ಪದಾಧಿಕಾರಿಗಳೂ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

‘ಹೆಚ್ಚುವರಿ ಕಾರ್ಮಿಕರನ್ನು ಬಳಸಿ ಈ ಕಾಮಗಾರಿಗಳನ್ನು 10 ದಿನಗಳ ಒಳಗೆ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಇದಕ್ಕೆ ಗುತ್ತಿಗೆದಾರರೂ ಒಪ್ಪಿದ್ದಾರೆ’ ಎಂದು ಸಚಿವರು ತಿಳಿಸಿದರು.

ಹಲಸೂರು ರಸ್ತೆ, ಸೇಂಟ್‌ ಜಾನ್ಸ್‌ ರಸ್ತೆ, ಚರ್ಚ್‌ ರಸ್ತೆ, ಮಿಲ್ಲರ್ಸ್‌ ರಸ್ತೆ, ಕಂಟೋನ್ಮೆಂಟ್‌ ರಸ್ತೆ, ಮೆಕ್‌ಗ್ರಾತ್‌ ರಸ್ತೆ, ರಾಜಾರಾಮ್‌ ಮೋಹನ್‌ರಾಯ್‌ ರಸ್ತೆಗಳ ಕಾಮಗಾರಿಗಳನ್ನೂ ಸಚಿವರು ಪರಿಶೀಲಿಸಿದರು.

ಗುಣಮಟ್ಟದಲ್ಲಿ ರಾಜಿ ಇಲ್ಲ: ‘ಸ್ಮಾರ್ಟ್‌ ಸಿಟಿ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕಾರ್ಯಾದೇಶದಲ್ಲಿರುವ ಮಾನದಂಡಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಕಳಪೆ ಕಾಮಗಾರಿ ಆದರೆ ಅಧಿಕಾರಿಗಳೇ ಹೊಣೆ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಲ್ಯಾವೆಲ್ಲೆ ರಸ್ತೆಯಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಮೂರು ತಂಡಗಳನ್ನು ರಚಿಸಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ. ರಸ್ತೆ ಇಕ್ಕೆಲದ ಮಣ್ಣಿನ ರಾಶಿಯನ್ನು ಟ್ರ‍್ಯಾಕ್ಟರ್ ಮೂಲಕ ರಾತ್ರಿ ವೇಳೆ ತೆರವು ಮಾಡಿಸಲಾಗುವುದು ಎಂದು ಮುಖ್ಯ ಎಂಜಿನಿಯರ್ ಮಾಹಿತಿ ನೀಡಿದರು.

-0-

ಕ್ರಿಮಿನಲ್‌ ಮೊಕದ್ದಮೆಗೆ ಸೂಚನೆ

‘ಡಿಕನ್ಸನ್‌ ರಸ್ತೆ ಕಾಮಗಾರಿಯ ಗುತ್ತಿಗೆದಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಅವರಿಗೆ ನೀಡಿರುವ ಗುತ್ತಿಗೆ ರದ್ದುಪಡಿಸಲು ಸೂಚನೆ ನೀಡಿದ್ದೇನೆ’ ಎಂದು ಬೈರತಿ ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT