ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌ ಮಾರ್ಕೆಟ್‌’ ಸದ್ಯಕ್ಕಂತೂ ಆಗಲ್ಲ

ಮೀನಿನ ಮಾರುಕಟ್ಟೆಯೂ ಆರಂಭವಾಗಿಲ್ಲ; ಸಮನ್ವಯ ಸಾಧಿಸಲಾಗದೆ ಕುಂಟುತ್ತಿವೆ ಕಾಮಗಾರಿಗಳು
Last Updated 23 ಆಗಸ್ಟ್ 2022, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಾರ್ಟ್‌ ಸಿಟಿ’ ಯೋಜನೆಯ ಐಕಾನಿಕ್‌ ಕಾಮಗಾರಿಗಳಲ್ಲಿ ಒಂದಾದ ಕೆ.ಆರ್. ಮಾರುಕಟ್ಟೆ ಮರು ಅಭಿವೃದ್ಧಿ ಇನ್ನೊಂದು ವರ್ಷ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳಿಲ್ಲ.

‘ಮೀಟ್‌ ಮಾರ್ಕೆಟ್‌’ ಕೆಲಸಕ್ಕೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ಇನ್ನು ಅತ್ಯಾಧುನಿಕವಾಗಿ ನಿರ್ಮಾಣವಾಗಿರುವ ಸಬ್‌ವೇಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಕೆ.ಆರ್. ಮಾರುಕಟ್ಟೆ ಕೇಂದ್ರ ಕಟ್ಟಡವನ್ನು ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ₹34.67ಕೋಟಿ ವೆಚ್ಚದಲ್ಲಿ ಮರು ಅಭಿವೃದ್ಧಿ ಮಾಡುವ ಉದ್ದೇಶವಿದೆ. ಈ ಕಾಮಗಾರಿ ಆರಂಭವಾಗಿ ವರ್ಷಗಳೇ ಕಳೆದರೂ ನಿರೀಕ್ಷಿತ ಹಂತ ತಲುಪಿಲ್ಲ. ವ್ಯಾಪಾರಿಗಳೊಂದಿಗಿನ ಸಮನ್ವಯ ಸಾಧಿಸಲಾಗದೆ ಈ ಕೆಲಸ ಕುಂಟುತ್ತಲೇ ಸಾಗಿದೆ. ಅಷ್ಟೇ ಅಲ್ಲ, ಆಗಾಗ್ಗೆ ಕಾಮಗಾರಿಗಳ ಸ್ವರೂಪವೂ ಬದಲಾಗುತ್ತಿದೆ.

ಮೈಸೂರಿನ ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್‌ ಅವರು 1928ರಲ್ಲಿ ಕೆ.ಆರ್‌. ಮಾರುಕಟ್ಟೆ ಸ್ಥಾಪಿಸಿದ್ದರು. ಈ ಮಾರುಕಟ್ಟೆ ಸಾಕಷ್ಟು ಬಾರಿ ಮರು ಅಭಿವೃದ್ಧಿಗೊಂಡಿದೆ. ಇಷ್ಟಾದರೂ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂಬ ಉದ್ದೇಶದೊಂದಿಗೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. 168 ನಾಲ್ಕು ಚಕ್ರ ಹಾಗೂ 279 ದ್ವಿಚಕ್ರ ವಾಹನಗಳಿಗೆ ನಿಲುಗಡೆ ಕಲ್ಪಿಸುವ ತಾಣದೊಂದಿಗೆ ಜಾಗತಿಕ ಸ್ನೇಹಿ ಕಟ್ಟಡವನ್ನಾಗಿ ನಿರ್ಮಿಸುವ ಯೋಜನೆ ಇದೆ. ಲಿಫ್ಟ್‌, ಶೌಚಾಲಯ, ಸುವ್ಯವಸ್ಥಿತ ವ್ಯಾಪಾರ ಮಳಿಗೆ, ಲೋಡ್‌–ಅನ್‌ಲೋಡ್‌ ಬೇ ಒದಗಿಸುವ ಯೋಜನೆ ಇದು. ಆದರೆ, ಇವೆಲ್ಲ ಕಾರ್ಯಗತವಾಗಲು ಸಾಕಷ್ಟು ಸಮಯಬೇಕು. ಸ್ಥಳೀಯರ ವಿರೋಧ ಹಾಗೂ ಅರಿವಿನ ಕೊರತೆ ಇದೆ. ಸಮನ್ವಯ ಸಾಧಿಸಲು ಬಿಬಿಎಂಪಿ ಹಾಗೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮಾತುಕತೆ ನಡೆಸುತ್ತಲೇ ಇದ್ದಾರೆ. ಸುರಂಗ ಮಾರ್ಗದ ಕಮಾನುಗಳು ಕಾಣುವುದು ಬಿಟ್ಟರೆ ಕಾಮಗಾರಿಗಳಿಗೆ ವೇಗವೇ ದೊರೆತಿಲ್ಲ.

ಇನ್ನು ಮೀನಿನ ಮಾರುಕಟ್ಟೆಯ ಕೆಲಸವೇ ಆರಂಭವಾಗಿಲ್ಲ. ಈಗಿರುವ ಮೀನಿನ ಮಾರುಕಟ್ಟೆ ಕಟ್ಟಡವನ್ನು ಸಂಪೂರ್ಣವಾಗಿ ತೆಗೆದುಹಾಕಿ ಮರು ನಿರ್ಮಿಸಬೇಕು ಎಂಬುದು ‘ಸ್ಮಾರ್ಟ್‌ ಸಿಟಿ’ ಯೋಜನೆ. ಇದಕ್ಕೆ ವ್ಯಾಪಾರಿಗಳು ಒಪ್ಪುತ್ತಿಲ್ಲ. ಈಗಿರುವ ಕಟ್ಟಡವನ್ನೇ ಮರು ಅಭಿವೃದ್ಧಿಪಡಿಸಿ ಎಂಬುದು ಅವರ ಒತ್ತಾಯ. ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಅಭಿಪ್ರಾಯಗಳು ಒಂದಾಗದಿರುವುದರಿಂದ ಕಾಮಗಾರಿಗೆ ಯಾವುದೇ ರೀತಿಯಲ್ಲೂ ಚಾಲನೆ ದೊರೆತಿಲ್ಲ. ಮುಖ್ಯರಸ್ತೆಯಲ್ಲಿ ತಾತ್ಕಾಲಿಕ ಅಂಗಡಿಗಳನ್ನು ಮಾತ್ರ ನಿರ್ಮಿಸಲಾಗಿದೆ.

ಇಂಟಿಗ್ರೇಟೆಡ್‌ ಮೊಬಿಲಿಟಿ ಹಬ್‌

ಕೆ.ಆರ್‌. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರು ಹಾಗೂ ಪಾದಚಾರಿಗಳೊಂದಿಗೆ ಸೀಮಾತೀತ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ ‘ಇಂಟಿಗ್ರೇಟೆಡ್‌ ಮೊಬಿಲಿಟಿ ಹಬ್‌’. ಮಾರುಕಟ್ಟೆ ಜಂಕ್ಷನ್‌ ಅಭಿವೃದ್ಧಿಯಿಂದ ಹಿಡಿದು, ಫುಟ್‌ಪಾತ್‌, ಬಸ್‌ ಬೇ, ಶೌಚಾಲಯ ಹಾಗೂ ಸಬ್‌ವೇಗಳು ಈ ಯೋಜನೆಯಡಿ ನಿರ್ಮಾಣವಾಗಿವೆ. ಇವೆಲ್ಲವೂ 32 ಸಿ.ಸಿ ಟಿ.ವಿ. ಕ್ಯಾಮೆರಾಗಳ ನಿಗಾದಲ್ಲಿರುವುದು ವಿಶೇಷ.

ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಸಬ್‌ವೇಯಲ್ಲಿ ಎಸ್ಕಲೇಟರ್‌, ಇಂಟರ್‌ನೆಟ್‌, ವೈಫೈ, ಭದ್ರತೆ, ಯುಪಿಎಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವಿದೆ. ಮಹಿಳೆಯರಿಗೆ ಮಳಿಗೆಗಳನ್ನು ಕಲ್ಪಿಸಿ, ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿ ಇದೆ. ಇದಕ್ಕಾಗಿ ಬಿಬಿಎಂಪಿಯೊಂದಿಗೆ ಚರ್ಚೆ ನಡೆಸಲಾಗಿದ್ದು, ಅವರು ಒಪ್ಪಿದ ಕೂಡಲೇ ಸಬ್‌ವೇ ಉದ್ಘಾಟಿಸಿ, ಮಹಿಳೆಯರಿಗೆ ಮಳಿಗೆಗಳನ್ನು ಒದಗಿಸಲಾಗುವುದು ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ತಿಳಿಸಿದರು.

ಯಾವುದಕ್ಕೆ ಎಷ್ಟೆಷ್ಟು?

ಕೆ.ಆರ್‌. ಮಾರುಕಟ್ಟೆ ಮರುಅಭಿವೃದ್ಧಿ; ₹34.67 ಕೋಟಿ

ಕೆ.ಆರ್‌. ಮಾರುಕಟ್ಟೆ ಮೊಬಿಲಿಟಿ ಹಬ್‌;₹18.68 ಕೋಟಿ

ಗಾಂಧಿಬಜಾರ್ ಮಲ್ಪಿ ಲೆವೆಲ್‌ ಕಾರ್‌ ಪಾರ್ಕಿಂಗ್‌;₹18.76 ಕೋಟಿ

ಶಿವಾಜಿನಗರ ಬಸ್‌ ನಿಲ್ದಾಣ ಟರ್ಮಿನಲ್‌; ₹2.87 ಕೋಟಿ

ಪಾರ್ಕಿಂಗ್‌ ಕಟ್ಟಡವೂ ಆರಂಭವಾಗಿಲ್ಲ

ಗಾಂಧಿ ಬಜಾರ್‌ನಲ್ಲಿ ಬಹು ಅಂತಸ್ತಿನ ಕಾರು ಪಾರ್ಕಿಂಗ್‌ ಹಾಗೂ ಮಾರುಕಟ್ಟೆಗಾಗಿ ಐದು
ಅಂತಸ್ತಿನ ಕಟ್ಟಡ ನಿರ್ಮಾಣವಾಗ
ಲಿದೆ. 128 ಕಾರುಗಳಿಗೆ ನಿಲುಗಡೆ ಒದಗಿಸಲಿರುವ ಕಟ್ಟಡದ ಕೆಳಅಂತಸ್ತು ವ್ಯಾಪಾರಸ್ಥರಿಗೆ ಮೀಸಲು. ಇದಕ್ಕಾಗಿ ಈಗ ಆಗಿರುವುದು ನೀಲನಕ್ಷೆ ಮಾತ್ರ. ಬಿಬಿಎಂಪಿ ಜಾಗ ತೋರಿಸಿದೆಯಾದರೂ ಅದನ್ನು ಸ್ಮಾರ್ಟ್‌ ಸಿಟಿಯವರಿಗೆ ಕಾಮಗಾರಿ ಆರಂಭಿಸಲು ನೀಡಿಲ್ಲ. ಹೀಗಾಗಿ ಹೊಸದಾಗಿ ಸೇರ್ಪಡೆಯಾಗಿರುವ ಈ ಬಹುಅಂತಸ್ತಿನ ಕಾರು ಪಾರ್ಕಿಂಗ್‌ ಕಟ್ಟಡ ಇದೀಗ ಆರಂಭವಾದರೂ ಮುಂದಿನ ವರ್ಷದ ಅಂತ್ಯದವರೆಗೆ ಮುಗಿಯುವ ಲಕ್ಷಣಗಳಿಲ್ಲ.

ಶಿವಾಜಿನಗರ ಬಸ್‌ ಟರ್ಮಿನಲ್‌ ಅಭಿವೃದ್ಧಿಯನ್ನೂ ಕೈಗೊಳ್ಳಲಾಗಿದೆ. ಪಾದಚಾರಿಗಳಿಗೆ ರಕ್ಷಣೆ, ತಾಯಿ ಆರೈಕೆ, ತಂಗುದಾಣ, ಶೌಚಾಲಯ, ಸಬ್‌ವೇ ಮರು ಅಭಿವೃದ್ಧಿ ಸೌಲಭ್ಯಗಳು ಇಲ್ಲಿ ಒದಗಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು, ಬಿಎಂಟಿಸಿಗೆ ಒದಗಿಸಲಾಗಿದೆ. ಆದರೆ ನಾಗರಿಕರಿಗೆ ಇದರ ಪೂರ್ಣ ಪ್ರಯೋಜನ ಇನ್ನೂ ಲಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT