ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಇಲಾಖೆ–ಸೆಂಚುರಿ ಕ್ಲಬ್ ಜಟಾಪಟಿ

ಪ್ರವೇಶದ್ವಾರ ನಿರ್ಬಂಧ: ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗೆ ತಡೆ
Last Updated 27 ಜೂನ್ 2021, 19:48 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ಸಂಬಂಧ ತೋಟಗಾರಿಕೆ ಇಲಾಖೆ ಹಾಗೂ ಸೆಂಚುರಿ ಕ್ಲಬ್‌ ನಡುವೆ ಜಟಾಪಟಿ ಶುರುವಾಗಿದೆ.

ಉದ್ಯಾನಕ್ಕೆ ಹೊಂದಿಕೊಂಡಿರುವ ಸೆಂಚುರಿ ಕ್ಲಬ್‌ಗೆ ಎರಡು ಪ್ರವೇಶದ್ವಾರಗಳಿದ್ದವು. ಕೆ.ಆರ್.ವೃತ್ತದ ಬಳಿ ಇರುವ ದ್ವಾರವನ್ನು ಪ್ರಧಾನವಾಗಿ ಬಳಸಲಾಗುತ್ತಿದೆ. ಕೇಂದ್ರೀಯ ಗ್ರಂಥಾಲಯದ ಬಳಿ ಇದ್ದ ಮತ್ತೊಂದು ದ್ವಾರವನ್ನು ತೋಟಗಾರಿಕೆ ಇಲಾಖೆ ಕಳೆದ ವರ್ಷ ನಿರ್ಬಂಧಿಸಿತ್ತು.

‘ಮುಚ್ಚಲ್ಪಟ್ಟ ದ್ವಾರದ ಬಳಿ ಇದ್ದ ಜಾಗವು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಲ್ಲಿ ಕೆಲಸ ಆರಂಭಿಸಲಾಗಿತ್ತು. ಈ ವೇಳೆ ಕ್ಲಬ್‌ನ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ದೂರಿದೆ.

‘ಒಂದು ವರ್ಷದ ಹಿಂದೆ ಈ ದ್ವಾರವನ್ನು ಮುಚ್ಚಲಾಗಿತ್ತು. ಹಿರಿಯ ಅಧಿಕಾರಿಗಳು ಆ ಜಾಗದಲ್ಲಿ ಸಸಿಗಳನ್ನು ನೆಡಲು ಸೂಚಿಸಿದ್ದರು. ಅದರಂತೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಶನಿವಾರ ಕಾಮಗಾರಿ ಶುರುವಾಗಿತ್ತು. ಈ ವೇಳೆ ಕ್ಲಬ್‌ನ ಪದಾಧಿಕಾರಿಗಳು ಬಂದು ತಡೆ ನೀಡಿದರು. ಕೆಲ ದಿನಗಳವರೆಗೆ ಕಾಲಾವಕಾಶ ಕೇಳಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ.ಬಾಲಕೃಷ್ಣ ತಿಳಿಸಿದರು.

‘ಹಲವು ವರ್ಷಗಳಿಂದ ಈ ದ್ವಾರವನ್ನು ಕ್ಲಬ್‌ ಬಳಸುತ್ತಿತ್ತು. ಕಳೆದ ವರ್ಷ ಕೋವಿಡ್‌ ಇದ್ದ ಕಾರಣದಿಂದ ಪ್ರವೇಶ ನಿರ್ಬಂಧಿಸಿದ್ದರು. ಬಳಿಕ ನಾವೇ ದ್ವಾರ ತೆರೆದಾಗ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಈ ಜಾಗದಲ್ಲಿ ಪ್ರವೇಶಕ್ಕೆ ಅನುಮತಿ ಕೋರಿತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿರಾಜೇಂದ್ರಕುಮಾರ್ ಕಟಾರಿಯಾ ಅವರಲ್ಲಿ ಮನವಿ ಮಾಡಿದ್ದೆವು. ಆದರೆ, ಏಕಾಏಕಿ ಒಂದು ನೋಟಿಸ್ ಸಹ ನೀಡದೆ, ದ್ವಾರದ ರಸ್ತೆ ಅಗೆದಿದ್ದಾರೆ’ ಎಂದು ಸೆಂಚುರಿ ಕ್ಲಬ್‌ನ ಗೌರವ ಕಾರ್ಯದರ್ಶಿ ಇ.ಜಿ.ಜೈದೀಪ್‌ ಆಕ್ಷೇಪ ವ್ಯಕ್ತಪಡಿಸಿದರು.

ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್, ‘ಸೆಂಚುರಿ ಕ್ಲಬ್‌ನವರು ಸ್ಮಾರ್ಟ್‌ಸಿಟಿ ಯೋಜನೆಯ ಕೆಲಸಗಳಿಗೆ ಅಡ್ಡಿಪಡಿಸಿದರೆ ಕಾನೂನು ಹೋರಾಟ ಮಾಡಲಾಗುವುದು ಹಾಗೂ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT