ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಕೆ.ಜಿ ರಕ್ತಚಂದನ ಜಪ್ತಿ

Last Updated 25 ಮೇ 2019, 18:57 IST
ಅಕ್ಷರ ಗಾತ್ರ

ಬೆಂಗಳೂರು: ರಕ್ತಚಂದನ ಕಳ್ಳ ಸಾಗಣೆ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಜಾಲವನ್ನು ಇತ್ತೀಚೆಗಷ್ಟೇ ಭೇದಿಸಿದ್ದ ನಗರದ ಸಿಸಿಬಿ ಪೊಲೀಸರು, ಇದೀಗ ಮುಂಬೈಗೆ ಹೋಗಿ 100 ಕೆ.ಜಿ. ರಕ್ತಚಂದನದ ತುಂಡುಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಕಳ್ಳ ಸಾಗಣೆ ಜಾಲದ ಕಿಂಗ್‌ಪಿನ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಅಬ್ದುಲ್ ರಷೀದ್ ಅಲಿಯಾಸ್‌ ಪುತ್ತು ಬಾಯಾರ್‌ ಸೇರಿದಂತೆ 13 ಮಂದಿಯನ್ನು ಬಂಧಿಸಿದ್ದರು. ₹ 3.50 ಕೋಟಿ ಮೌಲ್ಯದ 4,000 ಕೆ.ಜಿ ರಕ್ತಚಂದನದ ತುಂಡುಗಳನ್ನು ಜಪ್ತಿ ಮಾಡಿದ್ದರು.

ಬಂಧಿತ ಆರೋಪಿಗಳು ನೀಡಿದ್ದ ಸುಳಿವು ಆಧರಿಸಿ ಮುಂಬೈಗೆ ಹೋಗಿದ್ದ ವಿಶೇಷ ತಂಡ, ಮತ್ತೆ 100 ಕೆ.ಜಿ ರಕ್ತಚಂದನದ ತುಂಡುಗಳನ್ನು ನಗರಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

‘ರಕ್ತಚಂದನ ತುಂಡುಗಳನ್ನು ಪಾರ್ಸೆಲ್‌ ರೀತಿಯಲ್ಲಿ ಸಿದ್ಧಪಡಿಸಿ, ನ್ಯಾಷನಲ್ ಟ್ರಾವೆಲ್ಸ್ ಬಸ್‌ಗಳಲ್ಲಿ ಬೆಂಗಳೂರಿನಿಂದ ಮುಂಬೈಗೆ ಕಳುಹಿಸಲಾಗಿತ್ತು. ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಆ ವಿಷಯ ಗೊತ್ತಾಗಿತ್ತು. ಹೀಗಾಗಿ ವಿಶೇಷ ತಂಡವೊಂದನ್ನು ಮುಂಬೈಗೆ ಕಳುಹಿಸಲಾಗಿತ್ತು’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮುಂಬೈ ಮೂಲಕ ಹೊರ ದೇಶಗಳಿಗೆ ರಕ್ತಚಂದನವನ್ನು ಕಳುಹಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಸ್ಥಳೀಯ ಪೊಲೀಸರ ನೆರವಿನಿಂದ ರಕ್ತಚಂದನವನ್ನು ಜಪ್ತಿ ಮಾಡಲಾಗಿದೆ’ ಎಂದರು.

ಮತ್ತೊಬ್ಬ ವಶಕ್ಕೆ: ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯನಾಗಿದ್ದ ಮತ್ತೊಬ್ಬನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT