ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿಯಾಗದ ಸಾಮಾಜಿಕ ಪ್ರಜಾಪ್ರಭುತ್ವ: ಎಲ್‌. ನಾರಾಯಣಸ್ವಾಮಿ ವಿಷಾದ

ನಿವೃತ್ತ ಮುಖ್ಯ ನ್ಯಾಯಮೂರ್ತಿ
Last Updated 23 ಅಕ್ಟೋಬರ್ 2021, 16:44 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ದೇಶದಲ್ಲಿ ಇನ್ನೂ ಸಾಮಾಜಿಕ ಪ್ರಜಾಪ್ರಭುತ್ವ ಸಾಧಿಸಿಲ್ಲ’ ಎಂದು ಹಿಮಾಚಲ ಪ್ರದೇಶದ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಮಂಥನ ಬೆಂಗಳೂರು’ ಶನಿವಾರ ಆಯೋಜಿಸಿದ್ದ ‘ಮೇಕರ್ಸ್‌ ಆಫ್‌ ಮಾಡರ್ನ್‌ ದಲಿತ ಹಿಸ್ಟರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹತ್ತು ವರ್ಷಗಳಲ್ಲಿ ಅಸ್ಪೃಶ್ಯತೆ ನಿವಾರಣೆಯಾಗುತ್ತದೆ ಎಂದು ಹಲವರು ಸಂವಿಧಾನ ರಚನೆ ಸಂದರ್ಭದಲ್ಲಿ ಪ್ರತಿಪಾದಿಸಿದ್ದರು. ಆದರೆ, ಪರಿಸ್ಥಿತಿಗಳು ಇಂದಿಗೂ ಬದಲಾಗಿಲ್ಲ’ ಎಂದರು.

‘ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಅನುಸರಿಸಲಾಗುತ್ತಿದೆ. ಇದರಿಂದ, ಮೀಸಲಾತಿಗೆ ದೊಡ್ಡ ಪೆಟ್ಟು ಬೀಳುತ್ತಿದೆ. ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಪರಿಶಿಷ್ಟ ಜಾತಿ ಸಮುದಾಯದವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡದ ಘಟನೆಗಳು ನಡೆಯುತ್ತಿವೆ. ನನಗೂ ಸಹ ಒಂದು ಸಂದರ್ಭದಲ್ಲಿ ದೇವಸ್ಥಾನಕ್ಕೆ ಪ್ರವೇಶ ನೀಡಿರಲಿಲ್ಲ. ಕೆಲವು ಹೊಟೇಲ್‌ಗಳಲ್ಲಿ ನಾಯಿಗಳಿಗೆ ಪ್ರವೇಶವಿದೆ. ಆದರೆ, ಪರಿಶಿಷ್ಟ ಜಾತಿಯವರಿಗೆ ಪ್ರವೇಶ ಇಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸದಿದ್ದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ’ ಎಂದು ಹೇಳಿದರು.

‘ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಅನ್ವಯ ಪ್ರತಿ 18 ನಿಮಿಷಕ್ಕೆ ಪರಿಶಿಷ್ಟ ಜಾತಿ ಸಮುದಾಯದವರ ವಿರುದ್ಧ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ದಿನ ಪರಿಶಿಷ್ಟ ಜಾತಿಯ ಮೂರು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಾಮೂಹಿಕ ಭೋಜನ ಮತ್ತು ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಬೇಕು. ಇಂತಹ ಕ್ರಮಗಳಿಂದ ಜಾತಿ ನಿರ್ಮೂಲನೆಗೆ ಯತ್ನಿಸಬೇಕು’ ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಎನ್‌. ತಿಪ್ಪೇಸ್ವಾಮಿ, ‘ಅಸ್ಪೃಶ್ಯತೆ ಎನ್ನುವುದು ಮೇಲ್ವರ್ಗದ ಮಾನಸಿಕ ಸ್ಥಿತಿ. ಹೀಗಾಗಿ, ನಮ್ಮ ನಡವಳಿಕೆಯಲ್ಲಿ ಬದಲಾವಣೆಯಾಗಬೇಕಾಗಿದೆ’ ಎಂದು ಹೇಳಿದರು.

‘ಮೀಸಲಾತಿ ಕಲ್ಪಿಸುವುದಕ್ಕೆ ಆರ್‌ಎಸ್‌ಎಸ್‌ ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಅಸಮಾನತೆ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಮಹಾತ್ಮ ಗಾಂಧೀಜಿ ಅವರು ಆರ್‌ಎಸ್‌ಎಸ್‌ ಶಿಬಿರಕ್ಕೆ ಭೇಟಿ ನೀಡಿದ್ದರು. ಶಿಬಿರದಲ್ಲಿ ಸಮಾನತೆ ಆಚರಣೆಯನ್ನು ಖುದ್ದಾಗಿ ಕಂಡಿದ್ದರು’ ಎಂದು ವಿವರಿಸಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಪುಸ್ತಕದ ಲೇಖಕರಲ್ಲಿ ಒಬ್ಬರಾದ ಗುರು ಪ್ರಕಾಶ್‌ ಪಾಸ್ವಾನ್‌, ‘ಇತಿಹಾಸ ರಚನೆಯ ಸಂದರ್ಭದಲ್ಲಿ ಕೆಲವು ಇತಿಹಾಸಕಾರರು ದ್ವಂದ್ವ ನಿಲುವು ಅನುಸರಿಸಿದ್ದರಿಂದ ಹಲವು ಸಮಾಜ ಸುಧಾರಕರಿಗೆ ಮನ್ನಣೆ ದೊರೆತಿಲ್ಲ. ವಾಸ್ತವ ಸಂಗತಿಗಳನ್ನು ಮುಚ್ಚಿಡಲಾಯಿತು’ ಎಂದರು.

ಸುದರ್ಶನ ರಾಮಬದ್ರನ್‌ ಅವರು ಸಹ ಈ ಪುಸ್ತಕ ರಚನೆಯಲ್ಲಿ ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT