ಶನಿವಾರ, ಮಾರ್ಚ್ 6, 2021
31 °C
ನಿವೃತ್ತ ಐಪಿಎಸ್‌ ಅಧಿಕಾರಿ ಅಜಯ್‌ಕುಮಾರ್ ಸಿಂಗ್‌ ಅಭಿಮತ

ಸಮಾಜ ಸೇವೆಗೆ ಅಧಿಕಾರ ಬೇಕಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಅಧಿಕಾರ ಕೈಯಲ್ಲಿ ಇದ್ದರೆ ಮಾತ್ರ ಸಮಾಜ ಸೇವೆ ಮಾಡಬಹುದು ಎಂಬುದು ಹಲವರ ಅನಿಸಿಕೆ. ಅದು ತಪ್ಪು ಕಲ್ಪನೆ’ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಅಜಯ್‌ಕುಮಾರ್ ಸಿಂಗ್‌ ಅಭಿಪ್ರಾಯಪಟ್ಟರು.

ಲೋಕಚರಿತ ಬಳಗ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜನಸೇವೆಗೆ ಪದವಿ ಬೇಕಾಗಿಲ್ಲ. ವೃತ್ತಿಯಲ್ಲಿ ಮನಸ್ಸು ಕೊಟ್ಟು ನಿಷ್ಠೆಯಿಂದ ದುಡಿಯುವುದೇ ನಿಜವಾದ ಸೇವೆ’ ಎಂದು ಅವರು ಹೇಳಿದರು.

‘ತಂದೆ–ತಾಯಿ, ಗುರುಗಳು, ಸ್ನೇಹಿತರು ಮತ್ತು ಸಂಬಂಧಿಕರ ಪ್ರೋತ್ಸಾಹವೇ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಯಿತು. ವೃತ್ತಿ ಜೀವನದಲ್ಲಿ ಕನ್ನಡ ಸಾಹಿತ್ಯ ಕಲಿಯುವ ಆಸಕ್ತಿ ಹೆಚ್ಚಾಯಿತು. ದ.ರಾ.ಬೇಂದ್ರೆ, ಯು.ಆರ್‌.ಅನಂತಮೂರ್ತಿ ಅವರ ಪುಸ್ತಕಗಳನ್ನು ಓದುವುದು, ಕ್ರಿಕೆಟ್ ಆಡುವ ಹುಚ್ಚು ಬೆಳೆಸಿಕೊಂಡೆ’ ಎಂದು ಹೇಳಿದರು.

‘ಕೃಷಿ ಕುಟುಂಬದಲ್ಲಿ ಬೆಳೆದು, ತಂದೆಯ ಜತೆಗೆ ವ್ಯವಸಾಯ ಮಾಡುವ ಹೆಬ್ಬಯಕೆ ಇತ್ತು. ಸರ್ಕಾರಿ ನೌಕರಿಯನ್ನು ಪಡೆಯುವ ಆಸಕ್ತಿ ಇರಲಿಲ್ಲ. ಅವರಿಗೆ (ತಂದೆಗೆ) ನಾನು ಐಪಿಎಸ್‌ ಆಗಬೇಕೆಂಬ ಆಸೆ ಹೊಂದಿದ್ದರು. ತಂದೆಯ ಕನಸು ನನಸು ಮಾಡಲು ಕೊಟ್ಟ ಮಾತಿಗೆ ಗೌರವ ಕೊಟ್ಟು ಕಠಿಣ ಶ್ರಮ, ಎಲ್ಲರ ಪ್ರೋತ್ಸಾಹದಿಂದ ಯಶಸ್ಸು ಗಳಿಸಿದೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದು ನನ್ನ‌ ಪುಣ್ಯ’ ಎಂದು ಹೇಳಿದರು.

‘ಅಧಿಕಾರದಲ್ಲಿದ್ದಾಗ ಸುಳ್ಳು ಹೇಳುವುದು, ಭ್ರಷ್ಟಾಚಾರ ಮಾಡುವುದು ತಿಳಿದು ಬಂದರೆ ಸಹಿಸುತ್ತಿರಲಿಲ್ಲ. ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೆ. ಕಾನೂನಿನ ನೀತಿ ನಿಯಮಗಳನ್ನು ಕಾಪಾಡುವುದೇ ನನ್ನ ಧ್ಯೇಯವಾಗಿತ್ತು’ ಎಂದರು.

ಕನ್ನಡ–ಹಿಂದಿ ನಂಟು ಬೆಸೆದ ಅಧಿಕಾರಿ
ಅಜಯ್ ಕುಮಾರ್ ಸಿಂಗ್ ಅವರು ಕರ್ತವ್ಯದಲ್ಲಿದ್ದ ವೇಳೆಯೇ ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಡಾ.ಯು.ಆರ್.ಅನಂತಮೂರ್ತಿ ಅವರಂತಹ ಕವನಗಳನ್ನು ಹಿಂದಿಗೆ ಅನುವಾದ ಮಾಡಿದ್ದರು. ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪಡೆದಿರುವ ಅವರು ಅತ್ಯುತ್ತಮ ಸೇವೆಗೆ ಎರಡು ಬಾರಿ ರಾಷ್ಟ್ರಪತಿ ಪದಕ ಗಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು