ಭಾನುವಾರ, ಫೆಬ್ರವರಿ 23, 2020
19 °C
ತೆಪ್ಪ ಮಗುಚಿ ದುರಂತ; ಈಜಿ ದಡ ಸೇರಿದ ಜೊತೆಗಿದ್ದ ಟೆಕಿ

ಕಲ್ಕೆರೆ ಕೆರೆಯಲ್ಲಿ ಟೆಕಿ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ಸಾಫ್ಟ್‌ವೇರ್‌ ಎಂಜಿನಿಯರ್‌ ಕಣ್ಮರೆಯಾದ ಘಟನೆ‌ ಶನಿವಾರ ನಸುಕಿನಲ್ಲಿ ನಡೆದಿದೆ.

ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಕಂಪನಿಯೊಂದರ ಉದ್ಯೋಗಿ, ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಸಚಿನ್ (30) ನಾಪತ್ತೆಯಾದವರು. ಸಚಿನ್‌ಗಾಗಿ ಕೆರೆಯಲ್ಲಿ ಶನಿವಾರ ಬೆಳಗ್ಗಿನಿಂದ ರಾತ್ರಿ 7 ಗಂಟೆವರೆಗೆ ಶೋಧ ನಡೆಸಿದರೂ ಪತ್ತೆ ಆಗಿಲ್ಲ. ಶೋಧಕಾರ್ಯ ಭಾನುವಾರ ಮತ್ತೆ ಮುಂದುವರಿಯಲಿದೆ. ಕೆರೆಯ ಬಳಿಯಲ್ಲಿ ಸಚಿನ್‌ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸಚಿನ್‌ ಮತ್ತು ಅವರ ಸ್ನೇಹಿತ, ಬಂಜಾರ ಬಡಾವಣೆಯ ಉಲ್ಲಾಸ್ ಶನಿವಾರ ನಸುಕಿನ 2.30ರ ವೇಳೆಗೆ ಪಾರ್ಟಿ ಮುಗಿಸಿ ವಾಯುವಿಹಾರಕ್ಕೆ ತೆರಳಿದ್ದರು.

ಕೆರೆಯ ದಡದ ಬಳಿಯಲ್ಲಿದ್ದ ತೆಪ್ಪದಲ್ಲಿ ಕುಳಿತು ಮಧ್ಯಭಾಗದಲ್ಲಿನ ನಡುಗಡ್ಡೆಗೆ ತೆರಳಿದ್ದರು. ದಡದಿಂದ ಸುಮಾರು 50 ಮೀಟರ್ ದೂರ ಹೋಗುತ್ತಿದ್ದಂತೆ ಹರಿಗೋಲು ಕೆಳಗಡೆ ಬಿದ್ದಿದೆ. ಅದನ್ನು ಹಿಡಿಯಲು ಯತ್ನಿಸಿದ ವೇಳೆ ತೆಪ್ಪ ಮಗುಚಿ ಬಿದ್ದಿದೆ.

ಈ ವೇಳೆ ಕೆರೆಯ ಭದ್ರತಾ ಸಿಬ್ಬಂದಿ ಇನ್ನೊಂದು ದಿಕ್ಕಿನಲ್ಲಿದ್ದರು ಎನ್ನಲಾಗಿದೆ.

ಈಜು ಬರುತ್ತಿದ್ದ ಉಲ್ಲಾಸ್ ದಡ ಸೇರಿ ಸಹಾಯಕ್ಕಾಗಿ ಕೂಗಿದ್ದಾರೆ. ತಕ್ಷಣ ನಾಲ್ಕೈದು ಜನರು ರಕ್ಷಣೆಗೆ ಧಾವಿಸಿದರೂ ಸಚಿನ್‌ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ರಾಮಮೂರ್ತಿನಗರ ಠಾಣೆಯ 20 ಸಿಬ್ಬಂದಿ, ಸಿವಿಲ್ ಡಿಫೆನ್ಸ್‌ನ 25 ಜನರ ತಂಡ, 30ಕ್ಕೂ ಹೆಚ್ಚು ಎಎನ್‌ಡಿಆರ್‌ಎಫ್‌ನ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳಗುತಜ್ಞರು ಶೋಧ ನಡೆಸಿದರೂ ಫಲಕಾರಿಯಾಗಲಿಲ್ಲ. ಆರಕ್ಕೂ ಹೆಚ್ಚು ದೋಣಿಗಳನ್ನು ಶೋಧ ಕಾರ್ಯಕ್ಕೆ ಬಳಸಲಾಗಿದೆ.

ಕಲ್ಕರೆ ಕೆರೆ 186 ಎಕರೆ ವಿಸ್ತೀರ್ಣವಿದೆ. ಇಲ್ಲಿ ಭದ್ರತೆಗಾಗಿ ನಾಲ್ವರನ್ನು ನಿಯೋಜಿಸಲಾಗಿದೆ. ಮೂವರು ಹಗಲು ವೇಳೆಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಒಬ್ಬ ಸಿಬ್ಬಂದಿ ಮಾತ್ರ ಇರುತ್ತಾರೆ. ಕೆರೆಗೆ ಎರಡು ಗೇಟ್‌ಗಳಿವೆ ಇನ್ನೊಂದು ಭಾಗದ ಗೇಟ್‌ ನಿರ್ಮಾಣ ಕಾಮಗಾರಿ ಮುಗಿದಿಲ್ಲ. ಆ ಭಾಗದಿಂದ ಸಾರ್ವಜನಿಕರು ರಾತ್ರಿ ವೇಳೆ ಕೆರೆಯ ಬಳಿ ತೆರಳುತ್ತಾರೆ ಎಂದು ಸ್ಥಳೀಯರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು