ಕಸ ಸಾಗಣೆಗೆ ಬೈಕ್‌, ಅಂಬಾಸಿಡರ್‌ ಕಾರು!

7
ಆಟೊ ಟಿಪ್ಪರ್‌ ಗುತ್ತಿಗೆ ಅಕ್ರಮ * ಕಿರಿಯ ಆರೋಗ್ಯ ಪರಿವೀಕ್ಷಕ, ಎ.ಇ ಅಮಾನತು, * ಜೆ.ಸಿ, ಎಸ್‌.ಇ, ಎಇಇ, ಅಮಾನತಿಗೆ ಶಿಫಾರಸು

ಕಸ ಸಾಗಣೆಗೆ ಬೈಕ್‌, ಅಂಬಾಸಿಡರ್‌ ಕಾರು!

Published:
Updated:
Deccan Herald

ಬೆಂಗಳೂರು: ‘ಜೆ.ಪಿ.ಉದ್ಯಾನ ವಾರ್ಡ್‌ನಲ್ಲಿ ಕಸ ವಿಲೇವಾರಿಗೆ ಬೈಕ್‌, ಅಂಬಾಸಿಡರ್‌ ಕಾರುಗಳನ್ನೂ ಬಳಸಲಾಗುತ್ತಿದೆಯೇ?  ಪ್ಯಾಸೆಂಜರ್‌ ರಿಕ್ಷಾಗಳಲ್ಲೂ ಕಸ ಸಾಗಿಸಲಾಗುತ್ತಿದೆಯೇ?’

ಈ ಪ್ರಶ್ನೆ ಮುಂದಿಟ್ಟಿದ್ದು ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ.

ಆಟೊ ಟಿಪ್ಪರ್‌ ಹೆಸರಿನಲ್ಲಿ ಯಾವುದೋ ವಾಹನದ ಸಂಖ್ಯೆ ತೋರಿಸಿ ಕಸ ವಿಲೇವಾರಿಯಲ್ಲಿ ಹೇಗೆ ಅಕ್ರಮ ನಡೆಸಲಾಗುತ್ತಿದೆ ಎಂಬುದನ್ನು ಅವರು ಬಿಬಿಎಂಪಿ ಸಭೆಯಲ್ಲಿ ಮಂಗಳವಾರ ವಿವರಿಸಿದರು.

‘ಈ ವಾರ್ಡ್‌ನಲ್ಲಿ 21 ಆಟೊ ಟಿಪ್ಪರ್‌ಗಳಿಗೆ ಹಣ ಪಾವತಿ ಆಗುತ್ತಿತ್ತು. ಆದರೆ, ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿ 13 ವಾಹನಗಳು ಮಾತ್ರ ಕಾರ್ಯಾಚರಿಸುತ್ತಿದ್ದುದು ಬೆಳಕಿಗೆ ಬಂದಿತ್ತು. ಅವುಗಳಲ್ಲೂ ಎರಡು ಮಾತ್ರ ಆಟೊ ಟಿಪ್ಪರ್‌, ಉಳಿದವು ಗೂಡ್ಸ್‌ ರಿಕ್ಷಾಗಳು. ಈ ಬಗ್ಗೆ ಸಿ.ಟಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ವಿಡಿಯೊ ದಾಖಲೆಗಳೂ ನನ್ನ ಬಳಿ ಇವೆ’ ಎಂದು ಮುನಿರತ್ನ ತಿಳಿಸಿದರು.

‘ಆಟೊ ಟಿಪ್ಪರ್‌ ಒದಗಿಸಿದ ಗುತ್ತಿಗೆದಾರರಿಗೆ 2016ರ ಏಪ್ರಿಲ್ 1ರಿಂದ ಇಂದಿನವರೆಗೆ ಹಣ ಪಾವತಿಸಿದ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ಪಡೆದಿದ್ದೇನೆ. ಅವರು ಪಾಲಿಕೆಗೆ ನೀಡಿದ್ದ ವಾಹನಗಳ ನೋಂದಣಿ ಸಂಖ್ಯೆಗಳನ್ನು ಸಾರಿಗೆ ಇಲಾಖೆ ದಾಖಲೆಗಳಲ್ಲಿ ಪರಿಶೀಲಿಸಿದೆ. ಒಂದು ದ್ವಿಚಕ್ರ ವಾಹನ, 1990ರ ನೋಂದಣಿ ಸಂಖ್ಯೆಯ ಒಂದು ಅಂಬಾಸಿಡರ್‌ ಕಾರು, ಟ್ರ್ಯಾಕ್ಟರ್, ಲಾರಿ, ದಾವಣಗೆರೆ ನೋಂದಣಿಯ ಮಹೀಂದ್ರ ವಾಹನ ಹಾಗೂ ಆರು ಪ್ಯಾಸೆಂಜರ್‌ ಆಟೊರಿಕ್ಷಾಗಳ ನೋಂದಣಿ ಸಂಖ್ಯೆಯನ್ನು ನೀಡಿ ಗುತ್ತಿಗೆದಾರರು ಹಣ ಪಡೆದಿದ್ದಾರೆ. ಇನ್ನೊಂದು ನೋಂದಣಿ ಸಂಖ್ಯೆ ಬಗ್ಗೆ ಸಾರಿಗೆ ಇಲಾಖೆಯಲ್ಲೂ ದಾಖಲೆ ಇಲ್ಲ’ ಎಂದು ಅವರು ವಿವರಿಸಿದರು.

‘ಗೂಡ್ಸ್‌ ರಿಕ್ಷಾಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಈ ಗುತ್ತಿಗೆಯನ್ನು ರದ್ದುಪಡಿಸಿ ಬೇರೆ ಏಜೆನ್ಸಿಯನ್ನು ನೇಮಿಸಿದ್ದಾರೆ. ಆದರೆ, ಗುತ್ತಿಗೆದಾರರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅಷ್ಟಕ್ಕೂ ಆಟೊ ಟಿಪ್ಪರ್‌ ಪೂರೈಕೆಗೆ ಟೆಂಡರ್‌ ಕರೆದು ಗುತ್ತಿಗೆ ನೀಡಿರಲಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಅವರ ಸೇವೆ ಬಳಸಿಕೊಳ್ಳಲಾಗಿತ್ತು. ಈ ವಿಚಾರವನ್ನು ಬಿಬಿಎಂಪಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರೆ ಅವರಿಗೆ ತಡೆಯಾಜ್ಞೆ ಸಿಗುತ್ತಿರಲಿಲ್ಲ. ಇಂತಹ ವಕೀಲರನ್ನು ಮೊದಲು ಕಿತ್ತು ಹಾಕಿ’ ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ವಾಹನಗಳನ್ನು ಪರಿಶೀಲನೆ ನಡೆಸದೆಯೇ ಅಧಿಕಾರಿಗಳು ಹಣವನ್ನು ಹೇಗೆ ಬಿಡುಗಡೆ ಮಾಡಿದರು. ಯಾರೆಲ್ಲ ಹಣ ಬಿಡುಗಡೆ ಕಡತಕ್ಕೆ ಸಹಿ ಹಾಕಿದ್ದಾರೋ ಅವರನ್ನೆಲ್ಲ ತಕ್ಷಣವೇ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ತಕ್ಷಣವೇ ಅಧಿಕಾರಿಗಳ ಅಮಾನತು:

ಸಭೆ ನಡೆಯುತ್ತಿದ್ದಂತೆಯೇ ವರದಿ ತರಿಸಿಕೊಂಡ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, 2016ರಿಂದ ಈ ವಾರ್ಡ್‌ನಲ್ಲಿ ಎರವಲು ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕಿರಿಯ ಆರೋಗ್ಯ ಪರಿವೀಕ್ಷಕ, ಸಹಾಯಕ ಎಂಜಿನಿಯರ್‌ ಅವರನ್ನು ಕರ್ತವ್ಯಲೋಪದ ಕಾರಣಕ್ಕೆ ಅಮಾನತುಗೊಳಿಸಿ ಆದೇಶ ಹೊರಡಿಸಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ), ಕಾರ್ಯಪಾಲಕ ಎಂಜಿನಿಯರ್‌ (ಇಇ), ಸೂಪರಿಂಟೆಂಡಿಗ್‌ ಎಂಜಿನಿಯರ್‌ (ಎಸ್‌ಇ) ಹಾಗೂ ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರನ್ನು (ಜೆಸಿ) ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವುದಾಗಿ ಸಭೆಗೆ ತಿಳಿಸಿದರು. 

ಎಲ್ಲ ವಾರ್ಡ್‌ಗಳಲ್ಲೂ ತನಿಖೆ:

ಆಟೊ ಟಿಪ್ಪರ್‌ಗೆ ಹಣಪಾವತಿ ವಿಚಾರದಲ್ಲಿ ಎಲ್ಲಾ ವಾರ್ಡ್‌ಗಳಲ್ಲೂ ಇಂತಹ ಕ್ರಮ ನಡೆದಿರುವ ಸಾಧ್ಯತೆ ಇದೆ. ಪ್ರತಿ ವಾರ್ಡ್‌ನಲ್ಲೂ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ಇದಕ್ಕೆ ಒಪ್ಪಿದ ಮೇಯರ್‌ ಆರ್‌.ಸಂಪತ್‌ರಾಜ್‌, 198 ವಾರ್ಡ್‌ಗಳಲ್ಲೂ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದರು.

ಟೆಂಡರ್‌ ಕರೆಯುವಂತೆ ಒತ್ತಾಯ:

ಕಸ ವಿಲೇವಾರಿಗೆ ಟೆಂಡರ್‌ ಕರೆಯಬೇಕು. ಇದರಿಂದ ಪಾಲಿಕೆ ಅನಗತ್ಯ ವೆಚ್ಚಕ್ಕೂ ಕಡಿಮೆ ಆಗುತ್ತದೆ. ತಪ್ಪೆಸಗಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಕ್ಕು ಅನುಕೂಲವಾಗುತ್ತದೆ ಎಂದು ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.

‘ಜೆ.ಪಿ.ಉದ್ಯಾನ ವಾರ್ಡ್‌ನಲ್ಲಿ 2016ರ ಏಪ್ರಿಲ್‌ನಲ್ಲಿ ಕಸ ಸಾಗಣೆಗೆ ₹ 15 ಲಕ್ಷ ವೆಚ್ಚವಾಗಿತ್ತು. ನಾಲ್ಕು ತಿಂಗಳ ಬಳಿಕ ಈ ಮೊತ್ತ ₹ 23 ಲಕ್ಷಕ್ಕೆ ಏರಿಕೆ ಆಯಿತು. 2017ರ ಡಿಸೆಂಬರ್‌ ವೇಳೆಗೆ ₹ 34 ಲಕ್ಷ ಪಾವತಿ ಮಾಡಲಾಗುತ್ತಿದೆ. ಟೆಂಡರ್‌ ಕರೆದು ಗುತ್ತಿಗೆ ನೀಡುತ್ತಿದ್ದರೆ ಈ ಮೊತ್ತ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿರಲಿಲ್ಲ’ ಎಂದು ಮುನಿರತ್ನ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !