ಭಾನುವಾರ, ಮಾರ್ಚ್ 7, 2021
19 °C

ಗಗನಯಾತ್ರಿಗಳನ್ನು ಹೊತ್ತೊಯ್ಯುವ ಕೋಶ ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2014 ಮತ್ತು 2018ರಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡು ಭೂಮಿಗೆ ಮರಳಿದ್ದ ಗಗನಯಾತ್ರಿಗಳು ಕೂರುವ ಕೋಶ (ಕ್ಯಾಪ್ಸೂಲ್) ಬೆಂಗಳೂರು ಬಾಹ್ಯಾಕಾಶ ಸಾಧನಗಳ ಪ್ರದರ್ಶನದ ಪ್ರಧಾನ ಆಕರ್ಷಣೆಯಾಗಿತ್ತು.

2014ರಲ್ಲಿ ಜಿಎಸ್‌ಎಲ್‌ವಿ ಮಾರ್ಕ್‌–3 ರಾಕೆಟ್‌ ಮೂಲಕ ಮಾನವರಹಿತವಾಗಿ ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಉಡಾವಣೆ ಮಾಡಿತ್ತು. 4,000 ಕೆ.ಜಿ.ಯಷ್ಟು ಭಾರವಾಗಿರುವ ಈ ಕೋಶ ಬಾಹ್ಯಾಕಾಶದಲ್ಲಿ 126 ಕಿ.ಮೀ ದೂರ ಸಂಚರಿಸಿ ಯಶಸ್ವಿಯಾಗಿ ಬಂಗಾಳ ಕೊಲ್ಲಿಯಲ್ಲಿ ಇಳಿದಿತ್ತು.

2022 ರಲ್ಲಿ ಮಾನವ ಸಹಿತ ಗಗನಯಾನ ನೌಕೆಯನ್ನು ಇಸ್ರೊ ಉಡಾವಣೆ ಮಾಡುವ ಗುರಿ ಹೊಂದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಿದ್ದರು. 

ಗಗನಯಾತ್ರಿಗಳ ಆಹಾರ: ರಷ್ಯಾದ ಸ್ಪೇಸ್‌ ಫುಡ್‌ ಲ್ಯಾಬೊರೇಟರಿ ಕಂಪನಿಯು ಗಗನಯಾತ್ರಿಗಳಿಗಾಗಿ ವಿಶೇಷ ಆಹಾರ ಅಭಿವೃದ್ಧಿಪಡಿಸಿದೆ. ಈ ಆಹಾರ ಪದಾರ್ಥಗಳು ಎಕ್ಸ್‌ಪೋದಲ್ಲಿ ಹೆಚ್ಚಿನ ಜನರನ್ನು ಸೆಳೆದವು. ಚಿಕನ್‌ ಸೂಪ್‌, ಚಿಕನ್‌ ಮೀಟ್, ಕಾಟೇಜ್‌ ಚೀಸ್‌ನ ಟ್ಯೂಬ್‌ಗಳನ್ನು ಗಗನಯಾತ್ರಿಗಳು ಬಳಸಲು ಅನುಕೂಲವಾಗುವಂತೆ ತಯಾರಿಸಲಾಗಿದೆ.

‘ಗಗನಯಾತ್ರಿಗಳಿಗೆ ನಾವು ತಿನ್ನುವ ಆಹಾರದಲ್ಲಿ ಸಿಗುವ ಎಲ್ಲಾ ಪೌಷ್ಟಿಕಾಂಶಗಳನ್ನೂ ಬಳಸಿ ಆಹಾರ ತಯಾರು ಮಾಡಲಾಗುತ್ತದೆ. ಆದರೆ ಇದಕ್ಕಾಗಿ ವಿಶೇಷವಾದ ಪ್ಯಾಕಿಂಗ್‌ ವ್ಯವಸ್ಥೆಯನ್ನು ಬಳಸಿದ್ದೇವೆ’ ಎಂದು ರಷ್ಯಾದ ಕಂಪನಿಯ ವಕ್ತಾರೆ ವಿಕ್ಟೋರಿಯಾ ಲಿಸೋವಾ ಅವರು ಮಾಹಿತಿ ನೀಡಿದರು.

‘ಕೈಗಾರಿಕೆಗಳಿಗೆ  ₹9 ಸಾವಿರ ಕೋಟಿ’
‘ಕೇಂದ್ರ ಸರ್ಕಾರ 40 ಉಪಗ್ರಹಗಳ ಉಡಾವಣಾ ವಾಹನಗಳ ತಯಾರಿಕೆಗಾಗಿ ಘೋಷಿಸಿದ ₹10,400 ಕೋಟಿಯಲ್ಲಿ ₹ 9 ಸಾವಿರ ಕೋಟಿಯಷ್ಟು ಪಾಲು ಕೈಗಾರಿಕೆಗಳಿಗೆ ಹೋಗಲಿದೆ’ ಎಂದು ಇಸ್ರೊ ಮುಖ್ಯಸ್ಥ ಡಾ.ಕೆ. ಶಿವನ್‌ ಹೇಳಿದರು.

‘ಕೈಗಾರಿಕೆಗಳ ಸಹಭಾಗಿತ್ವ ಇಲ್ಲದೆ ಬಾಹ್ಯಾಕಾಶ ತಂತ್ರಜ್ಞಾನ ಬೆಳೆಯಲು ಸಾಧ್ಯವಿಲ್ಲ. ಇತ್ತೀಚೆಗೆ ಆ ವಲಯ ನಮ್ಮೊಂದಿಗೆ ಕೈಜೋಡಿಸುತ್ತಿದೆ’ ಎಂದು ತಿಳಿಸಿದರು.

‘ಕೈಗಾರಿಕೆಗಳ ಸಹಭಾಗಿತ್ವದ ಜೊತೆಗೆ ಪಾಲುದಾರಿಕೆ ಇದ್ದರೆ ಮಾತ್ರ ನಮ್ಮ ಗುರಿಯನ್ನು ತಲುಪಬಹುದು. ಮುಂದಿನ ಮೂರು ವರ್ಷಗಳಲ್ಲಿ 59 ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆ ಇದೆ. ಸರಿಯಾದ ಸಮಯಕ್ಕೆ ಯೋಜನೆಯನ್ನು ಮುಕ್ತಾಯಗೊಳಿಸಬೇಕಾದ ಹೊಣೆ ನಮ್ಮ ಮೇಲಿದೆ. ಇದಕ್ಕೆ ಕೈಗಾರಿಕೆಗಳು ನೆರವು ನೀಡಬೇಕು’ ಎಂದು  ಮನವಿ ಮಾಡಿದರು.

‘2022ರ ಮಾನವಸಹಿತ ಗಗನಯಾನದ ಯೋಜನೆ ನಮ್ಮ ಕನಸು. ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧ್ಯತೆಗಳು ಕೂಡ ಹೆಚ್ಚಲಿವೆ. ಇಸ್ರೊ ಸಂಸ್ಥೆಗೆ ಇದು ದೊಡ್ಡ ಸವಾಲು. ನಾವು ಖಂಡಿತವಾಗಿಯೂ ಈ ಸವಾಲಿನಲ್ಲಿ ಗೆಲ್ಲುತ್ತೇವೆ’ ಎಂದು ತಿಳಿಸಿದರು.

‘ನಮಗೆ 500ಕೆಜಿಯಿಂದ 700 ಕೆಜಿಯಷ್ಟು ಭಾರದ ಲಘು ಉಪಗ್ರಹಗಳನ್ನು ಕಕ್ಷೆಗೆ ಸೇರ್ಪಡೆ ಮಾಡುವಂತಹ ಉಡಾವಣಾ ವಾಹನಗಳು ನಮಗೆ ದೊಡ್ಡ ಪ್ರಮಾಣದಲ್ಲಿ ಬೇಕಾಗಿವೆ. ಪ್ರತಿವರ್ಷ ನಮಗೆ 50ರಿಂದ 60 ಉಡಾವಣಾ ವಾಹನಗಳು ಬೇಕು’ ಎಂದು ಹೇಳಿದರು.

ಭಾರತ–ಫ್ರಾನ್ಸ್‌ ನಡುವೆ ಒಪ್ಪಂದ
ಇಸ್ರೊದ ಮೊದಲ ಮಾನವಸಹಿತ ನೌಕೆ ‘ಗಗನಯಾನ’ ಯೋಜನೆಯಲ್ಲಿ ಭಾರತ ಹಾಗೂ ಫ್ರಾನ್ಸ್‌ ದೇಶಗಳು ಒಟ್ಟಿಗೆ ಕೆಲಸ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ.

‘ಗಗನಯಾತ್ರಿಗಳಿಗೆ ಅಗತ್ಯವಾದ ಆಸ್ಪತ್ರೆಯ ಸೌಕರ್ಯವನ್ನು ಫ್ರಾನ್ಸ್‌ ಒದಗಿಸಲಿದೆ. ಔಷಧಿಗಳು, ಆರೋಗ್ಯ ತಪಾಸಣೆ, ವಿಕಿರಣಗಳಿಂದ ರಕ್ಷಿಸುವುದು, ಆಮ್ಲಜನಕ ಪೂರೈಕೆಯನ್ನು ಫ್ರಾನ್ಸ್‌ ಮಾಡಲಿದೆ’ ಎಂದು ಫ್ರೆಂಚ್‌ ಸ್ಪೇಸ್‌ ಏಜೆನ್ಸಿ ಅಧ್ಯಕ್ಷ ಜೀನ್‌ ವೆಸ್‌ ಲೆ ಗಾಲ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು