ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳ ಹಿಡಿಯದಿರಲಿ ವಾರ್ಡ್‌ ಸಮಿತಿ ಸಭೆ

Last Updated 28 ಮಾರ್ಚ್ 2022, 21:01 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ತಿಂಗಳೂ ಎರಡು ಸಭೆ ಕಡ್ಡಾಯ’

ವಾರ್ಡ್‌ ಸಭೆಗಳನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ಬೇಕಾದ ಅಗತ್ಯ ಸೌಕರ್ಯವನ್ನು ಬಿಬಿಎಂಪಿ ಒದಗಿಸಿದೆ. 198 ವಾರ್ಡ್‌ಗಳಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 4 ಸಾವಿರಕ್ಕೂ ಅಧಿಕ ವಾರ್ಡ್ ಸಭೆಗಳು ನಡೆದಿವೆ. ದೇಶದ ಮಹಾನಗರಗಳಲ್ಲೇ ಇದು ಅತ್ಯಧಿಕ. ಪ್ರತಿ ವಾರ್ಡ್‌ನಲ್ಲೂ ತಿಂಗಳಲ್ಲಿ ಕನಿಷ್ಠ ಎರಡು ಸಲ ಸಭೆ ನಡೆಸುವುದು ಆಯಾ ವಾರ್ಡ್‌ನ ನೋಡಲ್‌ ಅಧಿಕಾರಿಯ ಜವಾಬ್ದಾರಿ.

ವಾರ್ಡ್‌ ಸಭೆಗಳೂ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ. ವಾರ್ಡ್‌ನ ಸಮಗ್ರ ಅಭಿವೃದ್ಧಿ ಕುರಿತ ಚರ್ಚೆಗೆ ಈ ಸಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಜನರಲ್ಲೂ ಜಾಗೃತಿ ಮೂಡಬೇಕು. ಈ ವ್ಯವಸ್ಥೆಯ ಬಗ್ಗೆ ಆಗಾಗ ಪರಿಶೀಲನೆಯನ್ನೂ ನಡೆಸುತ್ತಿದ್ದೇವೆ. ಕೆಲವು ವಾರ್ಡ್‌ಗಳಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಸಭೆ ನಡೆಯದಿದ್ದರೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು. ಎಲ್ಲ ವಾರ್ಡ್‌ಗಳಲ್ಲೂ ಪ್ರತಿ ತಿಂಗಳು ಸಭೆ ನಡೆಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡುತ್ತೇನೆ.

ಗೌರವ್ ಗುಪ್ತ, ಮುಖ್ಯ ಆಯುಕ್ತ, ಬಿಬಿಎಂಪಿ
****
‘77 ವಾರ್ಡ್‌ಗಳಲ್ಲಿ ಮಾತ್ರ ನಿರಂತರ ಸಭೆ’

ವಾರ್ಡ್ ಸಭೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಜನ ಜಾಗೃತಿ ಮೂಡಿಸಲು ಜನಾಗ್ರಹ ಸಂಸ್ಥೆ ಪ್ರಯತ್ನಿಸುತ್ತಿದೆ. ವಾರ್ಡ್‌ಗಳು ಹೇಗೆ ನಡೆಯುತ್ತಿವೆ ಎಂಬ ಬಗ್ಗೆ 2021ರಲ್ಲಿ ಅಧ್ಯಯನ ನಡೆಸಿದ್ದೆವು. 198 ವಾರ್ಡ್‌ಗಳಲ್ಲಿ 77ರಲ್ಲಿ ಪ್ರತಿ ತಿಂಗಳೂ ಸಭೆಗಳು ನಡೆದಿದ್ದವು. ಇನ್ನುಳಿದ ವಾರ್ಡ್‌ಗಳಲ್ಲಿ ಕಾಲ ಕಾಲಕ್ಕೆ ಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ವಾರ್ಡ್‌ ಸಭೆಗಳು ಸರಿಯಾಗಿ ನಡೆಯದೇ ಇರುವುದಕ್ಕೆ ನೋಡಲ್‌ ಅಧಿಕಾರಿಗಳು ಪದೇ ಪದೇ ಬದಲಾಗುವುದೂ ಕಾರಣ. ವಾರ್ಡ್‌ ಸಭೆ ನಡೆಸುವುದು ಹೆಚ್ಚಿನ ಹೊರೆ ಎಂದು ಕೆಲವು ಅಧಿಕಾರಿಗಳು ಭಾವಿಸುತ್ತಾರೆ. ‘ಈ ವಾರ್ಡ್‌ ನಮ್ಮದು’ ಎಂಬ ಕಳಕಳಿ ಅವರಲ್ಲಿ ಮೂಡಬೇಕು. ಆಗ ವಾರ್ಡ್‌ ಸಭೆಗಳ ಮೂಲಕವೂ ಅದ್ಭುತ ಕೆಲಸಗಳನ್ನು ಮಾಡಲು ಸಾಧ್ಯ.

ಶ್ರೀನಿವಾಸ ಅಲವಿಲ್ಲಿ, ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ, ಜನಾಗ್ರಹ ಸಂಸ್ಥೆ
***
‘ಸುಧಾರಣೆಗೆ ಅಗತ್ಯ ಕ್ರಮ’

ಕೆಲವು ವಾರ್ಡ್‌ಗಳಲ್ಲಿ ವಾರ್ಡ್‌ ಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಕೆಲವು ವಾರ್ಡ್‌ ಸಭೆಗಳಿಗೆ ಸಂಬಂಧಿಸಿದ ಮಾಹಿತಿಗಳು ಪಾಲಿಕೆ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತಿಲ್ಲ ಎಂಬ ಬಗ್ಗೆ ನನಗೂ ದೂರುಗಳು ಬಂದಿವೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ಎಲ್ಲ ವಾರ್ಡ್‌ಗಳಲ್ಲೂ ಸಭೆಯನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ವಾರ್ಡ್‌ ಸಭೆಗಳ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಚಿಂತನೆಯೂ ಇದೆ.

ಎಸ್‌.ರಂಗಪ್ಪ, ವಿಶೇಷ ಆಯುಕ್ತ, ಆಡಳಿತ ವಿಭಾಗ, ಬಿಬಿಎಂಪಿ
****
‘ಅಧಿಕಾರಿಗಳೇ ಬರುತ್ತಿಲ್ಲ’

ನಮ್ಮ ವಾರ್ಡ್‌ನಲ್ಲಿ ನೋಡಲ್‌ ಅಧಿಕಾರಿಯೇ ಇಲ್ಲ. ಸ್ಥಳೀಯರ ಒತ್ತಡಕ್ಕೆ ಮಣಿದು ಕಷ್ಟಕ್ಕೆ ತಿಂಗಳಿಗೊಮ್ಮೆ ಸಭೆ ನಡೆಸುತ್ತಾರೆ. ಜನರ ಸಮಸ್ಯೆ ಬಗೆಹರಿಸಲು ಬೇಕಾದ ಇಲಾಖೆಗಳ ಅಧಿಕಾರಿಗಳೇ ಭಾಗವಹಿಸುತ್ತಿಲ್ಲ. ಬಹುತೇಕ ಸಭೆಗಳು ಕಾಟಾಚಾರಕ್ಕೆ ನಡೆಯುತ್ತಿವೆ. ಯಾವುದಾದರೂ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರೂ, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಸವಿತಾ, ಆರ್‌.ಆರ್‌.ನಗರ ನಿವಾಸಿ
****
‘ವಾರ್ಡ್‌ಗೆ ಅನುದಾನ ಹೆಚ್ಚಿಸಿ’

ವಾರ್ಡ್‌ ಮಟ್ಟದ ಅಭಿವೃದ್ಧಿ ಕಾಮಗಾರಿಗಳ ಸಲುವಾಗಿ ಬಿಬಿಎಂಪಿ ಪ್ರತಿ ವಾರ್ಡ್‌ ತಲಾ ₹ 60 ಲಕ್ಷ ಅನುದಾನ ಮೀಸಲಿಟ್ಟಿದೆ. ಇದು ಸಾಲುತ್ತಿಲ್ಲ. ಈ ಅನುದಾನ ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

‘ಈ ಬಗ್ಗೆ ನಮಗೂ ಅನೇಕ ವಾರ್ಡ್‌ಗಳಿಂದ ಬೇಡಿಕೆ ಬಂದಿದೆ. ಬಿಬಿಎಂಪಿ ಬಜೆಟ್‌ನಲ್ಲಿ ವಾರ್ಡ್‌ಗಳಿಗೆ ಹಂಚಿಕೆ ಮಾಡುವ ಅನುದಾನ ಹೆಚ್ಚಿಸುವ ಚಿಂತನೆ ಇದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದರು.

ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ವಾರ್ಡ್‌ ಸಭೆಗಳನ್ನು ನಡೆಸುತ್ತಿರುವ ಮಹಾನಗರ ಎಂಬ ಹೆಗ್ಗಳಿಕೆ ಬಿಬಿಎಂಪಿಯದು. 30ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಪ್ರತಿ ತಿಂಗಳು ವಾರ್ಡ್‌ ಸಭೆಗಳು ಕಾಲಬದ್ಧವಾಗಿ ಅಚ್ಚುಕಟ್ಟಾಗಿ ನಡೆಯುತ್ತಿವೆ. ಆದರೆ,
ಇನ್ನುಳಿದ ವಾರ್ಡ್‌ಗಳಲ್ಲಿ ಸಭೆ ನಡೆಸುವ ಉತ್ಸಾಹ ಸೊರಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ವ್ಯಕ್ತವಾಗಿದೆ.

2020ರ ಸೆ.10ಕ್ಕೆ ಮುನ್ನ ಬಿಬಿಎಂಪಿ ಚುನಾವಣೆ ನಡೆದು ಹೊಸ ಕೌನ್ಸಿಲ್‌ ಅಸ್ತಿತ್ವಕ್ಕೆ ಬರಬೇಕಿತ್ತು. ಆದರೆ, ಚುನಾವಣೆಯೇ ನಡೆದಿಲ್ಲ. ಪಾಲಿಕೆ ಸದಸ್ಯರಿಲ್ಲದಿದ್ದರೂ ಜನರ ಅಹವಾಲು ಆಲಿಸುವುದಕ್ಕೆ ಯಾವುದೇ ಕೊರತೆ ಎದುರಾಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಪ್ರತಿ ವಾರ್ಡ್‌ಗೆ ಒಬ್ಬರು ನೋಡಲ್‌ ಅಧಿಕಾರಿಯನ್ನು ನೇಮಿಸಿದ್ದರು. ಅವರ ನೇತೃತ್ವದಲ್ಲೇ ವಾರ್ಡ್‌ ಸಮಿತಿಗಳನ್ನು ಪುನರ್‌ರಚಿಸಿ ಆದೇಶ ಹೊರಡಿಸಿದ್ದರು. ತಿಂಗಳಲ್ಲಿ ಎರಡು ಬಾರಿ (ಮೊದಲ ಮತ್ತು ಮೂರನೇ ಶನಿವಾರ) ತಪ್ಪದೇ ವಾರ್ಡ್ ಸಮಿತಿ ಸಭೆಗಳನ್ನು ನಡೆಸಬೇಕು ಎಂದು ಸೂಚಿಸಿದ್ದರು. ಪ್ರತಿ ವಾರ್ಡ್ ಸಭೆಯ ನಿರ್ಣಯಗಳ ಪ್ರತಿ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://site.bbmp.gov.in/ward_committee.html) ಪ್ರಕಟಿಸಲು ಕ್ರಮ ಕೈಗೊಂಡಿದ್ದರು.

ಆರಂಭದಲ್ಲಿ ಕೆಲವು ವಾರ್ಡ್‌ಗಳಲ್ಲಿ ವಾರ್ಡ್‌ ಸಭೆಗಳು ಸಾಂಗವಾಗಿ ನಡೆದವು. ಕಳೆದ ವರ್ಷ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡಾಗ ಹಾಗೂ ಲಾಕ್‌ಡೌನ್‌ ಜಾರಿಯಲ್ಲಿದ್ದ ಸಂದರ್ಭದಲ್ಲಿ ಹೆಚ್ಚಿನ ಕಡೆ ವಾರ್ಡ್‌ ಸಭೆಗಳು ನಡೆಯಲೇ ಇಲ್ಲ. ಕೋವಿಡ್‌ ಆರ್ಭಟ ಕಡಿಮೆಯಾದ ಬಳಿಕ ಕೆಲವು ವಾರ್ಡ್‌ಗಳಲ್ಲಿ ವಾರ್ಡ್ ಸಭೆಗಳು ಮತ್ತೆ ಹಳಿಗೆ ಮರಳಿದ್ದವು. ಅಷ್ಟರಲ್ಲಿ ಕೋವಿಡ್‌ ಮೂರನೇ ಅಲೆ (ಕಳೆದ ಡಿಸೆಂಬರ್‌ನಲ್ಲಿ) ಕಾಣಿಸಿಕೊಂಡಿತು. ಆಗ ಮತ್ತೆ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಬಿಗುಗೊಳಿಸಿದ್ದರಿಂದ ವಾರ್ಡ್‌ ಸಭೆಗಳು ಮತ್ತೆ ಹಳ್ಳ ಹಿಡಿದವು.

ಈಗಂತೂ ನಗರದಲ್ಲಿ ಕೋವಿಡ್‌ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಸಭೆ ಸಮಾರಂಭ ನಡೆಸಲು ಇದ್ದ ನಿರ್ಬಂಧಗಳೂ ಬಹುತೇಕ ತೆರವುಗೊಂಡಿವೆ. ಆದರೂ ಹೆಚ್ಚಿನ ವಾರ್ಡ್‌ಗಳಲ್ಲಿ ವಾರ್ಡ್‌ ಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ವಾರ್ಡ್ ಸಭೆಗಳಿಗೆ ಸಂಬಂಧಿಸಿದ ಮಾಹಿತಿ ನೀಡುವುದಕ್ಕೆಂದೇ ಪ್ರತ್ಯೇಕ ಕೊಂಡಿಯ ಸೌಲಭ್ಯವನ್ನೂ ಒದಗಿಸಲಾಗಿದೆ. ಅದರಲ್ಲಿ ಆಯಾ ವಾರ್ಡ್‌ನ ನೋಡಲ್‌ ಅಧಿಕಾರಿ ಯಾರು, ಸಮಿತಿಯ ಸಭೆ ಯಾವಾಗ ನಡೆಯುತ್ತದೆ, ಹಿಂದಿನ ಸಭೆಗಳಲ್ಲಿ ಯಾವೆಲ್ಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಇದರಲ್ಲಿ ಹಂಚಿಕೊಳ್ಳಲಾಗುತ್ತದೆ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ರಾಜಮಹಲ್ ಗುಟ್ಟಹಳ್ಳಿ ಹಾಗೂ ಯಲಚೇನಹಳ್ಳಿ ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ವಾರ್ಡ್‌ಗಳ ಸಭೆಯ ನಿರ್ಣಯಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯ ಇವೆ.

ಸುಮಾರು 30 ವಾರ್ಡ್‌ಗಳ ಅಧಿಕಾರಿಗಳು ವಾರ್ಡ್ ಸಭೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿ ತಿಂಗಳೂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಆದರೆ, 15 ವಾರ್ಡ್‌ಗಳ ಸಭೆಗಳಿಗೆ ಸಂಬಂಧಿಸಿದ ಮಾಹಿತಿ ಏಳೆಂಟು ತಿಂಗಳುಗಳಿಂದ ವೆಬ್‌ಸೈಟ್‌ನಲ್ಲೇ ಅಪ್‌ಲೋಡ್‌ ಆಗಿಯೇ ಇಲ್ಲ.2022ರ ಮಾರ್ಚ್‌ ತಿಂಗಳಲ್ಲಿ ಕೇವಲ 31 ವಾರ್ಡ್‌ಗಳ ವಾರ್ಡ್‌ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದ ಮಾಹಿತಿಗಳು ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿವೆ.

ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ವಾರ್ಡ್‌ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಿದ್ದರೂ, ಕೆಲವೊಮ್ಮೆ ಕಾರಣಾಂತರಗಳಿಂದಾಗಿ ಸಭೆಯ ದಿನಾಂಕವನ್ನು ಬದಲಾಯಿಸಬೇಕಾಗುತ್ತದೆ. ವಾರ್ಡ್‌ ಸಭೆಯ ದಿನಾಂಕ ಮತ್ತು ಸಮಯದ ಮಾಹಿತಿಯೂ ಪಾಲಿಕೆ ವೆಬ್‌ಸೈಟ್‌ನಲ್ಲಿ ಸರಿಯಾಗಿ ಅಪ್‌ಲೋಡ್‌ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT