ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು:ಆಧಾರ್ ನೋಂದಣಿಗೆ ನೂಕುನುಗ್ಗಲು

ಆಧಾರ್ ನೋಂದಣಿ ಕೇಂದ್ರಗಳ ಆರಂಭಕ್ಕೆ ಒತ್ತಾಯ
Last Updated 4 ಮಾರ್ಚ್ 2018, 10:09 IST
ಅಕ್ಷರ ಗಾತ್ರ

ಬೀರೂರು: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುತ್ತಿರುವ ಸರ್ಕಾರಗಳು ಆಧಾರ್ ಸೇವೆಯನ್ನು ಜನರಿಗೆ ಅಷ್ಟೆ ಪೂರಕವಾಗಿ ಒದಗಿಸುವಲ್ಲಿ ಬದ್ಧತೆ ತೋರುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಡೂರು ತಾಲ್ಲೂಕಿನಲ್ಲಿ 8 ಹೋಬಳಿಗಳ ನಾಡ ಕಚೇರಿ ಮತ್ತು ಕಡೂರು, ಬೀರೂರು ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಸಂಬಂಧಿತ ತಿದ್ದುಪಡಿ ಅಥವಾ ನೂತನ ಅರ್ಜಿ ಸ್ವೀಕರಿಸುವ ಕಾರ್ಯ ನಡೆಯುತ್ತಿದ್ದು, ಆದರೆ ಅಂಚೆ ಕಚೇರಿಗಳು ತನ್ನ ಕಾರ್ಯಬಾಹುಳ್ಯದ ನಡುವೆ ಆಧಾರ್ ನೋಂದಣಿ ಅಥವಾ ತಿದ್ದುಪಡಿ ಮಾಡಲು ಸಮಯದ ಕೊರತೆ ಎಂದು ಸಾರ್ವಜನಿಕ ಮನವಿಯನ್ನು ತಿರಸ್ಕರಿಸುತ್ತಿವೆ’ ಎಂದು ಆರೋಪಿಸಿದ್ದಾರೆ.

ನಾಡಕಚೇರಿಗಳು ವಾರದಲ್ಲಿ 3 ದಿನ ಅದೂ ಮಧ್ಯಾಹ್ನ 2ರಿಂದ 4ರ ಸಮಯದಲ್ಲಿ ಮಾತ್ರ ಆಧಾರ್ ತಿದ್ದುಪಡಿ ಅಥವಾ ನೋಂದಣಿ ಕಾರ್ಯ ಮಾಡುತ್ತಿದ್ದು, ಸದ್ಯ ಆರ್‍ಟಿಇ ಅಡಿ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪೋಷಕರು ಅರ್ಜಿ ಸಲ್ಲಿಸಲು ತೆರಳಿದರೆ ಬಹಳಷ್ಟು ಪೋಷಕರ ಮತ್ತು ಮಕ್ಕಳ ಆಧಾರ್ ಮಾಹಿತಿಯಲ್ಲಿ ವಿಳಾಸ ಸೇರಿ ಹಲವು ವಿಷಯಗಳು ತಾಳೆಯಾಗುತ್ತಿಲ್ಲ. ಕೆಲವರ ಕುಟುಂಬಗಳಿಂದ ವಿಂಗಡಣೆಯಾಗಿದ್ದು, ಹೊಸ ಪಡಿತರ ಚೀಟಿ ಪಡೆಯಲೂ ಆಧಾರ್ ತುರ್ತು ಅಗತ್ಯವಾಗಿದೆ. ಆಧಾರ್ ಮಾಹಿತಿ ಸರಿಯಿಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಆಧಾರ್ ಸೇವೆಗಳು ಶೀಘ್ರವಾಗಿ ಲಭ್ಯವಾಗದಿರುವುದು ಸಾರ್ವಜನಿಕರ ನೆಮ್ಮದಿ ಕೆಡಿಸಿದೆ.

ತಮ್ಮ ಮಕ್ಕಳಿಗೆ ಆಯ್ದ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಎನ್ನುವ ಕನಸಿಗೆ ಎಲ್ಲಿ ಭಂಗ ಬರುವುದೋ ಎಂದು ಪೋಷಕರು ಆತಂಕ ಎದುರಿಸುವ ಸ್ಥಿತಿ ಇದರಿಂದ ನಿರ್ಮಾಣವಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

‘ಕಳೆದ ಬಾರಿಯೂ ಹೀಗೆಯೇ ಆಗಿತ್ತು. ಪೋಷಕರು ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ಆರ್‍ಟಿಇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ದಿನಾಂಕವನ್ನು ವಿಸ್ತರಿಸಲಿದೆ, ಅಲ್ಲದೆ ಈ ಬಾರಿ ವಾರ್ಡ್‍ಗೆ ಸೀಮಿತವಾಗಿ ಅರ್ಜಿ ಸ್ವೀಕರಿಸುತ್ತಿಲ್ಲ.

ಬದಲಿಗೆ ತಮ್ಮ ಪಟ್ಟಣ ಅಥವಾ ನಗರ ಪ್ರದೇಶದ ಯಾವ ಶಾಲೆಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ ಲಭ್ಯತೆ ಆಧಾರದ ಮೇಲೆ ಸೀಟು ಹಂಚಿಕೆ ಆಗಲಿದೆ’ ಎಂದು ಡಿಡಿಪಿಐ ‌ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ ಸರ್ವರ್‍ನಲ್ಲಿ ಇರಬಹುದಾದ ದೋಷಗಳ ಕುರಿತು ಇಲಾಖೆ ಆಯುಕ್ತರ ಗಮನ ಸೆಳೆದಿದ್ದು, ಶೀಘ್ರದಲ್ಲಿಯೇ ಈ ದೋಷವನ್ನು ಪರಿಹರಿಸಲಾಗುವುದು, ಕಳೆದ ಸಾಲಿನಲ್ಲಿ ಆರ್‌ಟಿಇ ಅಡಿ ನಿಗದಿಪಡಿಸಲಾಗಿದ್ದ ಸೀಟುಗಳ ಭರ್ತಿ ಕೂಡ ಆಗಿರಲಿಲ್ಲ, ಹೀಗಾಗಿ ಸೀಟು ಲಭ್ಯತೆ ಬಗ್ಗೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ’ ಎನ್ನುತ್ತಾರೆ.

ಸರ್ಕಾರ ಮೊದಲು ಆರ್.ಟಿ.ಇ ಸರ್ವರ್ ಸರಿಪಡಿಸುವಲ್ಲಿ ಆದ್ಯತೆ ನೀಡಬೇಕು. ಎಲ್ಲ ವಿಷಯಗಳಿಗೂ ಕಡ್ಡಾಯಗೊಳಿಸಿರುವ ಆಧಾರ್ ತಿದ್ದುಪಡಿ ಅಥವಾ ನೊಂದಣಿ ಕೇಂದ್ರಗಳನ್ನು ಜನರಿಗೆ ಸುಲಭವಾಗಿ ಸೇವೆ ದೊರೆಯುವಂತೆ ಸಾಕಷ್ಟು ಸಂಖ್ಯೆಯಲ್ಲಿ ಸ್ಥಾಪಿಸಿದಲ್ಲಿ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಪ್ರತಿ ಪಂಚಾಯಿತಿಗೆ ಒಂದರಂತೆ ನೋಂದಣಿ ಕೇಂದ್ರಗಳನ್ನು ಆರಂಭಿಸಲು ಮುಂದಾಗಬೇಕು ಎನ್ನುವುದು ಜನರ  ಒತ್ತಾಯವಾಗಿದೆ.

ಎನ್‌.ಸೋಮಶೇಖರ್, ಬೀರೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT