ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಕೊಳೆಯಲು ಬಿಟ್ಟು ನರಳಿಸಿದ ಸರ್ಕಾರ: ಹಿರಿಯ ಪತ್ರಕರ್ತ ಪಿ. ಸಾಯಿನಾಥ್

ಪತ್ರಕರ್ತ ಪಿ. ಸಾಯಿನಾಥ್‌ಗೆ ಬೋಧಿವೃಕ್ಷ ಪ್ರಶಸ್ತಿ ಪ್ರದಾನ
Last Updated 15 ಏಪ್ರಿಲ್ 2021, 5:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಜನ ಆಹಾರವಿಲ್ಲದೆ ನರಳಿದರು. ಆಹಾರ ಧಾನ್ಯ ಸಂಗ್ರಹ ಸಾಕಷ್ಟಿದ್ದರೂ ಸರ್ಕಾರ ಅದನ್ನು ಬಡವರಿಗೆ ಹಂಚದೆ ಕೊಳೆಯಲು ಬಿಟ್ಟಿತು’ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಬಿ.ಆರ್. ಅಂಬೇಡ್ಕರ್‌ ಜನ್ಮದಿನಾಚರಣೆ ಪ್ರಯುಕ್ತ ನಗರದಲ್ಲಿ ಬುಧವಾರ ‘ಸ್ಫೂರ್ತಿ ಧಾಮ’ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಬೋಧಿ ವೃಕ್ಷ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವವರ ಸಂಖ್ಯೆಯಲ್ಲಿ ದಲಿತ ಹಾಗೂ ಆದಿವಾಸಿ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಮಕ್ಕಳು ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರೂ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕೂಡ ಪೂರೈಸಲಿಲ್ಲ. ಇದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿರುವ ಜಾತಿ ಹಾಗೂ ವರ್ಗಾಧಾರಿತ ತಾರತಮ್ಯಕ್ಕೆ ಸಾಕ್ಷಿ’ ಎಂದು ಹೇಳಿದರು.

‘ಕೋಟ್ಯಂತರ ಜನ ಆಹಾರವಿಲ್ಲದೆ ನರಳಿದರೂ, ಫೋರ್ಬ್ಸ್‌ ಪತ್ರಿಕೆಯು ಇತ್ತೀಚಿಗೆ ಕೋಟ್ಯಧಿಪತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಹಾಗೂ 140ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ’ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೇಶದ ಸಮಸ್ಯೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಅದನ್ನು ಪರಿಹರಿಸಲು ಆದ್ಯತೆ ನೀಡಬೇಕು’ ಎಂದರು.

ರೈತ ನಾಯಕ ವೀರಸಂಗಯ್ಯ, ವಿ.ನಾಗರಾಜ್, ಸಿಎಎ ಹೋರಾಟಗಾರ್ತಿ ಬಿಲ್ಕಿಸ್ ಬಾನು, ಶಾರದಾ ಮಾಳಗಿ ಹಾಗೂ ಮರ್ಸಿ ಏಂಜೆಲ್ಸ್‌ ಅವರಿಗೆ ಬೋಧಿವರ್ಧನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸ್ಫೂರ್ತಿಧಾಮದ ಅಧ್ಯಕ್ಷ ಎಸ್. ಮರಿಸ್ವಾಮಿ, ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT