ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಬರವಣಿಗೆಯಲ್ಲಿ ಭಿನ್ನತೆ ಅಗತ್ಯ

ಹಿರಿಯ ಕ್ರೀಡಾ ಪತ್ರಕರ್ತೆ ಶಾರದಾ ಉಗ್ರ ಅಭಿಮತ
Last Updated 10 ನವೆಂಬರ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಅಪಾರ ಆಸಕ್ತಿ, ಹೊಸದನ್ನು ಹುಡುಕುವ, ಮುನ್ನುಗ್ಗುವ ಛಲವಿದ್ದರೆ ಉತ್ತಮ ಕ್ರೀಡಾ ಪತ್ರಕರ್ತರಾಗಲು ಸಾಧ್ಯ ಎಂದು ಹಿರಿಯ ಕ್ರೀಡಾ ಪತ್ರಕರ್ತೆ ಶಾರದಾ ಉಗ್ರ ಅಭಿಪ್ರಾಯಪಟ್ಟರು.

‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಭಾನುವಾರ ನಡೆದ ‘ಕ್ರೀಡಾ ಬರವಣಿಗೆ’ ಕುರಿತ ಸಂವಾದದಲ್ಲಿ ಅವರು ವಿಷಯ ಪ್ರಸ್ತಾಪಿಸಿದರು.

ಯಾವುದೇ ಪಂದ್ಯಗಳ ವರದಿಯನ್ನು ಯಥಾವತ್ತಾಗಿ ನಿರೂಪಿಸುವುದರಿಂದ ಅದು ಪರಿಣಾಮಕಾರಿ ಎನಿಸುವುದಿಲ್ಲ. ಭಿನ್ನ, ವಿಶೇಷವಾದುದನ್ನು ಹೇಳಬೇಕಾಗುತ್ತದೆ. ಪಂದ್ಯಗಳು ಟಿ.ವಿ. ಹಾಗೂ ಅಂತರ್ಜಾಲಗಳಲ್ಲಿ ಪ್ರಸಾರವಾಗುತ್ತಿರುವ ನಂತರ ಕ್ರೀಡಾ ಪತ್ರಕರ್ತನಿಂದ ಹೆಚ್ಚಿನದನ್ನು ಜನ ನಿರೀಕ್ಷಿಸುತ್ತಾರೆ. ಇದರಿಂದ ಪತ್ರಕರ್ತರ ಮೇಲೆ ಒತ್ತಡವೂ ಹೆಚ್ಚಾಗುತ್ತದೆ. ಕಾಲದೊಂದಿಗೆ ಹೆಜ್ಜೆ ಹಾಕಬೇಕಾಗುತ್ತದೆ. ಹಳೆಯದಕ್ಕೆ ಜೋತು ಬೀಳಲಾಗುವುದಿಲ್ಲ ಎಂದು ಅವರು ನುಡಿದರು.

ಭಾರತದಲ್ಲಿ ಫುಟ್‌ಬಾಲ್‌ ಕ್ರೀಡೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವವರು ಹೆಚ್ಚು ಅಭಿವೃದ್ಧಿ ಕಾಣದ ದೇಶದ ಈಶಾನ್ಯ ಭಾಗದವರು. ಯಾವುದೇ ಕ್ರೀಡೆಯು ಆಸಕ್ತಿ, ಕುತೂಹಲವನ್ನು ಬೇಡುತ್ತದೆ ಎಂದು ಅವರು ನುಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ ಹಿರಿಯ ಅಂಪೈರ್‌ ನ್ಯೂಜಿಲೆಂಡ್‌ನ ಸೈಮನ್‌ ಟಫೆಲ್‌ ಮಾತನಾಡಿ, ಎಳವೆಯಲ್ಲೇ ಮಕ್ಕಳಿಗೆ ಅವರ ಆಸಕ್ತಿ ಕ್ಷೇತ್ರದ ಕಡೆಗೆ ತೆರಳಲು ಅವಕಾಶಗಳನ್ನು ಸೃಷ್ಟಿಸಿಕೊಡಬೇಕು. ಅಂಪೈರಿಂಗ್‌ ಸುಲಭದ ವೃತ್ತಿಯಲ್ಲ. ಸಾಕಷ್ಟು ಒತ್ತಡ ಇದ್ದೇ ಇರುತ್ತದೆ. ಲಾಹೋರ್‌ನಲ್ಲಿ ಕ್ರಿಕೆಟಿಗರ ಮೇಲೆ ನಡೆದ ದಾಳಿಯ ಕುರಿತು ವಿವರಿಸಿದ ಅವರು, ಘಟನೆಯಿಂದ ತುಂಬಾ ನೋವಾಗಿತ್ತು ಎಂದು ಸೈಮನ್‌ ಟೌಫೆಲ್‌ ಹೇಳಿದರು.

ಸಂವಾದದಲ್ಲಿ ಉಪಸ್ಥಿತರಿದ್ದ ಭಾರತ ಕ್ರಿಕೆಟ್‌ ತಂಡದ ಆಟಗಾರ, ಕನ್ನಡಿಗ ಮಯಂಕ್‌ ಅಗರವಾಲ್‌, ಪರೀಕ್ಷೆ ತಪ್ಪಿಸಿಕೊಂಡು ಪಂದ್ಯವಾಡಲು ಹೋಗುತ್ತಿರುವುದನ್ನು ಸ್ಮರಿಸಿದರು.

ಗ್ಲಾಡಿಯೇಟರ್‌ ಎಂದು ಅನಿಸಿತ್ತು..
‘ಅದು ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ (ಎಂಸಿಜಿ) ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯ. ನನ್ನ ಮೊದಲ ಟೆಸ್ಟ್ ಪಂದ್ಯವಾಗಿತ್ತು. ಡ್ರೆಸ್ಸಿಂಗ್‌ ರೂಮ್‌ನಿಂದ ಬ್ಯಾಟ್‌ ಮಾಡಲು ಮೈದಾನ ಪ್ರವೇಶಿಸುವ ಮುನ್ನ ಒಂದು ಕ್ಷಣ ಗ್ಯಾಲರಿಯತ್ತ ಕಣ್ಣಾಡಿಸಿದೆ. ಅಬ್ಬ! 80,000ಕ್ಕಿಂತ ಹೆಚ್ಚು ಜನ. ಆ ಸಮಯದಲ್ಲಿ ನನಗೆ ರಣಾಂಗಣದಲ್ಲಿ ನಿಂತ ಗ್ಲಾಡಿಯೇಟರ್‌ ಎನಿಸಿದ್ದು ಸುಳ್ಳಲ್ಲ’ ಎಂದು ಮಯಂಕ್‌ ಅಗರವಾಲ್‌ ತಮ್ಮ ಚೊಚ್ಚಲ ಪಂದ್ಯದ ಅನುಭವವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT