ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ’

ಬೂದಿಹಾಳ-ಪೀರಾಪುರ ಯೋಜನೆ ಘೋಷಣೆಗೆ ಸೀಮಿತ
Last Updated 29 ಮಾರ್ಚ್ 2018, 5:08 IST
ಅಕ್ಷರ ಗಾತ್ರ

ಕೆಂಭಾವಿ: ‘ಎರಡು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವುದರ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಮಾನ್ಯತೆ ನೀಡಬೇಕು’ ಎಂದು ಜೆಡಿಎಸ್ ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ಮನವಿ ಮಾಡಿದರು.

‘ಮನೆ ಮನೆಗೆ ಕುಮಾರಣ್ಣ, ಅಮೀನರೆಡ್ಡಿ ನಡಿಗೆ ಅಭಿವೃದ್ಧಿಯ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಬುಧವಾರ ಮನೆ–ಮನೆಗೆ ತೆರಳಿ ಜೆಡಿಎಸ್ ಪರ ಮತಯಾಚಿಸಿ ಮಾತನಾಡಿದರು.

‘ಶಾಸಕ ಗುರುಪಾಟೀಲ ಶಿರವಾಳ ಹಾಗೂ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಕುರಿತು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ಕಾಲಹರಣ ಮಾಡಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ತರಲು ಇಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಕಳೆದ ಮೂರು ದಶಕಗಳಿಂದ ಒಬ್ಬರಲ್ಲಾ ಒಬ್ಬರು ಅಧಿಕಾರದಲ್ಲಿರುವಾಗ ಈ ಭಾಗದ ರೈತರ ಕಷ್ಟ ನೆನಪಾಗಲಿಲ್ಲವೆ. ಚುನಾವಣೆ ಬಂದಾಗ ಮಾತ್ರ ರೈತರು ನೆನಪಿಗೆ ಬರುತ್ತಾರೆಯೇ’ ಎಂದು ಪ್ರಶ್ನಿಸಿದರು.

ದರ್ಶನಾಪುರ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ರೈತರ ಹೋರಾಟವನ್ನು ತಮ್ಮ ಹೋರಾಟದಂತೆ ಬಿಂಬಿಸಿಕೊಂಡಿರುವುದು ಹಾಸ್ಯಾಸ್ಪದ. ಏನು ಸಾಧಿಸದೆ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಮಾಜಿ ಸಚಿವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

‘ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಹೋರಾಡಿದ್ದು ಯಕ್ತಾಪುರ, ಅಮಲಿಹಾಳ, ಆಲ್ಹಾಳ ಸೇರಿದಂತೆ ಈ ಭಾಗದ ರೈತರು ಹಾಗೂ ರೈತ ಸಂಘಟನೆಗಳು. ರೈತರ ಹೋರಾಟಕ್ಕೆ ಹೆದರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ’ ಎಂದರು. ಪಕ್ಷದ ಹೋಬಳಿ ಅಧ್ಯಕ್ಷ ಅಕ್ಬರ್ ನಾಲತವಾಡ್, ರಮೇಶ ಕೊಡಗಾನೂರ, ಹಳ್ಳೆಪ್ಪ ಧರಿ, ಕುತುಬುದ್ದೀನ್ ಸಾಸನೂರ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT