ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ: ಬಿಡಿಎ ನಿವೇಶನಗಳಿಗೆ ಜಲಬಂಧನ

ನಿವೇಶನ ಹಂಚಿಕೆ ಮಾಡಿ 2 ವರ್ಷ ಕಳೆದರೂ ಒದಗಿಸಿಲ್ಲ ಮೂಲಸೌಕರ್ಯ
Last Updated 24 ಅಕ್ಟೋಬರ್ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಮಗೆ ನಿವೇಶನ ಹಂಚಿಕೆ ಆಗಿ ಎರಡು ವರ್ಷಗಳೇ ಕಳೆದಿವೆ. ಆದರೆ, ಜಾಗಕ್ಕೆ ಹೋಗಿ ನೋಡಿದರೆ ಅಲ್ಲಿ ರಸ್ತೆಯೂ ಇಲ್ಲ, ಚರಂಡಿಯೂ ಇಲ್ಲ. ಆ ಪ್ರದೇಶವೆಲ್ಲಾ ಸದಾ ನೀರಿನಲ್ಲಿ ಮುಳುಗಿರುತ್ತದೆ. ನಾವಿಲ್ಲಿ ಮನೆ ಕಟ್ಟುವುದಾದರೂ ಹೇಗೆ?’

ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೊದಲ ಹಂತದ 2ನೇ ಬ್ಲಾಕ್‌ನಲ್ಲಿ ನಿವೇಶನ ಮಂಜೂರಾಗಿರುವವರ ಅಳಲು ಇದು.

ಮೊದಲ ಹಂತದ 2ನೇ ಬ್ಲಾಕ್‌ನ ನಿವೇಶನಗಳು ಕನ್ನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿವೆ. ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವ ಇಲ್ಲಿನ ನಿವೇಶನಗಳಲ್ಲಿ ಸದಾ ನೀರು ನಿಲ್ಲುತ್ತದೆ. ಇಲ್ಲಿ ಮಳೆ ನೀರಿನ ಹರಿವಿಗಾಗಿ ಕಾಂಕ್ರೀಟ್‌ ಚರಂಡಿಯನ್ನು ಬಿಡಿಎ ನಿರ್ಮಿಸಿದೆ. ಆದರೆ, ನೀರಿನ ಒರತೆ ಹೆಚ್ಚು ಇರುವುದರಿಂದ ಮಣ್ಣು ಸಡಿಲವಾಗಿದೆ.

‘ಇಲ್ಲಿ ಗದ್ದೆಗೆ ಮಣ್ಣು ತುಂಬಿಸಿ ಮಟ್ಟಸ ಮಾಡಿ ನಿವೇಶನ ನಿರ್ಮಿಸಿದ್ದಾರೆ. ಸುತ್ತಮುತ್ತಲಿನ ನೀರೆಲ್ಲ ತಗ್ಗಿನಲ್ಲಿರುವ ನಮ್ಮ ನಿವೇಶನಗಳತ್ತ ನುಗ್ಗಿ ಬರುತ್ತದೆ. ಈಗಲೂ ಒಂದೆರಡು ಅಡಿಗಳಷ್ಟು ನೀರು ಇದೆ. ನೀರು ಬಸಿದು ಹೋಗುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಇಲ್ಲಿ ನಾವು ಮನೆ ಕಟ್ಟಿಕೊಂಡು ನೆಲೆಸುವುದು ಕನಸಿನ ಮಾತು’ ಎಂದು ಹೆಸರು ಹೇಳಲು ಬಯಸದ ನಿವೇಶನದಾರರೊಬ್ಬರು ಸಮಸ್ಯೆ ವಿವರಿಸಿದರು.

‘ಕೆಸರಿನಂತಿರುವ ಮಣ್ಣಿನಲ್ಲಿ ಚರಂಡಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗದೇ ಗುತ್ತಿಗೆದಾರರರು ಅರ್ಧದಲ್ಲೇ ಕೆಲಸ ನಿಲ್ಲಿಸಿದ್ದಾರೆ. ಅನೇಕ ನಿವೇಶನಗಳಿಗೆ ಇನ್ನೂ ಕಾಂಕ್ರೀಟ್‌ ಚರಂಡಿ ನಿರ್ಮಿಸಿಲ್ಲ. ಕೆಲಸ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಎಂಜಿನಿಯರ್‌ಗಳನ್ನು ಪ್ರಶ್ನಿಸಿದರೆ ಸಮಂಜಸವಾದ ಉತ್ತರ ಕೊಡುತ್ತಿಲ್ಲ. ಬಿಡಿಎ ಬಡಾವಣೆ ಎಂದಮೇಲೆ ಇವೆಲ್ಲ ಮಾಮೂಲಿ ಎಂದು ಉಡಾಫೆಯಿಂದ ಮಾತನಾಡುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನನ್ನ ತಂದೆಗೆ ಇಲ್ಲಿ 2016ರ ಡಿಸೆಂಬರ್‌ನಲ್ಲೇ ನಿವೇಶನ ಮಂಜೂರು ಮಾಡಲಾಯಿತು. ಪೂರ್ಣ ಶುಲ್ಕವನ್ನು ನಾವು 2017ರಲ್ಲೇ ಕಟ್ಟಿದ್ದೇವೆ. ಈ ನಿವೇಶನದ ನೋಂದಣಿ ಕಾರ್ಯವೂ ಪೂರ್ಣಗೊಂಡಿದೆ. ಒಂದೂವರೆ ವರ್ಷದ ಬಳಿಕವೂ ಇಲ್ಲಿ ಮನೆ ಕಟ್ಟುವಂತಹ ಸ್ಥಿತಿ ಇಲ್ಲ. ನನ್ನ ನಿವೇಶನವನ್ನೂ ಸರಿಯಾಗಿ ಗುರುತು ಕೂಡ ಮಾಡಿಕೊಟ್ಟಿಲ್ಲ. ಇಲ್ಲಿ ನೀರು ನಿಲ್ಲುವ ಸಮಸ್ಯೆಗೂ ಪರಿಹಾರ ಸೂಚಿಸಿಲ್ಲ. ನಾನೀಗ ಕೆಲಸ ಬಿಟ್ಟು ಬಿಡಿಎ ಕಚೇರಿಗೆ ಅಲೆಯಬೇಕಾಗಿದೆ’ ಎಂದು ಕಾಕ್ಸ್‌ಟೌನ್ ನಿವಾಸಿ ವಿಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಮನೆ ನಿರ್ಮಿಸಲು 2017ರ ಏಪ್ರಿಲ್‌ನಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದೇನೆ. ಇದಕ್ಕೆ ಶೇ 8.75 ಬಡ್ಡಿ ಪಾವತಿಸುತ್ತಿದ್ದೇನೆ. ಸಾಲ ಮಂಜೂರಾಗಿ 18 ತಿಂಗಳ ಒಳಗೆ ಮನೆ ಕಟ್ಟಲು ಆರಂಭಿಸದಿದ್ದರೆ ಬ್ಯಾಂಕಿನವರು ಬಡ್ಡಿಯ ಪ್ರಮಾಣವನ್ನು ಹೆಚ್ಚಿಸುತ್ತಾರೆ. ನಾನು ಡಿಸೆಂಬರ್‌ ನಂತರ ಶೇ 12ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಆದಷ್ಟು ಬೇಗ ನಮ್ಮ ಸಮಸ್ಯೆಗೆ ಬಿಡಿಎ ಪರಿಹಾರ ಒದಗಿಸಬೇಕು. 2ನೇ ಬ್ಲಾಕ್‌ನ ನಿವೇಶನಗಳಲ್ಲಿ ನೀರು ನಿಲ್ಲದಂತೆ ಮಾಡಲು ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು. ಇಲ್ಲಿನ ನಿವೇಶನಗಳಿಗೆ ಮೂಲಸೌಕರ್ಯ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸಿ.ಎಂ ಮಾತಿಗೂ ಕಿಮ್ಮತ್ತಿಲ್ಲ’

‘ಬಡಾವಣೆಯಲ್ಲಿ ನಮಗೆ ಮಂಜೂರಾಗಿರುವ ನಿವೇಶನದ ದುಃಸ್ಥಿತಿ ಬಗ್ಗೆ ನಮ್ಮ ತಂದೆಯವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜನತಾ ದರ್ಶನದಲ್ಲಿ ಸೆಪ್ಟೆಂಬರ್‌ 25ರಂದು ಅಹವಾಲು ಹೇಳಿಕೊಂಡಿದ್ದರು. ಡಿಸೆಂಬರ್‌ 25ರ ಒಳಗೆ ಈ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಬಗ್ಗೆ ಬಿಡಿಎ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಬಿಡಿಎ ಕಡೆಯಿಂದ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ, ಸಮಸ್ಯೆಯೂ ಬಗೆಹರಿದಿಲ್ಲ’ ಎಂದು ವಿಜಯ್‌ ತಿಳಿಸಿದರು.

ರಾಜಕಾಲುವೆ ಮಾಯ!

‘ಬಡಾವಣೆಯ 2ನೇ ಬ್ಲಾಕ್‌ನ ಉತ್ತರ ದಿಕ್ಕಿನಲ್ಲಿ ಕನ್ನಹಳ್ಳಿ ವೀರಭದ್ರ ದೇವಸ್ಥಾನದ ಬಳಿ ಕೆರೆ ಇದೆ. ದಕ್ಷಿಣದಲ್ಲಿ ರಾಮಸಂದ್ರ ಕೆರೆ ಇದೆ. ಈ ಎರಡು ಕೆರೆಗಳನ್ನು ಬೆಸೆಯುವ ರಾಜಕಾಲುವೆ ಇಲ್ಲಿರಬೇಕಿತ್ತು. ಬಿಡಿಎ ನಗರ ಮಹಾಯೋಜನೆ–2031ರ ಕರಡು ನಕಾಶೆಯಲ್ಲಿ ಇದನ್ನು ಕಾಣಿಸಿದ್ದಾರೆ. ಆದರೆ ಬಡಾವಣೆಯ ನಕ್ಷೆಯಲ್ಲಿ ಇದನ್ನು ತೋರಿಸಿಲ್ಲ’ ಎಂದು ಇಲ್ಲಿ ನಿವೇಶನದಾರರೊಬ್ಬರು ದೂರಿದರು.

‘ಇಲ್ಲಿ ರಾಜಕಾಲುವೆಯನ್ನು ನಿರ್ಮಿಸಿದರೆ ಈ ಪ್ರದೇಶದಲ್ಲಿ ನೀರು ನಿಲ್ಲುವ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದು. ಆದರೆ, ಕಾಲುವೆ ಇರಬೇಕಾದ ಜಾಗದಲ್ಲಿ ಬಿಡಿಎ ಈಗಾಗಲೇ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಿದೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೋ ದೇವರೇ ಬಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT