ಗುರುವಾರ , ಅಕ್ಟೋಬರ್ 29, 2020
28 °C
ಸಮಾಜಕಲ್ಯಾಣ ಒಪ್ಪಿದ ಹಿರಿಯ ಸಚಿವ

ಫಲ ನೀಡಿದ ಸಂಧಾನ: ಶ್ರೀರಾಮುಲು ಕೋಪ ತಣಿಸಿದ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಹಿರಿಯ ಸಚಿವ ಬಿ.ಶ್ರೀರಾಮುಲು ಅವರ ಕೋಪವನ್ನು ತಣಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ ಶ್ರೀರಾಮುಲು ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ ಮುಖ್ಯಮಂತ್ರಿಯವರು ಸಮಾಜ ಕಲ್ಯಾಣ ಖಾತೆಯನ್ನು ಒಪ್ಪಿಕೊಂಡು ಕೆಲಸ ಮಾಡುವಂತೆ ರಾಮುಲು ಅವರ ಮನವೊಲಿಸಿದರು.

ಖಾತೆ ಬದಲಾವಣೆಯಿಂದ ಸೋಮವಾರ ತೀವ್ರ ಅಸಮಾಧಾನಗೊಂಡಿದ್ದ ರಾಮುಲು ಹೊಸ ಖಾತೆ ಒಪ್ಪಿಕೊಳ್ಳುವುದಿಲ್ಲ, ವರಿಷ್ಠರ ಬಳಿ ಹೋಗಿ ತಮ್ಮ ಅಳಲು ತೋಡಿಕೊಳ್ಳಲು ಸಿದ್ಧವಿರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಪರಿಸ್ಥಿತಿ ಕೈ ಮೀರಬಹುದು ಎಂಬುದನ್ನು ಗ್ರಹಿಸಿದ ಯಡಿಯೂರಪ್ಪ ಅವರು ಮಂಗಳವಾರ ಬೆಳಿಗ್ಗೆಯೇ ಬಂದು ಮಾತನಾಡಲು ರಾಮುಲು ಅವರಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರನ್ನೂ ಕರೆಸಿ, ಇಬ್ಬರ ಜತೆಗೂ ಮಾತನಾಡಿ, ‘ಸರ್ಕಾರ ಅತ್ಯಂತ ಸಂಕಷ್ಟದಲ್ಲಿ ಮುನ್ನಡೆಯುತ್ತಿದ್ದು, ಜನರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ಸಂದರ್ಭದಲ್ಲಿ ಅಸಮಾಧಾನ ಮಾಡಿಕೊಂಡರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಲ್ಲದೆ, ವಿರೋಧ ಪಕ್ಷಗಳಿಗೂ ಅಸ್ತ್ರ ನೀಡಿದಂತಾಗುತ್ತದೆ’ ಎಂದು ಹೇಳಿದರು.

ಮುಖ್ಯಮಂತ್ರಿಯವರ ಮಾತಿಗೆ ಒಪ್ಪಿಗೆ ಸೂಚಿಸಿದ ಶ್ರೀರಾಮುಲು ಸಮಾಜಕಲ್ಯಾಣ ಖಾತೆಯನ್ನು ವಹಿಸಿಕೊಂಡು, ಶ್ರಮವಹಿಸಿ ಕೆಲಸ ಮಾಡುವುದಾಗಿಯೂ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮುಲು, ಈ ಹಿಂದೆ ಸಮಾಜಕಲ್ಯಾಣ ಇಲಾಖೆಯ ಜವಾಬ್ದಾರಿ ಕೇಳಿದ್ದೆ. ಕಾರಣಾಂತರಗಳಿಂದ ಆರೋಗ್ಯ ಇಲಾಖೆ ನೀಡಿದ್ದರು. ಇದೀಗ ನನಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಿರುವುದು ಸಂತೋಷವಾಗಿದೆ.ನನಗೆ ಯಾವುದೇ ಅಸಮಾಧಾನವಿಲ್ಲ. ಸ್ವತಃ  ವೈದ್ಯರಾಗಿರುವ ಸುಧಾಕರ್‌ ಅವರು ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊರನಾ ವಿರುದ್ಧ ಇನ್ನಷ್ಟು ಪರಿಣಾಮಕಾರಿ ಹೋರಾಟ ನಡೆಸಲು ಸಾಧ್ಯ. ಮುಖ್ಯಮಂತ್ರಿಯವರ ಆದೇಶದಂತೆ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದರು.

ಸಚಿವ ಡಾ.ಸುಧಾಕರ್‌ ಮಾತನಾಡಿ, ರಾಮುಲು ಅವರು ನನಗಿಂತ ಹಿರಿಯರು. ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದಾರೆ. ಸಂಪುಟ ವಿಸ್ತರಣೆ ತಡವಾಗುತ್ತಿರುವುದರಿಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕೆಳಹಂತದಲ್ಲಿ ಸಮನ್ವಯದ ಕೊರತೆ ಇದೆ. ಅದನ್ನು ಸರಿಪಡಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ರಾಮುಲು ಅವರು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಲ್ಲಿ ಯಾರು ಹೆಚ್ಚು ಅಥವಾ ಕಡಿಮೆ ಎಂಬ ಪ್ರಶ್ನೆ ಇಲ್ಲ. ರಾಮುಲು ಅವರಿಗೆ ದೊಡ್ಡ ಮಟ್ಟದ ಬಡ್ತಿ ಸಿಕ್ಕಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು