ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪದವೀಧರರೇ ಹೆಚ್ಚು ನಿರುದ್ಯೋಗಿಗಳು: ಸಚಿವ ಡಾ. ಎಂ.ಸಿ. ಸುಧಾಕರ್‌

Published : 27 ಸೆಪ್ಟೆಂಬರ್ 2024, 16:11 IST
Last Updated : 27 ಸೆಪ್ಟೆಂಬರ್ 2024, 16:11 IST
ಫಾಲೋ ಮಾಡಿ
Comments

ಬೆಂಗಳೂರು: ‘ಪದವೀಧರರಾಗಿದ್ದರೂ ಕೌಶಲ ಹೊಂದಿಲ್ಲದ ಕಾರಣದಿಂದ ಹಲವರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಶಿಕ್ಷಣ ಪಡೆಯದವರಿಗಿಂತ ಪದವೀಧರರೇ ಹೆಚ್ಚು ನಿರುದ್ಯೋಗಿಗಳಾಗಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ತಿಳಿಸಿದರು.

ಸೇಂಟ್‌ ಜೋಸೆಫ್ಸ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಅವರು ಪದವಿ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

‘ಅಂಕಿ-ಅಂಶಗಳ ಪ್ರಕಾರ ಪದವೀಧರರಲ್ಲಿ ಶೇ 29.1ರಷ್ಟು ಮಂದಿಗೆ ಉದ್ಯೋಗ ಲಭ್ಯವಾಗಿಲ್ಲ. ಪ್ರಾಥಮಿಕ ಹಂತದ ಶಿಕ್ಷಣವನ್ನೂ ಪಡೆಯದವರಲ್ಲಿ ಶೇ 3.4ರಷ್ಟು ಮಾತ್ರ ನಿರುದ್ಯೋಗಿಗಳಾಗಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳು ಪ್ರಸ್ತುತ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನಗಳನ್ನು ಅರಿತು, ಉದ್ಯಮಗಳು ಬಯಸುತ್ತಿರುವ ಕೌಶಲಗಳನ್ನು ಹೊಂದಿರಬೇಕು. ಅಂತಹ ಕೌಶಲಗಳನ್ನು ಪದವಿ ಹಂತದ ಶಿಕ್ಷಣದಲ್ಲಿಯೇ ರಾಜ್ಯ ಸರ್ಕಾರ ಕಲಿಸುತ್ತಿದೆ’ ಎಂದರು.

45 ಸರ್ಕಾರಿ ಕಾಲೇಜುಗಳಲ್ಲಿ ಬಿ.ಕಾಂ ಲಾಜಿಸ್ಟಿಕ್ಸ್, ಇ ಕಾಮರ್ಸ್, ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸಿಂಗ್ ಸರ್ವಿಸಸ್, ವಿಮಾ ವಿಭಾಗಗಳಿರುವ ನಾಲ್ಕು ಪದವಿ ಕೋರ್ಸ್‌ಗಳನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಸುಮಾರು 1,500 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ನಾಲ್ಕನೇ ಸೆಮಿಸ್ಟರ್ ಬಳಿಕ ನವೋದ್ಯಮ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ಗೆ ಕಳುಹಿಸಲಾಗುತ್ತದೆ. ಆ ಅವಧಿಯಲ್ಲಿ ಅವರಿಗೆ ₹8 ಸಾವಿರದಿಂದ ₹20 ಸಾವಿರದವರೆಗೆ ಶಿಷ್ಯವೇತನ ನೀಡಲಾಗುತ್ತದೆ ಎಂದು ವಿವರಿಸಿದರು.

‘ವಿದ್ಯಾರ್ಥಿಗಳು ದೇಶದ ಪ್ರಗತಿಗೆ ನೆರವಾಗುವ ಸಂಶೋಧನಾ ಕಾರ್ಯಗಳನ್ನು ನಡೆಸಬೇಕು. ಪದವಿಗಳನ್ನು ಗಳಿಸುವ ಜೊತೆಗೆ ಉದ್ಯೋಗ ವಲಯಗಳು ಬಯಸುವ ಕೌಶಲಗಳನ್ನೂ ಹೊಂದಬೇಕು. ಅದಕ್ಕಾಗಿ ಹಲವು ಕೋರ್ಸ್‌ಗಳನ್ನು ಸರ್ಕಾರ ಸಿದ್ಧಪಡಿಸುತ್ತಿದೆ’ ಎಂದರು.

ಸೇಂಟ್‌ ಜೋಸೆಫ್ಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಡಯನೇಶಿಯಸ್‌ ವಾಜ್‌, ಕುಲಪತಿ ವಿಕ್ಟರ್‌ ಲೋಬೊ, ಕುಲಸಚಿವ ಮೆಲ್ವಿನ್‌ ಕೊಲಾಸೊ, ಪರೀಕ್ಷಾಂಗದ ನಿಯಂತ್ರಕ ಸಿ. ಮೋಹನ್‌ ದಾಸ್‌ ಉಪ‍ಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT