ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾಮಗಾರಿ: ‘ಸ್ಮಾರ್ಟ್‌’ ಪಾದಚಾರಿ ಮಾರ್ಗಕ್ಕೆ ಕುತ್ತು

ಕಟ್ಟಡ ಕಾಮಗಾರಿ: ಸೇಂಟ್ ಮಾರ್ಕ್ಸ್ ರಸ್ತೆಯ ಪಾದಚಾರಿ ಮಾರ್ಗ ಹಳ್ಳ–ಗುಂಡಿಗಳ ತಾಣ
Last Updated 27 ಮೇ 2022, 20:35 IST
ಅಕ್ಷರ ಗಾತ್ರ

ಬೆಂಗಳೂರು: ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಟೆಂಡರ್‌ ಶ್ಯೂರ್ ಯೋಜನೆಯಡಿ ನಿರ್ಮಿಸಿದ್ದ ಅಂತರರಾಷ್ಟ್ರೀಯ ದರ್ಜೆಯ ಸುಸಜ್ಜಿತ ಪಾದಚಾರಿ ಮಾರ್ಗ ಈಗ ಹಳ್ಳ–ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ.

ನಗರದ ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಅಂತರರಾಷ್ಟ್ರೀಯ ದರ್ಜೆಯಲ್ಲಿ ನಿರ್ಮಿಸಲು ಬಿಬಿಎಂಪಿ 41 ರಸ್ತೆಗಳನ್ನು ಆಯ್ಕೆ ಮಾಡಿಕೊಂಡಿತ್ತು. ಒಟ್ಟು 30.40 ಕಿ.ಮೀ. ಉದ್ದದ ರಸ್ತೆಯನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿ ಸೇಂಟ್ ಮಾರ್ಕ್ಸ್ ರಸ್ತೆಯೂ ಒಂದು.

ನಿರ್ಮಾಣವಾಗಿ ನಾಲ್ಕೇ ವರ್ಷಗಳಲ್ಲಿ ಸೇಂಟ್ ಮಾರ್ಕ್ಸ್‌ ರಸ್ತೆಯ ಪಾದಚಾರಿ ಮಾರ್ಗದ ಸ್ಥಿತಿ ಅಧೋಗತಿಗೆ ತಲುಪಿದೆ. ಮ್ಯೂಸಿಯಂ ರಸ್ತೆಯಲ್ಲಿ ಅಂಚೆ ಕಚೇರಿ ದಾಟಿ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿ ಮುಂದೆ ಸಾಗಿದರೆ ಶೋಭಾ ವಾಣಿಜ್ಯ ಸಂಕೀರ್ಣದ ತನಕ ಅದೇ ಸ್ಥಿತಿಇದೆ.

ಚೌಕಾಕಾರದ ಹಾಸುಗಲ್ಲುಗಳು (ಜಾಯಿಂಟ್ ಲಾಕ್) ಕೆಲವೆಡೆ ಮೇಲಕ್ಕೆದ್ದು ಬಂದಿವೆ. ಇನ್ನು ಕೆಲವೆಡೆ ಅವು ಒಂದೂವರೆ ಅಡಿಯಷ್ಟು ಆಳಕ್ಕೆ ಕುಸಿದು ಗುಂಡಿಗಳು ನಿರ್ಮಾಣವಾಗಿವೆ. ಇನ್ನೂ ಕೆಲವೆಡೆ ಹಾಸುಗಲ್ಲುಗಳೇ ಇಲ್ಲವಾಗಿದ್ದು, ಕೆಸರು ತುಂಬಿಕೊಂಡಿದೆ. ಅಲ್ಲಲ್ಲಿ ಸಿಮೆಂಟ್ ಉದುರಿ ಬಿದ್ದಿದ್ದರೆ, ಬೊಲ್ಲಾರ್ಡ್‌ಗಳಿಗೂ ಸಿಮೆಂಟ್ ಮೆತ್ತಿಕೊಂಡಿದೆ. ಒಂದೆರಡು ಕಡೆ ಹೊಂಡಗಳೇ ನಿರ್ಮಾಣವಾಗಿದ್ದು, ಅದನ್ನು ದಾಟಿಕೊಂಡು ಜನ ಓಡಾಡಬೇಕಾದ ಸ್ಥಿತಿ ಇದೆ.

‘ಇಂಡಿಯಾ ಗ್ಯಾರೇಜ್ ಇದ್ದ ಜಾಗದಲ್ಲಿ ಹೊಸ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು, ಅಲ್ಲಿಗೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಭರದಲ್ಲಿ ಪಾದಚಾರಿ ಮಾರ್ಗ ಹಾಳಾಗಿದೆ. ಸುಂದರವಾಗಿದ್ದ ಪಾದಚಾರಿ ಮಾರ್ಗ ಹಾಳಾಗಿದ್ದನ್ನು ನೋಡಿಯೂ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂಬುದು ಪಾದಚಾರಿಗಳ ಆಕ್ರೋಶ.

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ನಲ್ಲಿ ಸದಾ ಪಾದಚಾರಿಗಳೇ ಹೆಚ್ಚಿರುತ್ತಾರೆ. ಈ ರಸ್ತೆಗಳ ಪಕ್ಕದಲ್ಲೇ ಇರುವ ಸೇಂಟ್ ಮಾರ್ಕ್ಸ್‌ ರಸ್ತೆ ಕೂಡ ಪಾದಚಾರಿಗಳಿಗೆ ಪ್ರಿಯವಾದ ರಸ್ತೆ. ಆದರೀಗ ಇಲ್ಲಿ ನಡೆದುಕೊಂಡು ಸಾಗುವುದೇ ದುಸ್ತರವಾಗಿದೆ. ಪಾದಚಾರಿ ಮಾರ್ಗ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.

‘ಕಾಮಗಾರಿ ನಿರ್ವಹಿಸುವ ಸಂದರ್ಭದಲ್ಲಿ ಪಾದಚಾರಿ ಮಾರ್ಗ ಹಾಳಾಗುವುದು ಸಹಜ. ಕಾಮಗಾರಿ ಪೂರ್ಣಗೊಂಡ ಬಳಿಕ ಸರಿಪಡಿಸುತ್ತೇವೆ’ ಎಂಬುದು ಕಟ್ಟಡ ಕಾಮಗಾರಿ ನಿರ್ವಹಣೆ ಮಾಡುತ್ತಿರುವವರು ನೀಡುವ ಸಬೂಬು.

‘ಇಂಡಿಯಾ ಗ್ಯಾರೇಜ್ ಇದ್ದ ಜಾಗದಲ್ಲಿ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಆ ಸ್ಥಳದಲ್ಲಿ ಪಾದಚಾರಿ ಮಾರ್ಗ ಹಾಳಾಗಿದ್ದರೆ, ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು. ಪಾದಚಾರಿ ಮಾರ್ಗ ಹಾಳು ಮಾಡಿದವರಿಗೆ ದಂಡ ಹಾಕಲು ಅವಕಾಶ ಇದೆ. ಸ್ಥಳ ಪರಿಶೀಲನೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT