ಶನಿವಾರ, ಅಕ್ಟೋಬರ್ 23, 2021
24 °C
ರಾಜ್ಯ ಸಮ್ಮೇಳನಕ್ಕೆ ಅಮಿತ್ ಶಾಗೆ ಆಹ್ವಾನ

ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿ: ಎಸ್.ಟಿ. ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಸಹಕಾರ ತತ್ವ ಹಾಗೂ ಸಹಕಾರಿ ಸಂಘಟನೆಗಳು ಬಲಗೊಳ್ಳಬೇಕಾದರೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ ಸ್ಥಾಪಿಸುವ ಅವಶ್ಯ ಇದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸಹಕಾರ ಸಮ್ಮೇಳನದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಸೋಮಶೇಖರ್, ಈ ಕುರಿತು ಮನವಿ ಸಲ್ಲಿಸಿದ್ದಾರೆ. ಹೊಸ ಸಂಸ್ಥೆಯ ರಚನೆಯಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಮತ್ತು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಇದೇ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಜ್ಯ ಮಟ್ಟದ ಸಹಕಾರಿಗಳ ಸಮ್ಮೇಳನ ಹಮ್ಮಿಕೊಳ್ಳಲಿದ್ದು, ಅದರಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.

‘ಪ್ರಾಥಮಿಕ ಕೃಷಿ ಮತ್ತು ಸಹಕಾರಿ ಬ್ಯಾಂಕ್‌ ಹಾಗೂ ಪೀಕಾರ್ಡ್‌ ಬ್ಯಾಂಕ್‌ಗಳಿಗೆ ಮಾತ್ರ 80 ಜಿ ಅಡಿ ಆದಾಯ ತೆರಿಗೆ ವಿನಾಯಿತಿ ಇದೆ. ಇದನ್ನು ಸಹಕಾರ ವಲಯದ ಎಲ್ಲ ಸಂಸ್ಥೆಗಳಿಗೆ ವಿಸ್ತರಿಸಬೇಕು. ಸಹಕಾರ ಸಂಸ್ಥೆಗಳಿಗೆ ಕಚ್ಚಾವಸ್ತುಗಳ ಸಂಗ್ರಹ ಮತ್ತು ಉತ್ಪನ್ನಗಳಿಗೆ ದರ ನಿಗದಿಪಡಿಸುವ ಹಾಗೂ ಅವುಗಳಿಗೆ ಮಾರುಕಟ್ಟೆ ಕಲ್ಪಿಸಬೇಕು.’

‘ರಾಜ್ಯದಲ್ಲಿ 160 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಆಧುನೀಕರಣಗೊಳಿಸಲು, ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸುಸಜ್ಜಿತ ರಸ್ತೆಗಳು ಹಾಗೂ ದರ ಇಳಿಕೆಯಾದಾಗ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ದೀರ್ಘಕಾಲ ಕೆಡದಂತೆ ಸಂಗ್ರಹಿಸಲು ಜಿಲ್ಲಾ ಕೇಂದ್ರ ಮತ್ತು ಮಾರುಕಟ್ಟೆಗಳಲ್ಲಿ ಶೈತ್ಯಾಗಾರಗಳನ್ನು ನಿರ್ಮಿಸಲು ಕರ್ನಾಟಕಕ್ಕೆ ₹5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ’ ಎಂದು ಸೋಮಶೇಖರ್ ತಿಳಿಸಿದ್ದಾರೆ.

‘ಸಹಕಾರ ಸಂಸ್ಥೆಗಳಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಸಲು ಒಂದೇ ತಂತ್ರಾಂಶದ ಅಗತ್ಯವಿದ್ದು, ಇದಕ್ಕಾಗಿ ನೆರವು ನೀಡಬೇಕು’ ಎಂದು ಕೋರಿದ್ದಾಗಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು