ಶುಕ್ರವಾರ, ಡಿಸೆಂಬರ್ 6, 2019
20 °C

ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಿಗೆ ಬುಧವಾರ(ಡಿ.4) ನಿಗದಿಯಾಗಿರುವ ಚುನಾವಣೆ ಸದಸ್ಯರ ಗೈರುಹಾಜರಿಯಿಂದ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು ಸುಲಭವಾಗಿ ತನ್ನದಾಗಿಸಿಕೊಂಡ ಬಿಜೆಪಿ ಎಲ್ಲಾ 12 ಸ್ಥಾಯಿ ಸಮಿತಿಗಳ ನಾಯಕತ್ವದ ಮೇಲೆ ಕಣ್ಣಿಟ್ಟಿದೆ. ಅದಕ್ಕೆ ಬೇಕಿರುವ ಸದಸ್ಯ ಬಲವನ್ನೂ ಅದು ಹೊಂದಿದೆ. ಆದರೆ, ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಚುನಾವಣೆಗೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ.

ಮೂರು ಪಕ್ಷಗಳ ನಗರ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಸಂಸದರು, ರಾಜ್ಯಸಭೆ ಸದಸ್ಯರು ಚುನಾವಣಾ ಪ‍್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸುವುದು ಅನುಮಾನ ಎಂದು ಮೂಲಗಳು ಹೇಳಿವೆ.

‘ಪಾಲಿಕೆ ಸದಸ್ಯರು, ಶಾಸಕರೆಲ್ಲರೂ ಚುನಾವಣೆ ಕೆಲಸದಲ್ಲಿರುವ ಕಾರಣ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ಈ ನಡುವೆ ಯಾವುದೇ ಪಕ್ಷವೂ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಹೀಗಾಗಿ ಚುನಾವಣೆ ಮುಂದೂಡುವಂತೆ ‍ಪ್ರಾದೇಶಿಕ ಆಯುಕ್ತರಿಗೆ ಮೂರು ಪಕ್ಷದ ಶಾಸಕರು ಪತ್ರ ಬರೆದು ಕೋರಿದ್ದರು. ಆದರೆ, ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಅದರಂತೆ ಚುನಾವಣೆ ಬುಧವಾರ ನಿಗದಿಯಾಗಿದೆ.

ಚುನಾವಣೆ ಪ್ರಕ್ರಿಯೆ ಮುಂದುವರಿಸಲು ಶಾಸಕರು, ಸಂಸದರು ಸೇರಿ 256 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಇವರಲ್ಲಿ ಮೂರನೇ ಒಂದು ಭಾಗ ಎಂದರೆ 86 ಜನರಿದ್ದರೆ ಚುನಾವಣೆ ನಡೆಸಬಹುದು. ಆದರೆ, ಅಷ್ಟು ಸದಸ್ಯರು ಭಾಗವಹಿಸುವುದೂ ಅನುಮಾನ.

ಪ್ರತಿಕ್ರಿಯಿಸಿ (+)