ಭಾನುವಾರ, ಆಗಸ್ಟ್ 25, 2019
21 °C
ಆರೇ ತಿಂಗಳಿನಲ್ಲಿ 21,640 ಅಪಘಾತ, 5,440 ಮಂದಿ ಸಾವು l ಪರಿಶೀಲಿಸಿ ವರದಿ ನೀಡಲಿರುವ ತಜ್ಞರ ತಂಡ

ಹೆದ್ದಾರಿಗಳಲ್ಲಿ ಮರಣ ಮೃದಂಗ

Published:
Updated:
Prajavani

ಬೆಂಗಳೂರು: ರಾಜ್ಯದ ಸಾರಿಗೆ ವ್ಯವಸ್ಥೆಯ ಬುನಾದಿ ಆಗಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಸ್ಥಳೀಯ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇತ್ತೀಚಿನ ದಿನಗಳಲ್ಲಂತೂ ಹೆದ್ದಾರಿಗಳು ‘ಅಪಘಾತ ವಲಯ’ಗಳಗಾಗಿ ಮಾರ್ಪಡುತ್ತಿವೆ.

ಪ್ರಸಕ್ತ ವರ್ಷ (2019ರ ಜನವರಿ ಯಿಂದ ಜೂನ್‌ವರೆಗೆ) 21,640 ಅಪಘಾತಗಳು ಸಂಭವಿಸಿದ್ದು, 5,440 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ದೇಶದಾದ್ಯಂತ ಅಪಘಾತಗಳ ಸಂಖ್ಯೆ ಏರಿಕೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್, ಅಪಘಾತ ವಲಯಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಜ್ಞರ ಸಮಿತಿಯೊಂದನ್ನು ರಚಿಸಿದೆ. ಅದರಡಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಾರಿಗೆ, ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ‘ರಸ್ತೆ ಸುರಕ್ಷತಾ ಸಮಿತಿ’ಯೂ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಮಿತಿಯು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಅಂದು ಕೊಂಡಷ್ಟು ಪ್ರಮಾಣದಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸಕ್ತ ವರ್ಷ ಆರು ತಿಂಗಳಿನಲ್ಲೇ 27,543 ಮಂದಿ ಗಾಯಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿದೆ.

‘ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ನಿತ್ಯವೂ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ರಸ್ತೆಗೆ ಇಳಿಯುವ ಹೊಸ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಚಾಲಕರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ’ ಎಂದು ರಸ್ತೆ ಸುರಕ್ಷತಾ ಸಮಿತಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿರುವ ಪೊಲೀಸ್ ಠಾಣೆವಾರು ಅಪಘಾತಗಳು ಸಂಭವಿಸಿದ ಸ್ಥಳಗಳ ಬಗ್ಗೆ ಹಾಗೂ ಅಲ್ಲಿಯೇ ಪದೇ ಪದೇ ಅಪಘಾತಗಳು ಏಕೆ ಸಂಭವಿಸುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸಿ ವರದಿ ತರಿಸಿಕೊಳ್ಳಲಾಗುತ್ತಿದೆ. ಆ ವರದಿಯನ್ನು ತಜ್ಞರು ಪರಿಶೀಲನೆ ನಡೆಸಲಿದ್ದು, ಅಪಘಾತಗಳನ್ನು ತಡೆಯಲು ಅವರು ನೀಡುವ ಸಲಹೆಗಳನ್ನು ಜಾರಿಗೆ ತರಲಾಗುವುದು’ ಎಂದು ಹೇಳಿದರು.

ಅಪಘಾತಕ್ಕೆ ಪ್ರಮುಖ ಕಾರಣಗಳು (ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಗುರುತಿಸಿದಂತೆ)

* ಅತೀ ವೇಗದ ಚಾಲನೆ

* ನಿರ್ಲಕ್ಷ್ಯ ಹಾಗೂ ಅಪಾಯಕಾರಿ ಚಾಲನೆ

* ಮದ್ಯ ಕುಡಿದು ವಾಹನ ಚಾಲನೆ

* ಸಿಗ್ನಲ್ ಜಂಪ್

* ಚಾಲನೆ ವೇಳೆ ಮೊಬೈಲ್ ಬಳಕೆ

* ಓವರ್‌ಟೇಕ್

* ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು

* ವಾಹನಗಳಿಗೆ ಹೆಚ್ಚು ಪ್ರಕಾಶಮಾನ ದೀಪ ಅಳವಡಿಕೆ

* ಅಪಾಯಕಾರಿ ತಿರುವು  

***

ಹೆಚ್ಚು ಅಪಘಾತಗಳು ಸಂಭವಿಸುವ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗುತ್ತಿದೆ. ಅಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು

-ಪಿ.ಎಸ್.ಸಂಧು, ಆಯುಕ್ತ, ಸಂಚಾರ

Post Comments (+)