ಬುಧವಾರ, ಡಿಸೆಂಬರ್ 2, 2020
16 °C

'ರಾಜ್ಯ–ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ಬೇಸತ್ತು ಮತದಾರ ಹಕ್ಕು ಚಲಾಯಿಸಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DK Shivakumar

ಬೆಂಗಳೂರು: ‘ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸದಿರುವುದು, ಜನಪರ ಕೆಲಸ ಮಾಡದಿರುವುದು ಹಾಗೂ ಸದ್ಯದ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಹೆಚ್ಚಿನ ಮತದಾರರು ಉಪ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ವಿದ್ಯಾವಂತ ಮತದಾರರು ಈ ರಾಜಕೀಯ ವಿದ್ಯಮಾನಗಳನ್ನು ನೋಡಿ, ನಾವು ಯಾವ ಕಾರಣಕ್ಕೆ ಮತ ಹಾಕಬೇಕೆಂದು ಬೇಸರಗೊಂಡಿದ್ದಾರೆ’ ಎಂದರು.

‘ಮತ ಚಲಾಯಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಮನವಿ ಮಾಡಿದ್ದರು. ಆದರೆ, ಅವರಿಗೆ ಮತ ಹಾಕಲು ಇಚ್ಛೆ ಇಲ್ಲದಿರುವ ಕಾರಣ ಮತಗಟ್ಟೆಗೆ ಬಂದಿಲ್ಲ. ಆದರೆ, ಮತದಾರರ ಮೇಲೆ ನಮಗೆ ವಿಶ್ವಾಸವಿದೆ.  ಮತ ಚಲಾಯಿಸಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ. ಎರಡೂ ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ನಮಗೆ ಬೆಂಬಲ ನೀಡಿದ್ದಾರೆ’ ಎಂದರು.

‘ಚುನಾವಣಾ ಆಯೋಗ ನಾವು ಕೊಟ್ಟ ಮಾಹಿತಿಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಕಾರ್ಯಪ್ರವೃತ್ತವಾಗಿದೆ. ಪೊಲೀಸರ ದುರಾಡಳಿತ, ಅಧಿಕಾರಿಗಳ ದುರ್ಬಳಕೆ, ಅಕ್ರಮ ವಿಚಾರವಾಗಿ ನಾವು ಕೊಟ್ಟ ದೂರಿನ ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಅದರ ಪರಿಣಾಮ ಏನಾಯಿತು ಎಂಬುದು ಗೊತ್ತಿಲ್ಲ’ ಎಂದರು.

‘ರಾಜಕಾರಣದಲ್ಲಿ ನನಗಿಂತ ಸಿದ್ದರಾಮಯ್ಯ ಅನುಭವಸ್ಥರು. ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಈ ಚುನಾವಣೆ ಕಾಂಗ್ರೆಸ್ ಪಕ್ಷದ ಗೆಲುವಾಗುತ್ತದೆ. ನಾವು ಹತ್ತು ಟೇಕ್ ತೆಗೆದುಕೊಳ್ಳಲು ಸಿನಿಮಾ ಮಾಡುತ್ತಿಲ್ಲ. ಅವರ ರೀತಿ ಕಟ್ ಆ್ಯಂಡ್ ಪೇಸ್ಟ್ ಮಾಡುವುದಿಲ್ಲ. ಮುನಿರತ್ನ ಗೆದ್ದರೆ ಕೇವಲ ಇಂಧನ ಖಾತೆ ಯಾಕೆ, ಮುಖ್ಯಮಂತ್ರಿ ಸ್ಥಾನವನ್ನೇ ಪಡೆಯಲಿ’ ಎಂದ ಅವರು, ‘ಇದು ಕೇವಲ ಬಿಜೆಪಿ ಸರ್ಕಾರ ಅಲ್ಲ, ಕಾಂಗ್ರೆಸ್- ಬಿಜೆಪಿ ಸರ್ಕಾರ’ ಎಂದು ಗೇಲಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು