ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಸ್‌ಪಿ ತೊರೆಯಲು ರಾಜ್ಯ ಸಮಿತಿ ನಿರ್ಧಾರ: ಮಾರಸಂದ್ರ ಮುನಿಯಪ್ಪ

Published 31 ಆಗಸ್ಟ್ 2024, 15:47 IST
Last Updated 31 ಆಗಸ್ಟ್ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಖಂಡರು ಪಕ್ಷ ತೊರೆಯಲು ನಿರ್ಧರಿಸಿದ್ದೇವೆ’ ಎಂದು ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಮಾಯಾವತಿ ವಿರೋಧಿ‌ಸಿದ್ದಾರೆ. ಈ ಬಗ್ಗೆ ಕರ್ನಾಟಕದ ಬಿಎಸ್‌ಪಿ ಮುಖಂಡರು ಹಾಗೂ ರಾಷ್ಟ್ರೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯ ಇದೆ’ ಎಂದು ಹೇಳಿದರು. 

‘ಜನಸಂಖ್ಯೆಗೆ ಅನುಗಣವಾಗಿ ಒಳಮೀಸಲಾತಿ ನೀಡಲು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಮಾಡಿರುವ ಶಿಫಾರಸುಗಳು ಡಾ.ಬಿ.ಆರ್. ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದಲ್ಲಿ ಪ್ರತಿಪಾದಿಸುವ ತತ್ವಗಳ ಅನ್ವಯವಾಗಿವೆ. ಈ ಕುರಿತು ಚರ್ಚಿಸುವುದಕ್ಕಾಗಿ ಮಾಯಾವತಿ ಅವರನ್ನು ಭೇಟಿಯಾಗುವುದಕ್ಕಾಗಿ ಲಖನೌಗೆ ತೆರಳಿದ್ದ ಬಿಎಸ್‌ಪಿ ರಾಜ್ಯ ನಿಯೋಗಕ್ಕೆ ಅವಕಾಶ ನೀಡದೇ ಅವಮಾನಿಸಲಾಗಿದೆ’ ಎಂದು ದೂರಿದರು. 

‘ಅಂಬೇಡ್ಕರ್‌ ಮತ್ತು ಕಾನ್ಶಿರಾಮ್‌ ಅವರ ಸಿದ್ಧಾಂತದಿಂದ ಬಿಎಸ್‌ಪಿ ಸಂಪೂರ್ಣವಾಗಿ ದೂರ ಸರಿದಿದೆ. ಅಲ್ಲದೇ ಪಕ್ಷವು ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಆದ್ದರಿಂದ, ಬಹುಜನ ಸಮಾಜದಲ್ಲಿರುವ ದುರ್ಬಲ ಸಮುದಾಯಗಳ ಅಳಲು ಅರಣ್ಯರೋಧನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಎಸ್‌ಪಿ ಕರ್ನಾಟಕ ರಾಜ್ಯ ಸಮಿತಿಯ ಪದಾಧಿಕಾರಿಗಳು ಕೂಡಲೇ ಪಕ್ಷವನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಹೇಳಿದರು.

ರಾಜ್ಯ ಸಂಯೋಜಕ ಎಂ. ಗೋಪಿನಾಥ್, ಪ್ರಧಾನ ಕಾರ್ಯದರ್ಶಿಗಳಾದ ಆರ್. ಮುನಿಯಪ್ಪ, ಕೆ.ಬಿ.ವಾಸು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT