ಮಂಗಳವಾರ, ಡಿಸೆಂಬರ್ 6, 2022
20 °C
ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ ಅಭಿಮತ

‘ಜಯನಗರದಲ್ಲಿ ವಾರ್ಡ್ ಮಟ್ಟದ ಮಕ್ಕಳ ಸಭೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗ್ರಾಮೀಣ ಭಾಗದಲ್ಲಿ ನಡೆಯುವ ಮಕ್ಕಳ ಸಭೆಗಳಂತೆ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ ಮಟ್ಟದ ಮಕ್ಕಳ ಸಭೆಗಳನ್ನು ಆಯೋಜನೆ ಮಾಡಲಾಗುವುದು’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಶನಿವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌–2022’ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ‘ಮಕ್ಕಳಿಗೆ ತಮ್ಮದೇ ಆದ ಹಕ್ಕುಗಳಿದ್ದು, ಅವುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲಿವೆ. ಮಕ್ಕಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಬಲರಾಗಬೇಕು’ ಎಂದು ಕರೆ ನೀಡಿದರು.

‘ಗ್ರಾಮ ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆಗಳು ಆಗುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ನೋಡಿಕೊಳ್ಳಬೇಕು. ಮಕ್ಕಳೂ ಗ್ರಾಮ ಸಭೆಗಳು ಆಗುವಂತೆ ಒತ್ತಡ ಹೇರಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಶಾಸಕರ ವೇದಿಕೆಯ ಸದಸ್ಯ ನೆ.ಲ. ನರೇಂದ್ರಬಾಬು ಮಾತನಾಡಿ, ‘ಮಕ್ಕಳ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಆಗಬೇಕು. ಆಗ ಮಾತ್ರ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ತಿಳಿಸಿದರು.

ಶಾಲೆ ಮತ್ತು ಶಿಕ್ಷಣದ ಕೊರತೆ, ಮಕ್ಕಳಸ್ನೇಹಿ ಆಸ್ಪತ್ರೆ, ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕ, ಮಕ್ಕಳ ಭೀಕ್ಷಾಟನೆ, ಪೋಕ್ಸೊ ಕಾನೂನಿನ ಅರಿವು, ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಗಮನ, ಮಾದಕ ಪದಾರ್ಥಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು ಎಂದು ಮಕ್ಕಳು ತಮ್ಮ ಪ್ರಶ್ನೆಗಳನ್ನು ಮಂಡಿಸಿದರು.

ರಾಜ್ಯದಾದ್ಯಂತ 70ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುನೆಸೆಫ್‌ ಸಂವಹನ ತಜ್ಞ ಪ್ರಸೂನ್ ಸೇನ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸಂಚಾಲಕ ವಾಸುದೇವ್ ಶರ್ಮಾ ಎನ್.ವಿ., ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.