ಮಂಗಳವಾರ, ಫೆಬ್ರವರಿ 25, 2020
19 °C
ಡಿಸಿಎಂ ಆಶ್ವತ್ಥನಾರಾಯ

ಕೌಶಕಲ ಅಭಿವೃದ್ಧಿ: 3 ವರ್ಷದಲ್ಲಿ 20 ಸಾವಿರ ನವೋದ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ  ಸದ್ಯ 9 ಸಾವಿರ ನವೋದ್ಯಮಗಳಿದ್ದು, 2-3 ವರ್ಷಗಳಲ್ಲಿ ಈ ಸಂಖ್ಯೆ 20 ಸಾವಿರಕ್ಕೆ ಏರಲಿದೆ. ಅದಕ್ಕೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಮಂಗಳವಾರ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಜಂಟಿಯಾಗಿ ಆಯೋಜಿಸಿದ್ದ ‘ಉದ್ಯೋಗದಾತರ ಅಗತ್ಯಕ್ಕೆ ಅನುಗುಣವಾಗಿ ಕೌಶಲ ತರಬೇತಿ' ಕುರಿತ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಉದ್ಯಮಶೀಲತೆ ಹೆಚ್ಚಿದಾಗ ಉದ್ಯೋಗಾವಕಾಶವೂ ಹೆಚ್ಚುತ್ತದೆ, ಉದ್ಯೋಗಾವಕಾಶಗಳು ಸಾಕಷ್ಟಿವೆ, ಆದರೆ ನಮ್ಮ ಯುವ ಜನರಿಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ’ ಎಂದರು.

ಯುವ ಸಬಲೀಕರಣ ಕೇಂದ್ರ: ‘ನಮ್ಮ ಸರ್ಕಾರ ಆರಂಭಿಸಿರುವ ಯುವ ಸಬಲೀಕರಣ ಕೇಂದ್ರದ ಮೂಲಕ ಪ್ರತಿ ಪ್ರೌಢಶಾಲೆಯಲ್ಲೂ ಒಬ್ಬ ಸಮಾಲೋಚಕರನ್ನು ನಿಗದಿಪಡಿಸಿ, ಅವರಿಗೆ ಭತ್ಯೆ ನೀಡಲಾಗುವುದು. ಪ್ರೌಢಶಾಲೆ ಮಟ್ಟದಲ್ಲೇ ಮುಂದಿನ ಓದು, ಕೌಶಲ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು. ಇಂಟರ್ನ್‌ಶಿಪ್‌, ಅಪ್ರೆಂಟಿಸ್‌ಶಿಪ್‌, ಪ್ರಾಜೆಕ್ಟ್‌ ಹಾಗೂ ಮುಂದಿನ ವೃತ್ತಿ ಜೀವನದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಗುತ್ತಿದೆ’ ಎಂದು ಆಶ್ವತ್ಥನಾರಾಯಣ ಹೇಳಿದರು.

ಕೌಶಲ ಕಲಿಕೆ: ‘5 ಟ್ರಿಲಿಯನ್‌ ಆರ್ಥಿಕತೆ ಸಾಧಿಸಲು ಹೆಚ್ಚಿನ ಕೈಗಾರಿಕೆಗಳು ಬರಬೇಕು, ಉದ್ಯೋಗ ಅವಕಾಶ ಹೆಚ್ಚಬೇಕು, ಉದ್ದಿಮೆಗಳಿಗೆ ಬೇಕಾದ ಮಾನವ ಸಂಪನ್ಮೂಲ ಒದಗಿಸಲು ಸೂಕ್ತ ತರಬೇತಿ ಅಗತ್ಯ ಈ ನಿಟ್ಟಿನಲ್ಲಿ ಕೌಶಲ ತರಬೇತಿ ಕೇಂದ್ರಗಳ ಜತೆ ಕೈಗಾರಿಕೆಗಳು ಕೈ ಜೋಡಿಸಿದರೆ ಉತ್ತಮ. ಕಾರ್ಪೊರೇಟ್‌ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಐಟಿ ಬಿಟಿ ವಲಯಗಳು ಉದ್ಯೋಗ ಸೃಷ್ಟಿಗೆ ಪೂರಕ ಕೌಶಲ ತರಬೇತಿ ನೀಡಬಹುದು’ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ರತ್ನಪ್ರಭಾ ತಿಳಿಸಿದರು.

ಕರ್ನಾಟಕ ಉದ್ಯೋಗ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ರಾಘವೇಂದ್ರ ಇದ್ದರು.

‘ಸರ್ಕಾರ ಕನ್ನಡಿಗರ ಪರ’

ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಕರೆ ನೀಡಿರುವ ಬಂದ್‌ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ನಮ್ಮ ಸರ್ಕಾರ ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದೆ. ಅದಕ್ಕಿಂತ ಮುಖ್ಯವಾಗಿ ನಾವು ಭಾರತೀಯರು ಎಂಬುದನ್ನು ಮರೆಯವಂತಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಕಾರಣ ನಮ್ಮ ಔದಾರ್ಯತೆ, ಎಲ್ಲರನ್ನೂ ಪ್ರೀತಿಯಿಂದ ಒಪ್ಪಿಕೊಳ್ಳುವ ಗುಣ. ಈ ವೈವಿಧ್ಯತೆಯನ್ನು ನಾವು ಉಳಿಸಿಕೊಳ್ಳಬೇಕು. ನಾವಿಂದು ವಿಶ್ವ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದ್ದು, ಓಲೈಕೆ ರಾಜಕಾರಣ ಮಾಡುವುದಿಲ್ಲ’ ಎಂದರು.

***

ಕಾಲೇಜಿನಲ್ಲೇ ಉದ್ಯೋಗ ಮಾಹಿತಿ ಜತೆಗೆ ಐಟಿಐ, ಎಂಜನಿಯರಿಂಗ್‌ ಪಠ್ಯಕ್ರಮಗಳನ್ನು ಸರಳಗೊಳಿಸಲಾಗುತ್ತಿದೆ
-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು