ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ‘ಕಟ್ಟಾಳು’ಗಳಿಗೆ ಮುನಿಸೇಕೆ?: ನಿರ್ಣಾಯಕ ಘಟ್ಟಕ್ಕೆ ಭಿನ್ನರ ಧ್ವನಿ

ಮೈತ್ರಿ ವಿರುದ್ಧ ತಿರುಗಿಬಿದ್ದ ಐವರು ರಾಜಧಾನಿ ಶಾಸಕರು
Last Updated 6 ಜುಲೈ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಈ ಬಗ್ಗೆ ಭಿನ್ನ ಧ್ವನಿ ಎತ್ತುತ್ತಲೇ ಇದ್ದ ರಾಜಧಾನಿಯ ಕೆಲವು ಶಾಸಕರ ನಡೆ ಈಗ ನಿರ್ಣಾಯಕ ಘಟ್ಟ ತಲುಪಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಮಂದಿಯಲ್ಲಿ ಐವರು ಬೆಂಗಳೂರು ನಗರದ ಕ್ಷೇತ್ರಗಳನ್ನು ಪ್ರತಿನಿಧಿಸುವವರು. ಇವರಲ್ಲಿ ಬಿಟಿಎಂ ಕ್ಷೇತ್ರವನ್ನು ಪ್ರತಿನಿಧಿಸುವ ಹಿರಿಯ ಶಾಸಕ ರಾಮಲಿಂಗಾರೆಡ್ಡಿ,ಯಶವಂತಪುರ ಕ್ಷೇತ್ರದ ಎಸ್‌.ಟಿ.ಸೋಮಶೇಖರ, ರಾಜರಾಜೇಶ್ವರಿನಗರ ಕ್ಷೇತ್ರದ ಮುನಿರತ್ನ, ಕೆ.ಆರ್‌.ಪುರ ಕ್ಷೇತ್ರದ ಭೈರತಿ ಬಸವರಾಜು ಕಾಂಗ್ರೆಸ್‌ನವರು. ರೆಡ್ಡಿ ಹೊರತುಪಡಿಸಿ ಉಳಿದವರು ಒಂದು ಕಾಲದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

ಎಸ್‌.ಟಿ.ಸೋಮಶೇಖರ ಅವರಂತೂಮೈತ್ರಿ ಸರ್ಕಾರದ ವಿರುದ್ಧ ಪದೇ ಪದೇ ಧ್ವನಿ ಎತ್ತಿದ್ದರು. ‘ನಮ್ಮ ಮುಖ್ಯಮಂತ್ರಿ ಏನಿದ್ದರೂ ಸಿದ್ದರಾಮಯ್ಯ ಅವರೇ’ ಎಂದು ಒಮ್ಮೆ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಚ್‌.ಡಿ.ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದಾಗಲೂ ಸೋಮಶೇಖರ ಅವರು, ‘ನಮ್ಮನ್ನು ವಿಶ್ವಾಸಕ್ಕೆ ಪಡೆಯದೆ ಯಾವುದೇ ನಿರ್ಧಾರ ಕೈಗೊಂಡರೆ, ನಾವು ಜವಾಬ್ದಾರರಲ್ಲ’ ಎಂಬ ಸಂದೇಶ ರವಾನಿಸಿದ್ದರು.

ಲೋಕಸಭಾ ಚುನಾವಣೆವರೆಗೆ ತಾಳ್ಮೆ ವಹಿಸಿದ್ದ ರಾಮಲಿಂಗಾ ರೆಡ್ಡಿ ಇತ್ತೀಚೆಗೆ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು. ಹಿರಿಯರಿಗೆ ಮಂತ್ರಿ ಸ್ಥಾನ ನೀಡದಿರುವ ಪಕ್ಷದ ನಿರ್ಣಯಕ್ಕೆ ಆಕ್ಷೇಪ ವ್ಯಕ್ತ‍ಪಡಿಸಿದ್ದ ಅವರು, ‘ಕೆ.ಜೆ.ಜಾರ್ಜ್‌ ಸಚಿವರಾಗಬಹುದಾದರೆ, ನಾನೇಕೆ ಆಗಬಾರದು’ ಎಂದು ಪಕ್ಷದ ವರಿಷ್ಠರ ವಿರುದ್ಧವೇ ಹರಿಹಾಯ್ದಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಗುತ್ತಿಗೆಯ ಟೆಂಡರ್‌ ಪ್ರಕ್ರಿಯೆ ಬಗ್ಗೆಯೂ ರೆಡ್ಡಿ ಅವರು ಚಕಾರ ಎತ್ತಿದ್ದರು. ‘ನಗರದಲ್ಲಿ ಕಸ ವಿಲೇವಾರಿಗೆ ಅಲ್ಲಲ್ಲಿ ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌ (ಎಂಟಿಎಸ್‌) ನಿರ್ಮಿಸುವ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ನಿಯಮಗಳನ್ನು ಉಲ್ಲಂಘಿಸಿ ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಗೆ ಈ ಕಾಮಗಾರಿ ಕಾರ್ಯಾದೇಶ ಪತ್ರ ನೀಡಲಾಗಿದೆ’ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಹಾಗೂ ಮೇಯರ್‌ ಗಂಗಾಂಬಿಕೆ ಅವರಿಗೆ ಪತ್ರ ಬರೆದಿದ್ದರು.

ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲವು ಪಾಲಿಕೆ ಸದಸ್ಯರು, ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಟೆಂಡರ್‌ ಕರೆದ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು.

ಶಾಸಕ ಮುನಿರತ್ನ ಅವರು, ‘ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಸರಿಯಾಗಿಲ್ಲ’ ಎಂಬ ಬಗ್ಗೆ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಆರೊಪಿಸುವ ಮೂಲಕ ಪಾಲಿಕೆಯ ಮೈತ್ರಿ ಆಡಳಿತದ ವಿರುದ್ಧವೂ ಪರೋಕ್ಷವಾಗಿ ಧ್ವನಿ ಎತ್ತಿದ್ದರು.

ರಾಜ್ಯ ಸಾಬೂನು ಮತ್ತು ಮಾರ್ಜಕ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿಕುಮಾರ್‌ ಅವರನ್ನು ಈ ಸಂಸ್ಥೆ ಅಧ್ಯಕ್ಷ ಬೈರತಿ ಬಸವರಾಜು ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೊರೆ ಹೋಗಿ ವರ್ಗಾವಣೆ ಮಾಡಿಸಿದ್ದರು.ಆದರೆ, ಮಧ್ಯಮ ಮತ್ತು ಬೃಹತ್‌ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಅವರು ರವಿಕುಮಾರ್‌ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲು ನಿರಾಕರಿಸಿದ್ದರು. ಇದು ಅವರಿಬ್ಬರ ನಡುವೆ ಶೀತಲಸಮರಕ್ಕೆ ಕಾರಣವಾಗಿತ್ತು.

ಸಿದ್ದರಾಮಯ್ಯ– ಪರಮೇಶ್ವರ ಜಟಾಪಟಿ
ಬೆಂಗಳೂರು: ಅತೃಪ್ತ ಶಾಸಕರು ರಾಜೀನಾಮೆ ನೀಡಲು ಕಾರಣವಾದ ವಿಷಯ ಸಿದ್ದರಾಮಯ್ಯ ಮತ್ತು ಪರಮೇಶ್ವರ ಮಧ್ಯೆ ಮಾತಿನ ಜಟಾಪಟಿಗೆ ಕಾರಣವಾಗಿದೆ.

ಪಕ್ಷದ ಉಸ್ತುವಾರಿ ವೇಣುಗೋಪಾಲ್‌ ಅವರ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿದ ಪರಮೇಶ್ವರ, ‘ರಾಜೀನಾಮೆನೀಡುವುದಕ್ಕೂ ಮೊದಲು ಬೈರತಿ ಬಸವರಾಜು ಅವರು ನಿಮ್ಮ ಮನೆಗೆ ಬಂದಿದ್ದರಲ್ಲವೇ? ಎಂದು ಸಿದ್ದರಾಮಯ್ಯ ಅವರಿಗೆ ಕೇಳಿದ್ದರು. ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿದೆ ಎನ್ನಲಾಗಿದೆ.

‘ನಿಮ್ಮ ಕಾರ್ಯವೈಖರಿಗೆ ಶಾಸಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ಶಾಸಕರನ್ನು ನೀವು ಸರಿಯಾಗಿ ನಡೆಸಿಕೊಳ್ಳುತ್ತಿದ್ದರೆ ಯಾರೂ ರಾಜೀನಾಮೆ ನೀಡಲು ಮುಂದಾಗುತ್ತಿರಲಿಲ್ಲ’ ಎಂದು ಸಿದ್ದರಾಮಯ್ಯ ಖಾರವಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT