ಸೋಮವಾರ, ನವೆಂಬರ್ 18, 2019
25 °C
ಹೈಕೋರ್ಟ್‌ಗೆ ತಜ್ಞರ ವರದಿ ಸಲ್ಲಿಸಿದ ಬಿಬಿಎಂಪಿ

ರಾಜಕಾಲುವೆಗೆ ಸಿಮೆಂಟ್‌ ಸ್ಲ್ಯಾಬ್‌ ಹೊದಿಕೆ ಸೂಕ್ತವಲ್ಲ

Published:
Updated:

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಾಜಕಾಲುವೆಗಳಿಗೆ ಸಿಮೆಂಟ್‌ ಸ್ಲ್ಯಾಬ್‌ ಹೊದಿಸಿ ಮುಚ್ಚುವುದು ಸಮಜಂಸವಲ್ಲ’ ಎಂಬ ತಜ್ಞರ ಅಭಿಪ್ರಾಯವನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ನಗರದ ಮೂಲಸೌಕರ್ಯಗಳ ಕೊರತೆ ಪ್ರಶ್ನಿಸಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ಅವರು, ಅಕ್ಟೋಬರ್ 24ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನದ ಅನುಸಾರ ತಜ್ಞರ ವರದಿಯನ್ನು ಹೆಚ್ಚುವರಿ ಪ್ರಮಾಣ ಪತ್ರದ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು.

ಈ ಕುರಿತು ವಿವರಿಸಿದ ಅವರು, ‘ರಾಜಕಾಲುವೆಗಳನ್ನು ಮುಕ್ತವಾಗಿರಿಸಬೇಕು. ಅವುಗಳಲ್ಲಿ ಒಳ ಚರಂಡಿ ನೀರು, ಘನತ್ಯಾಜ್ಯ, ಕಟ್ಟಡ ತ್ಯಾಜ್ಯ ಸೇರದಂತೆ ಹಾಗೂ ಒತ್ತುವರಿಯಾಗದಂತೆ ಕ್ರಮ ವಹಿಸಬೇಕು ಎಂದು ಎನ್‌ಜಿಟಿ ಆದೇಶ ಮಾಡಿದೆ’ ಎಂದು ತಿಳಿಸಿದರು.

ಎನ್‌ಜಿಟಿ ಆದೇಶ ಜಾರಿಗೊಳಿಸುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬಿಬಿಎಂಪಿ, ಜಲಮಂಡಳಿ, ಬಿಡಿಎಗಳಿಗೆ 2018ರ ಜುಲೈ ಜುಲೈ 23 ರಂದು ಸೂಚಿಸಲಾಗಿದೆ. ಈ ನಿರ್ದೇಶನದ ನಂತರ ನಗರದಲ್ಲಿ ರಾಜಕಾಲುವೆಯನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ ನಿಲ್ಲಿಸಿದೆ’ ಎಂದು ತಿಳಿಸಿದರು.

‘ರಾಜಕಾಲುವೆ ಮುಚ್ಚುವುದರಿಂದ ಹೂಳು ಉಂಟಾಗುತ್ತದೆ. ಕೈಗಾರಿಕೆಗಳು ಒಳಚರಂಡಿ ನೀರನ್ನು ರಾಜಕಾಲುವೆಗೆ ಹರಿ ಬಿಡಬಹುದು. ಸ್ವಚ್ಛಗೊಳಿಸುವಾಗ ಕಾರ್ಮಿಕರಿಗೆ ಉಸಿರಾಟದ ತೊಂದರೆ ಎದುರಾಗಬಹುದು. ಇವುಗಳು ಮುಕ್ತವಾಗಿದ್ದರೆ ಹೂಳು ತೆಗೆಯಲು ಅನುಕೂಲವಾಗಲಿದೆ. ಆದ್ದರಿಂದ ಮಳೆ ನೀರು ಕಾಲುವೆಯನ್ನು ಮುಚ್ಚಬಾರದು ಎಂದು ರಾಜಕಾಲುವೆ ಮುಚ್ಚಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಸಮಿತಿ ಸದಸ್ಯ ಇನಾಯತ್ ಉಲ್ಲಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಪಾಯಕಾರಿ ಹಾಗೂ ಅಗತ್ಯ ಇರುವೆಡೆ ಆದ್ಯತೆ ಮೇರೆಗೆ ಚೈನ್‌ಲಿಂಕ್ ಫೆನ್ಸಿಂಗ್‌ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ‘ಈತನಕ ಎಲ್ಲೆಲ್ಲಿ ಚೈನ್‌ಲಿಂಕ್ ಫೆನ್ಸಿಂಗ್‌ ಅಳವಡಿಸಲಾಗಿದೆ, ಎಲ್ಲೆಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ ಎಂಬುದರ ಕುರಿತು ವಿವರವಾದ  ವಸ್ತುಸ್ಥಿತಿ ವರದಿ ಸಲ್ಲಿಸಿ’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರತಿಕ್ರಿಯಿಸಿ (+)