‘ರಾಜಕಾಲುವೆ ವಾರ್ಷಿಕ ನಿರ್ವಹಣೆಗೆ ಕ್ರಿಯಾಯೋಜನೆ’

7

‘ರಾಜಕಾಲುವೆ ವಾರ್ಷಿಕ ನಿರ್ವಹಣೆಗೆ ಕ್ರಿಯಾಯೋಜನೆ’

Published:
Updated:

ಬೆಂಗಳೂರು: ಮಳೆ ಬಂದಾಗ ನಗರದ ತಗ್ಗುಪ್ರದೇಶಗಳಲ್ಲಿ ಪದೇ ಪದೇ ಪ್ರವಾಹ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ಗುತ್ತಿಗೆ ನೀಡಲು ಪಾಲಿಕೆ ಕ್ರಿಯಾಯೋಜನೆ ರೂಪಿಸುತ್ತಿದೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ‘ರಾಜಕಾಲುವೆಗಳ ನಿರ್ವಹಣೆಗೆ ಇದುವರೆಗೆ ನಿರ್ದಿಷ್ಟ ವ್ಯವಸ್ಥೆ ಇರಲಿಲ್ಲ. ಪದೇ ಪದೇ ಪ್ರವಾಹ ಕಾಣಿಸಿಕೊಳ್ಳುವ ಸೂಕ್ಷ್ಮ ಪ್ರದೇಶಗಳ ಮಾತ್ರ ಹಚ್ಚಿನ ನಿಗಾ ವಹಿಸಲಾಗುತ್ತಿದೆ. ಕಾಲುವೆಯನ್ನು ಸ್ವಚ್ಛಗೊಳಿಸಿದರೂ, ತಿಂಗಳ ಒಳಗೆ ಅಲ್ಲಿ ಕಸ ತುಂಬಿಕೊಳ್ಳುತ್ತಿತ್ತು. ಗಿಡಗಂಟಿಗಳು ಬೆಳೆಯುತ್ತಿದ್ದವು. ಇನ್ನು ಮುಂದೆ ನಗರದ ಎಲ್ಲ ರಾಜಕಾಲುವೆಗಳನ್ನು ವಾರ್ಷಿಕ ನಿರ್ವಹಣೆಯ ವ್ಯಾಪ್ತಿಗೆ ತರಲಿದ್ದೇವೆ’ ಎಂದು ತಿಳಿಸಿದರು.

‘ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಅವರು ಇತ್ತೀಚೆಗೆ ಸಭೆ ನಡೆಸಿದ್ದಾರೆ. ನಗರ ಜಿಲ್ಲಾಧಿಕಾರಿ, ಭೂದಾಖಲೆಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕರೂ ಈ ಸಭೆಯಲ್ಲಿ ಭಾಗವಹಿಸಿದ್ದರು. ತೆರವು ಮಾಡಬೇಕಾದ ಕಡೆ ಕಂದಾಯ ಇಲಾಖೆಯವರು ಗಡಿ ಗುರುತು ಮಾಡಿಕೊಡಬೇಕು ಎಂದು ನಾನು ಕೇಳಿಕೊಂಡಿದ್ದೇನೆ’ ಎಂದರು.

‘ಈ ಹಿಂದೆ ಸಮೀಕ್ಷೆ ನಡೆಸಿದ ಸರ್ವೇಯರ್‌ಗಳು ಈಗ ವರ್ಗವಾಗಿದ್ದಾರೆ. ಹಾಗಾಗಿ ನಿರ್ದಿಷ್ಟ ಅವಧಿಗೆ ಅವರನ್ನು ಮತ್ತೆ ನಗರಕ್ಕೆ ನಿಯೋಜನೆ ಮಾಡಿ ಗಡಿಗುರುತು ಮಾಡಿಕೊಡುವಂತೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಗಡಿ ಗುರುತು ಮಾಡುವ ಕೆಲಸ ಮುಗಿದ ಬಳಿಕ ಮುಂದಿನ ತಿಂಗಳಿನಿಂದ ಒತ್ತುವರಿ ತೆರವು ಮಾಡಲಿದ್ದೇವೆ’ ಎಂದರು.

ಅಧಿಕಾರಿಗಳ ಮೇಳೆ ದೌರ್ಜನ್ಯ ಸಹಿಸುವುದಿಲ್ಲ: ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರಿಗೆ ಗುತ್ತಿಗೆದಾರರೊಬ್ಬರು ಬೆದರಿಕೆ ಒಡ್ಡಿರುವ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ‘ಅಧಿಕಾರಿಗಳಿಗೆ ಬೆದರಿಕೆ ಒಡ್ಡುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇವೆ. ಇಂತಹ ಪ್ರತಿಯೊಂದು ಪ್ರಕರಣದಲ್ಲೂ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇವೆ’ ಎಂದು ಉತ್ತರಿಸಿದರು.

‘1500 ಕಡೆ ಕಸದ ರಾಶಿ’

‘ಸಾರ್ವಜನಿಕ ಸ್ಥಳದಲ್ಲಿ ಕಸ ರಾಶಿ ಹಾಕುವ ತಾಣಗಳ ಸಮೀಕ್ಷೆಗೆ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ನಗರದಲ್ಲಿ 1500 ತಾಣಗಳಲ್ಲಿ ಕಸ ರಾಶಿ ಹಾಕಲಾಗುತ್ತಿದೆ ಎಂಬ ಅಂಶ ಈ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಈ ಕಸವನ್ನು 15 ದಿನಗಳ ಒಳಗೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪಾಲಿಕೆಯ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದರು.

ತಿಂಗಳ ಒಳಗೆ ಟೆಂಡರ್‌: ‘ಕಸ ವಿಲೇವಾರಿಗೆ ವಾರ್ಡ್‌ವಾರು ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದರ ಅವಧಿ ಒಂದು ವರ್ಷಕ್ಕೆ ಸೀಮಿತ. ಈ ಹಿಂದೆ ಟೆಂಡರ್ ಕರೆದಾಗ ಗುತ್ತಿಗೆದಾರರು ಆಸಕ್ತಿ ತೋರಿಸಿರಲಿಲ್ಲ. ಹಾಗಾಗಿ, ಈ ಬಾರಿ ಷರತ್ತುಗಳಲ್ಲಿ ಮಾರ್ಪಾಡು ಮಾಡಿದ್ದೇವೆ. ಹಳೆ ಆಟೊ ಟಿಪ್ಪರ್‌ಗಳನ್ನು ಉಪಯೋಗಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಸ ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಕಡ್ಡಾಯ ಮಾಡಲಾಗಿದೆ’ ಎಂದು ಅವರು ವಿವರಿಸಿದರು. 

‘ಕಾಂಪ್ಯಾಕ್ಟರ್‌ಗಳಿಗೆ ರೇಡಿಯೊ ತರಂಗಗಳ ಆಧಾರದಲ್ಲಿ ಕಾರ್ಯನಿರ್ವಹಿಸುವ ಆಎಫ್‌ಐಡಿ ಚಿಪ್‌ ಅಳವಡಿಸಲಾಗುತ್ತದೆ. ಯಾವ ವಾಹನ ಎಲ್ಲೆಲ್ಲ ಸಂಚರಿಸಿದೆ ಎಂಬುದನ್ನು ಪತ್ತೆ ಹಚ್ಚುವುದು ಇದರಿಂದ ಸುಲಭವಾಗಲಿದೆ. ಕಸ ಸಾಗಣೆಗೆ ಸಂಬಂಧಿಸಿದ ಡಿಜಿಟಲ್‌ ವರದಿ ಸಲ್ಲಿಕೆ ಆದ ಬಳಿಕವಷ್ಟೇ ಗುತ್ತಿಗೆದಾರರಿಗೆ ಹಣ ಪಾವತಿಗೆ ಅವಕಾಶವಿದೆ’ ಎಂದು ಪಾಲಿಕೆ ಆಯಕ್ತ ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !