ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World No Tobacco Day | ಬೆಂಗಳೂರಿನಲ್ಲಿ ತಂಬಾಕು ಸಂಬಂಧಿ ಕ್ಯಾನ್ಸರ್ ಹೆಚ್ಚಳ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಅಧ್ಯಯನ
Last Updated 30 ಮೇ 2020, 20:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 1 ಲಕ್ಷ ಪುರುಷರಲ್ಲಿ 40 ಮಂದಿ ಹಾಗೂ 1 ಲಕ್ಷ ಮಹಿಳೆಯರಲ್ಲಿ 20 ಮಂದಿ ತಂಬಾಕು ಸಂಬಂಧಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನುವುದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ತಂಬಾಕು ಉತ್ಪನ್ನಗಳ ಸೇವನೆಯು ಬಾಯಿ, ಗಂಟಲು, ಧ್ವನಿಪಟ್ಟಿಗೆ, ಮಿದುಳು, ಅನ್ನನಾಳ, ಶ್ವಾಸಕೋಶ, ಪಿತ್ತಕೋಶ, ಮೂತ್ರಪಿಂಡ, ಸ್ತನ ಸೇರಿದಂತೆ ದೇಹದ ವಿವಿಧ ಅಂಗಾಂಗಗಳ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಹೃದಯ ಕಾಯಿಲೆ, ಶ್ವಾಸಕೋಶದ ಸಮಸ್ಯೆ, ಪಾರ್ಶ್ವವಾಯು, ಕುರುಡುತನ, ಹಲ್ಲು ಮತ್ತು ವಸಡಿನ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಒಂದರಲ್ಲೇ ಪ್ರತಿ ವರ್ಷ 3 ಸಾವಿರಕ್ಕೂ ಅಧಿಕ ತಂಬಾಕು ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ.

ತಂಬಾಕು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಸೇವನೆಯಿಂದ ಮನುಷ್ಯನ ರೋಗನಿರೋಧಕ ಶಕ್ತಿ ಕಡಿಮೆ ಆಗಲಿದೆ. ಇದರಿಂದ ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಇದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಸೋಂಕಿತರು ತಂಬಾಕು ಉತ್ಪನ್ನಗಳನ್ನು ಜಗಿದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡಲಿದೆ.

ಜೀವಕ್ಕೆ ಕುತ್ತು: ‘ಹೆಚ್ಚಿನವರು ರೋಗ ಉಲ್ಬಣಗೊಂಡ ಬಳಿಕ ಸಂಸ್ಥೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಕ್ಯಾನ್ಸರ್ ಇರುವುದನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆಯಾದರೆ ಅಗತ್ಯ ಚಿಕಿತ್ಸೆ ನೀಡಿ, ಗುಣಪಡಿಸಬಹುದು. ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಕಾರ್ಯನೀತಿಗಳು ಹಾಗೂ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ. ತೆರಿಗೆ ವಿಧಿಸುವುದು, ಜಾಹೀರಾತು ನಿಷೇಧ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡರೆ ಮಾತ್ರ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರಬಹುದು’ ಎಂದು ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

‘ಕೊರೊನಾ ಸೋಂಕು ಕಾಡುತ್ತಿರುವ ಈ ಸಂದರ್ಭದಲ್ಲಿ ಧೂಮಪಾನ ಮತ್ತು ತಂಬಾಕು ಸೇವಿಸುವವರ ಜೀವಕ್ಕೇ ಕುತ್ತು ಉಂಟಾಗುವ ಸಾಧ್ಯತೆಗಳಿವೆ. ಧೂಮಪಾನದಿಂದ ಶ್ವಾಸಕೋಶ ದುರ್ಬಲವಾಗಲಿದೆ. ಕೊರೊನಾ ವೈರಾಣುವೂ ಶ್ವಾಸಕೋಶಕ್ಕೆ ಮೊದಲು ದಾಳಿ ನಡೆಸಲಿದೆ. ಹಾಗಾಗಿ ತಂಬಾಕು ಉತ್ಪನ್ನಗಳನ್ನು ತ್ಯಜಿಸಿ, ಆರೋಗ್ಯಕಾರಿ ಜೀವನ ವಿಧಾನ ಅಳವಡಿಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT