ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಭಕ್ಕೇರಲು ಇನ್ನೊಂದೇ ವರ್ಷ

ವಿದ್ಯಾರ್ಥಿಗಳೇ ರೂಪಿಸಲಿದ್ದಾರೆ 75 ಉಪಗ್ರಹ l ಉಡ್ಡಯನಕ್ಕೆ ಐಟಿಸಿಎ ನೆರವು
Last Updated 19 ಸೆಪ್ಟೆಂಬರ್ 2019, 9:40 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲವೂ ಅಂದು ಕೊಂಡಂತೆ ನಡೆದರೆ, ನಮ್ಮ ದೇಶದ ವಿಜ್ಞಾನದ ವಿದ್ಯಾರ್ಥಿಗಳು ರೂಪಿಸಲಿರುವ ಉಪಗ್ರಹ ಇನ್ನೊಂದೇ ವರ್ಷದಲ್ಲಿ ಬಾಹ್ಯಾಕಾಶದ ಕಕ್ಷೆಯನ್ನು ಸೇರಲಿದೆ.

ನಮ್ಮ ದೇಶದ ಕಾಲೇಜು ವಿದ್ಯಾರ್ಥಿಗಳು ರೂಪಿಸುವ 75 ಪುಟ್ಟ ಪುಟ್ಟ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದು ಇಂಡಿಯನ್‌ ಟೆಕ್ನಾಲಜಿ ಕಾಂಗ್ರೆಸ್‌ ಸಂಸ್ಥೆಯ (ಐಟಿಸಿಎ) ಮಹತ್ವಾಕಾಂಕ್ಷಿ ಯೋಜನೆ. ವರ್ಷದ ಹಿಂದೆಯೇ ಚಾಲನೆ ಪಡೆದಿರುವ ಈ ಯೋಜನೆಗೆ ಬೆಂಗಳೂರಿನಲ್ಲೇ ನಡೆಯುತ್ತಿರುವ ಇಂಡಿಯನ್‌ ಟೆಕ್ನಾಲಜಿ ಕಾಂಗ್ರೆಸ್‌ ಮತ್ತಷ್ಟು ಿಂಬು ನೀಡಿದೆ.

‘ಜಗತ್ತಿನಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ರೂಪಿಸಿರುವ 3 ಸಾವಿರಕ್ಕೂ ಅಧಿಕ ಉಪಗ್ರಹಗಳು ಈಗಾಗಲೇ ಬಾಹ್ಯಾಕಾಶ ಕಕ್ಷೆಗೆ ಸೇರಿವೆ. ಅವುಗಳಲ್ಲಿ 9ರಿಂದ 10 ಮಾತ್ರ ಭಾರತ ವಿದ್ಯಾರ್ಥಿಗಳು ರೂಪಿಸಿದವು. ಅವೂ ಯಶಸ್ವಿಯಾಗಿಲ್ಲ. ಇಸ್ರೇಲ್‌ನಲ್ಲಂತೂ ಶಾಲಾ ವಿದ್ಯಾರ್ಥಿಗಳೂ ಉಪಗ್ರಹಗಳನ್ನು ರೂಪಿಸಿದ್ದು, ಅವೆಲ್ಲವೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದನ್ನು ನೋಡಿದಾಗ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತದ ವಿದ್ಯಾರ್ಥಿಗಳೂ ಈ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ ಏಕೆ ಎಂಬ ಕೊರಗು ಕಾಡುತ್ತಿತ್ತು. ಈ ಕೊರತೆ ನೀಗಿಸುವ ಉದ್ದೇಶದಿಂದಲೇ ನಾವು ಈ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ’ ಎಂದು ಐಟಿಸಿಎ ಅಧ್ಯಕ್ಷ ಎಲ್‌.ವಿ.ಮುರಳಿಕೃಷ್ಣ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ವಿದ್ಯಾರ್ಥಿಗಳಲ್ಲಿ ಅಳುಕು ಇದೆ. ಅದನ್ನು ಹೋಗಲಾಡಿಸಿ ಸ್ಥೈರ್ಯ ತುಂಬು ಪ್ರಯತ್ನ ನಮ್ಮದು. 2018ರ ನವೆಂಬರ್‌ನಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ಒದಗಿಸುವ ಪ್ರಯತ್ನ ಆರಂಭಿಸಿದ್ದೇವೆ. ಅನೇಕ ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬಂದಿವೆ. ಅವುಗಳ ಆಡಳಿತ ಮಂಡಳಿಯ ಪ್ರಮುಖರನ್ನು ಇಸ್ರೇಲ್‌ಗೆ ಕರೆದೊಯ್ದು, ಈ ಕಾರ್ಯ ಎಷ್ಟು ಸಲೀಸು ಎಂಬುದನ್ನೂ ತಿಳಿಸುವ ಪ್ರಯತ್ನ ಮಾಡಿದ್ದೇವೆ’ ಎಂದರು.

‘ಈಗಾಗಲೇ 28 ಕಾಲೇಜುಗಳು ಈ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿವೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಕರ್ನಾಟಕದ ನಿಟ್ಟೆ, ರೇವಾ, ಬಿಎಂಎಸ್‌ ಸೇರಿದಂತೆ ಮೂರ್ನಾಲ್ಕು ಕಾಲೇಜುಗಳು ಸೇರಿವೆ. ಅವರಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ನೆದರ್ಲೆಂಡ್‌, ಇಂಗ್ಲೆಂಡ್‌, ಅಮೆರಿಕ, ಇಸ್ರೇಲ್‌ ಮೊದಲಾದ ದೇಶಗಳು ತಾಂತ್ರಿಕನೆರವನ್ನು ನೀಡುತ್ತಿವೆ. ಇವರು ತಯಾರಿಸುವ ಉಪಗ್ರಹಗಳ ಉಡ್ಡಯನ ಇಸ್ರೊ ನೆರವಿನಿಂದ ನಡೆಯಲಿದೆ’ ಎಂದರು.

ಹಣಕಾಸು ವ್ಯವಸ್ಥೆ ಹೇಗೆ?

‘ಬಹುತೇಕ ಶಿಕ್ಷಣ ಸಂಸ್ಥಗಳೇ ಇದರ ಹಣಕಾಸು ವೆಚ್ಚವನ್ನು ಭರಿಸಬೇಕಾಗುತ್ತದೆ. ಅನಿವಾರ್ಯವಾದರೆ ಹಣಕಾಸಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಿದ್ದೇವೆ. ಇಸ್ರೇಲ್‌ ಕೂಡಾ ಕಿರು ಸಾಲ ಒದಗಿಸಲು ಮುಂದಾಗಿದೆ. ಈಗಾಗಲೇ ನಾಲ್ಕು ಯೋಜನೆಗಳಿಗೆ ಹಣಕಾಸು ಒದಗಿಸಲು ಒಪ್ಪಿಗೆ ಸೂಚಿಸಿದೆ’ ಎಂದು ಮುರಳಿಕೃಷ್ಣ ರೆಡ್ಡಿ ತಿಳಿಸಿದರು.

‘ಈ ಯೋಜನೆಗೆ ಇಂತಿಷ್ಟೇ ವೆಚ್ಚವಾಗುತ್ತದೆ ಎಂದು ಈ ಹಂತದಲ್ಲೇ ಹೇಳಲು ಸಾಧ್ಯವಿಲ್ಲ. ಉಪಗ್ರಹ ಯಾವ ರೀತಿ ಇರಲಿದೆ, ಅದರ ತೂಕ ಎಷ್ಟು, ಯಾವ ತಂತ್ರಜ್ಞಾನ ಬಳಸಲಾಗುತ್ತದೆ ಎಂಬ ಆಧಾರದಲ್ಲಿ ವೆಚ್ಚ ನಿರ್ಧಾರವಾಗುತ್ತದೆ’ ಎಂದು ಐಟಿಸಿ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಬಾಲಸುಬ್ರಹ್ಮಣ್ಯ ತಿಳಿಸಿದರು.

‘ನಭಕ್ಕೆ ಉಪಗ್ರಹ ಕಸವಾಗುವಂತಿಲ್ಲ’

‘ವಿದ್ಯಾರ್ಥಿಗಳು ರೂಪಿಸುವ ಉಪಗ್ರಹಗಳು ಕನಿಷ್ಠ ಮೂರರಿಂದ ಗರಿಷ್ಠ 6 ವರ್ಷಗಳವರೆಗೆ ಕಕ್ಷೆಯಲ್ಲಿ ಸುತ್ತಲಿವೆ. ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಳಿಕ ಅವುಗಳನ್ನು ವ್ಯವಸ್ಥಿತವಾಗಿ ನಾಶಪಡಿಸಿ, ಅದರಿಂದ ನಭದಲ್ಲಿ ಕಸ ಉತ್ಪತ್ತಿಯಾಗದಂತೆ ನೋಡಿಕೊಳ್ಳುವ ಹೊಣೆಯೂ ಆಯಾ ದೇಶಗಳದ್ದೇ’ ಎಂದು ಐಟಿಸಿಎ ವಿಜ್ಞಾನಿ ಪ್ರಮಿತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT