ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಚಿತ್ರಾ ಫಿಲ್ಮ್ ‘ಸೊಸೈಟಿ’ ಹಕ್ಕು ಕಸಿದ ‘ಅಕಾಡೆಮಿ’

ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ l ತಾಯಿ ಸಂಸ್ಥೆಗೆ ನ್ಯಾಯ ಒದಗಿಸಲು ಆಗ್ರಹ
Last Updated 14 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಚಿತ್ರಾ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಸುಚಿತ್ರ ಫಿಲ್ಮ್ ಸೊಸೈಟಿಯ ಹಕ್ಕು ಕಸಿದುಕೊಳ್ಳುತ್ತಿದ್ದು, ತಾಯಿ ಸಂಸ್ಥೆಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿ ಸೊಸೈಟಿ ಸದಸ್ಯರು ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಕಟ್ಟಡದ ಎದುರು ಭಾನುವಾರ ಸೇರಿದ್ದ ಸದಸ್ಯರು, ಕಪ್ಪು ಪಟ್ಟಿ ಧರಿಸಿ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಬನಶಂಕರಿ ಸೇವಾವೃದ್ಧಿ ಸಂಘದ ಸದಸ್ಯರು ಹಾಗೂ ಸಿನಿಮಾ ಪ್ರಿಯರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದರು.

‘ಸುಚಿತ್ರಾ ಫಿಲ್ಮ್ ಸೊಸೈಟಿ ಸ್ಥಾಪನೆಯಾದ ನಂತರವೇ ಅಕಾಡೆಮಿ ಸ್ಥಾಪನೆ ಆಗಿದೆ. ಅಕಾಡೆಮಿಗೆ ಸೊಸೈಟಿಯೇ ತಾಯಿ. ಆದರೆ, ಈಗ ತಾಯಿಯನ್ನೇ ಹೊರಗೆ ಹಾಕುವ ಪ್ರಯತ್ನಗಳು ನಡೆದಿವೆ. ನಮ್ಮ ಸ್ಥಾನ ಹಾಗೂ ಹಕ್ಕಿಗಾಗಿ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ’ ಎಂದು ಸೊಸೈಟಿ ಅಧ್ಯಕ್ಷರೂ ಆದ ನಿರ್ದೇಶಕ ಬಿ. ಸುರೇಶ್‌ ಹೇಳಿದರು.

‘ಸಿನಿಮಾ ಆಸಕ್ತರು ಸೇರಿಕೊಂಡು ಚಾಮರಾಜಪೇಟೆಯ ಕೊಠಡಿಯೊಂದರಲ್ಲಿ 1971ರಲ್ಲಿ ಸೊಸೈಟಿ ಆರಂಭಿಸಿದರು. ಸೊಸೈಟಿ ಕೆಲಸ ಗುರುತಿಸಿದ್ದ ಸರ್ಕಾರ, ಸಿನಿಮಾ ಪ್ರದ
ರ್ಶನಕ್ಕೆ ಅನುಕೂಲವಾಗಲೆಂದು ಬನಶಂಕರಿಯಲ್ಲಿ ನಾಗರಿಕ ಸೌಲಭ್ಯ (ಸಿಎ) ನಿವೇಶನ ನೀಡಿತ್ತು. ನಿವೇಶನ ನೋಡಿಕೊಳ್ಳಲು ಟ್ರಸ್ಟ್ ಬೇಕೆಂದು ಸರ್ಕಾರ ಹೇಳಿತ್ತು. ಅದೇ ಕಾರಣಕ್ಕೆ 1979ರಲ್ಲಿ ಸುಚಿತ್ರಾ ಸಿನಿಮಾ ಅಕಾಡೆಮಿ ಸ್ಥಾಪಿಸಲಾಯಿತು.’

‘ಸೊಸೈಟಿ ಸದಸ್ಯರೇ ಅಕಾಡೆಮಿಗೂ ಸದಸ್ಯರಾಗಿದ್ದರು. ಸಿನಿಮಾ ಪ್ರದರ್ಶನ ಮಾತ್ರವಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳಿಗೂ ವೇದಿಕೆಯಾಗಿತ್ತು. ಹೀಗಾಗಿ, ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಎಂಬುದಾಗಿ ಹೆಸರು ಬದಲಾಯಿಸಲಾಯಿತು. ಅಕಾಡೆಮಿ ಆಡಳಿತಾತ್ಮಕ ವೆಚ್ಚವನ್ನೂ ಸೊಸೈಟಿಯಿಂದಲೇ ಭಾಗಶಃ ಭರಿಸಲಾಗುತ್ತಿತ್ತು’ ಎಂದೂ ಸುರೇಶ್ ತಿಳಿಸಿದರು.

‘ಪುರವಂಕರ ಸಂಸ್ಥೆ ಜೊತೆ 2015ರಲ್ಲಿ ಒಪ್ಪಂದ ಮಾಡಿಕೊಂಡು ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಪಡೆದು ಕಟ್ಟಡ ನವೀಕರಣ ಮಾಡಲಾಗಿತ್ತು. ಇದೇ ನೆಪದಲ್ಲಿ ಅಕಾಡೆಮಿ ಹೆಸರಿನ ಮುಂದೆ ಪುರವಂಕರ ಹೆಸರು ಸೇರಿಸಲಾಗಿದೆ. ಸೊಸೈಟಿ ಅಧ್ಯಕ್ಷರನ್ನು ಆಹ್ವಾನಿತರೆಂದು ಹೇಳಿ ಡೀಡ್ ಸಹ ಬದಲಾಯಿಸಲಾಗಿದೆ’ ಎಂದೂ ಅವರು ಆರೋಪಿಸಿದರು.

ಬಾಡಿಗೆ ಹೆಚ್ಚಳ: ‘ಸುಚಿತ್ರಾ ಕಟ್ಟಡದ ಪ್ರಾಂಗಣದಲ್ಲಿ ಸುಚಿತ್ರಾ ಫಿಲ್ಮ್ ಸೊಸೈಟಿ ಕಚೇರಿ ಇದೆ. ಇದಕ್ಕೆ ತಿಂಗಳಿಗೆ ₹ 50 ಸಾವಿರ ಬಾಡಿಗೆ ಪಾವತಿಸುವಂತೆ ಅಕಾಡೆಮಿ ಹೇಳುತ್ತಿದೆ. ಕಟ್ಟಡದ ಸಭಾಭವನದ ಬಾಡಿಗೆಯನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಏರಿಸಲಾಗಿದೆ’ ಎಂದೂ ಸುರೇಶ್ ಮಾಹಿತಿ ನೀಡಿದರು.

‘ಸೊಸೈಟಿ ಅಧ್ಯಕ್ಷರನ್ನು ಟ್ರಸ್ಟ್‌ನ ಶಾಶ್ವತ ಸದಸ್ಯರನ್ನಾಗಿ ಮಾಡಬೇಕು. ಸೊಸೈಟಿ ಕಾರ್ಯಕಾರಿ ಸದಸ್ಯರೊಂದಿಗೆ ಚರ್ಚಿಸಿ ಬಾಡಿಗೆ ದರ ನಿಗದಿ ಮಾಡಬೇಕು. ಯಾವುದೇ ಅಡೆ–ತಡೆಗಳು ಇಲ್ಲದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸೊಸೈಟಿಗೆ ಮುಕ್ತ ಅವಕಾಶ ಮಾಡಿಕೊಡಬೇಕು’ ಎಂದೂ ಅವರು ಒತ್ತಾಯಿಸಿದರು.

ಲೇಖಕಿ ವಿಜಯಮ್ಮ, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸುರೇಶ್ ಹೆಬ್ಳೀಕರ್, ಕಥೆಗಾರ ವಿವೇಕ ಶಾನಬಾಗ್ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT