ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರಿ ಕೊಂದು ತಾಯಿ ಆತ್ಮಹತ್ಯೆ

ಕುಟುಂಬದೊಂದಿಗೆ ಪತಿ ಸಮಯ ಕಳೆಯಲ್ಲ ಎಂಬ ಕಾರಣ?
Last Updated 10 ಜುಲೈ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರು ಒಂಬತ್ತು ವರ್ಷದ ಅನಾರೋಗ್ಯಪೀಡಿತ ಪುತ್ರಿಯನ್ನು ಉಸಿರುಗಟ್ಟಿಸಿ ಕೊಂದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯ ಅಕ್ಷಯ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಯಲಹಂಕ ಸಮೀಪದ ಅಟ್ಟೂರು ಬಳಿಯ ಅಕ್ಷಯ ನಗರ ನಿವಾಸಿ, ಸಿವಿಲ್ ಎಂಜಿನಿಯರ್ ಸುರೇಶ್‍ಬಾಬು ಎಂಬವರ ಪತ್ನಿ ಪ್ರಿಯಾ (36) ಆತ್ಮಹತ್ಯೆ ಮಾಡಿಕೊಂಡವರು. ಅದಕ್ಕೂ ಮೊದಲು ಅವರು ಪುತ್ರಿ ಪ್ರತೀಕ್ಷಾಳನ್ನು (9) ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು.

ಘಟನೆಯ ಸಂಬಂಧ ಮೃತ ಪ್ರಿಯಾ ವಿರುದ್ಧ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಯಲಹಂಕ ನ್ಯೂಟೌನ್ ಪೊಲೀಸರು ತಿಳಿಸಿದರು.

ಪತಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ ಎಂಬ ಕಾರಣಕ್ಕೆ ಪುತ್ರಿ ಜೊತೆ ಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ತಮಿಳುನಾಡಿನ ಮದುರೈನವರಾದ ಸುರೇಶ್‍ಬಾಬು ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಅವರು ಕುಟುಂಬ ಸಮೇತ ಬೆಂಗಳೂರಿಗೆ ಬಂದು ಅಕ್ಷಯನಗರದ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದರು.

ಪ್ರಿಯಾ ಅವರು ಮನೆಯಲ್ಲೇ ಇರುತ್ತಿದ್ದರು. ಪ್ರತೀಕ್ಷಾ ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಅವರ ಪುತ್ರ ಆಕಾಶ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದಾನೆ. ಕೆಲಸದ ಒತ್ತಡದಿಂದಾಗಿ ಸುರೇಶ್ ಬಾಬು ಅವರಿಗೆ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದು ಪತಿ–ಪತ್ನಿ ಮಧ್ಯೆ ಆಗಾಗ ವಾಗ್ವಾದಕ್ಕೆ ಕಾರಣವಾಗುತ್ತಿತ್ತು.

ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ರಿಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಆರೋಗ್ಯ ಸುಧಾರಿಸಿರಲಿಲ್ಲ. ಹೀಗಾಗಿ, ಪುತ್ರಿ ಸರಿಯಾಗಿ ಶಾಲೆಗೂ ಹೋಗದೆ ಮನೆಯಲ್ಲೇ ಇರುತ್ತಿದ್ದಳು. ಪುತ್ರಿ ಅನಾರೋಗ್ಯ ಹೊಂದಿದ್ದರೂ ಪತಿ, ಕೆಲಸದ ಒತ್ತಡದಲ್ಲೇ ಸಮಯ ಕಳೆಯುತ್ತಿದ್ದರು.

ಇದರಿಂದ ತೀವ್ರ ಬೇಸತ್ತಿದ್ದ ಪ್ರಿಯಾ, ಮಂಗಳವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ಪುತ್ರಿ ಪ್ರತೀಕ್ಷಾಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಬಳಿಕ ಅದೇ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 9.30ರ ಸುಮಾರಿಗೆ ಪುತ್ರ ಆಕಾಶ್ ಮನೆಗೆ ಬಂದಾಗ ವಿಷಯ ಗೊತ್ತಾಗಿದೆ. ಆತ ತಕ್ಷಣ ತಂದೆ ಸುರೇಶ್‍ಬಾಬು ವಿಷಯ ತಿಳಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಪೊಲೀಸರು ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ ಪತಿ ಸುರೇಶ್‍ಬಾಬುನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಿಯಾ ಪೋಷಕರ ಹೇಳಿಕೆ ದಾಖಲಿಸಿಕೊಂಡು ಮೃತದೇಹಗಳನ್ನು ಹಸ್ತಾಂತರಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT