ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ದರ | ಅಣಕು ಶವಯಾತ್ರೆಗೆ ಯತ್ನ: ರೈತರು ವಶಕ್ಕೆ

Last Updated 26 ನವೆಂಬರ್ 2022, 19:04 IST
ಅಕ್ಷರ ಗಾತ್ರ

ಬೆಂಗಳೂರು: ‘ಕಬ್ಬಿನ ಎಫ್‌ಆರ್‌ಪಿ ದರ ಹೆಚ್ಚಿಸಬೇಕು’ ಎಂದು ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಲು ಮುಂದಾಗಿದ್ದ ರೈತರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ರೈತರ ಪ್ರತಿನಿಧಿಗಳು, ರಾಜ್ಯ ರೈತ ಸಂಘಟನೆಗಳ‌ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಹೋರಾಟಕ್ಕೆ ರಾಜ್ಯ ಸರ್ಕಾರದ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದ ರೈತರು, ಉದ್ಯಾನ ಎದುರಿನ ಮುಖ್ಯರಸ್ತೆಯಲ್ಲಿ ಅಣಕು ಶವಯಾತ್ರೆ ನಡೆಸಲು ಶನಿವಾರ ಬೆಳಿಗ್ಗೆ ಸಿದ್ಧತೆ ಮಾಡಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಶವಯಾತ್ರೆ ನಡೆಸಲು ತಂದಿದ್ದ ವಸ್ತುಗಳನ್ನು ಜಪ್ತಿ ಮಾಡಿದರು. ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಶವಯಾತ್ರೆ ನಡೆಸುವುದಾಗಿ ಪಟ್ಟು ಹಿಡಿದಿದ್ದರು.

ಉದ್ಯಾನದಲ್ಲಿದ್ದ ಗಿಡಗಳ ತಪ್ಪಲಿನ ಸರವನ್ನು ವ್ಯಕ್ತಿಯೊಬ್ಬರಿಗೆ ಹಾಕಿ ಶವದ ರೀತಿಯಲ್ಲಿ ಸಿದ್ಧಪಡಿಸಿದ್ದ ಪ್ರತಿಭಟನಕಾರರು, ಅದೇ ವ್ಯಕ್ತಿಯನ್ನು ಹೊತ್ತುಕೊಂಡು ಮುಖ್ಯರಸ್ತೆಯತ್ತ ಹೆಜ್ಜೆ ಹಾಕಿದರು.

ಅವರನ್ನು ಅಡ್ಡಗಟ್ಟಿದ ಪೊಲೀಸರು, ‘ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರೆ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತದೆ. ಪ್ರತಿಭಟನೆ ಕೈಬಿಡಿ’ ಎಂದು ಕೋರಿದರು. ಅದಕ್ಕೆ ಪ್ರತಿಭಟನಕಾರರು ಒಪ್ಪಲಿಲ್ಲ.

ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮುಖಂಡ ಕುರುಬೂರು ಶಾಂತಕುಮಾರ್ ಹಾಗೂ ಇತರೆ ರೈತರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್‌ಗಳಲ್ಲಿ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT