ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಕರೆದೊಯ್ಯಲು ಬಂದು ಬೆಂಕಿ ಹಚ್ಚಿಕೊಂಡ ಪತಿ

ಸಂಜೀವಿನಿ ನಗರದಲ್ಲಿ ಘಟನೆ
Last Updated 28 ಜೂನ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೇಕವಾಗಿ ವಾಸವಿದ್ದ ಪತ್ನಿ ತಮ್ಮ ಮನೆಗೆ ಬರಲು ಒಪ‍್ಪಲಿಲ್ಲವೆಂಬ ಕಾರಣಕ್ಕೆನಾಗರಾಜ್ (38) ಎಂಬುವರು, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ರಾಜಗೋಪಾಲನಗರ ಬಳಿಯ ಸಂಜೀವಿನಿ ನಗರದಲ್ಲಿ ಬುಧವಾರ ಈ ಘಟನೆ ನಡೆದಿದೆ. ನಾಗರಾಜ್‌ ಅವರ ದೇಹದ ಶೇಕಡ 90ರಷ್ಟು ಭಾಗ ಸುಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ರಾಜಗೋಪಾಲನಗರ ಪೊಲೀಸರು ಹೇಳಿದರು.

ಲಗ್ಗೆರೆ ನಿವಾಸಿಯಾದ ನಾಗರಾಜ್ ಆಟೊ ಚಾಲಕ. ಸ್ಥಳೀಯ ನಿವಾಸಿಯೇ ಆದ ಲಲಿತಾ ಎಂಬುವರನ್ನು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 9 ವರ್ಷದ ಮಗ ಇದ್ದಾನೆ.

ಮದುವೆಯಾದ ಆರಂಭದಲ್ಲಿ ಪತ್ನಿ ಜತೆ ಚೆನ್ನಾಗಿದ್ದ ನಾಗರಾಜ್, ಆನಂತರ ಜಗಳ ಮಾಡಲಾರಂಭಿಸಿದ್ದರು. ಮದ್ಯ ಸೇವಿಸಿ ಮನೆಗೆ ಹೋಗಿ ನಿತ್ಯವೂ ಗಲಾಟೆ ಮಾಡುತ್ತಿದ್ದರು. ಇದರಿಂದ ನೊಂದ ಲಲಿತಾ, ಗಂಡನ ಮನೆ ಬಿಟ್ಟು ತಾಯಿ ಹಾಗೂ ಮಗನ ಜತೆ ಪ್ರತ್ಯೇಕವಾಗಿ ವಾಸವಿದ್ದರು. ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು ಎಂದು ಸಂಬಂಧಿಕರು ಮಾಹಿತಿ ನೀಡಿರುವುದಾಗಿ ಪೊಲೀಸರು ವಿವರಿಸಿದರು.

ಕುಡಿದ ಅಮಲಿನಲ್ಲೇ ನಾಗರಾಜ್ಬುಧವಾರ ರಾತ್ರಿ ಪತ್ನಿಯ ಮನೆ ಸಮೀಪ ಹೋಗಿದ್ದರು. ಅವರನ್ನು ಕಂಡ ಪತ್ನಿ, ಬಾಗಿಲು ತೆರೆದಿರಲಿಲ್ಲ. ಅವರು ತಾಯಿ, ಮಗನ ಜತೆ ಮನೆಯೊಳಗೆ ಇದ್ದರು. ಬಾಗಿಲು ತೆರೆಯುವಂತೆ ಕೂಗಾಡಿದರೂ ಸ್ಪಂದಿಸಲಿಲ್ಲ. ಇದರಿಂದ ಹತಾಶರಾದ ನಾಗರಾಜ್‌ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು ಎಂದು ಸ್ಥಳೀಯರು ಹೇಳಿರುವುದಾಗಿ ಪೊಲೀಸರು ವಿವರಿಸಿದರು.

ನಾಗರಾಜ್‌ ಅವರ ಚೀರಾಟ ಕೇಳಿ ಸಹಾಯಕ್ಕೆ ಹೋದ ಸ್ಥಳೀಯರು, ಬೆಂಕಿ ನಂದಿಸುವಷ್ಟರಲ್ಲಿ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT