ಮಂಗಳವಾರ, ನವೆಂಬರ್ 19, 2019
25 °C

ಮೋಡಿ ಮಾಡಿದ ಸುಮನ್‌ ಧ್ವನಿ

Published:
Updated:
Prajavani

‘ಚಲೇ ಜಾ..ಚಲೇ ಜಾ..ಜಹಾ ಪ್ಯಾರ್‌ ಮಿಲೇ ...’

1969ರಲ್ಲಿ ಬಿಡುಗಡೆಯಾದ ‘ಜಹಾ ಪ್ಯಾರ್‌ ಮಿಲೇ’ ಹಿಂದಿ ಚಿತ್ರದ ಪ್ರಸಿದ್ಧ ಹಾಡು ಖ್ಯಾತ ಹಿನ್ನೆಲೆ ಗಾಯಕಿ ಸುಮನ್‌ ಕಲ್ಯಾಣಪುರ್‌ ಮಧುರ ಕಂಠದಲ್ಲಿ ಅಲೆಯಾಗಿ ತೇಲಿ ಬರುತ್ತಿದ್ದರೆ ಸಂಗೀತ ಪ್ರೇಮಿಗಳು ಮಂತ್ರಮುಗ್ಧರಾಗಿ ತಲೆದೂಗುತ್ತಿದ್ದರು.

ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಸೇರಿದ್ದ ನೂರಾರು ಪ್ರೇಕ್ಷಕರು ಪುರಾನಾ ಜಮಾನಾದ ಇಂತಹ ಹತ್ತಾರು ಇಂಪಾದ ಹಾಡುಗಳನ್ನು ತಮ್ಮ ಮೆಚ್ಚಿನ ಗಾಯಕಿಯ ಕಂಚಿನ ಕಂಠದಲ್ಲಿ ಕೇಳಿ ಆನಂದಿಸಿದರು.

ನಗರದ ಸಂಗೀತ ಪ್ರೇಮಿಗಳಿಗೆ ಇಂತಹ ಅಪರೂಪದ ಅವಕಾಶ ಮಾಡಿಕೊಟ್ಟದ್ದು ಪೀಣ್ಯ ರೋಟರಿ ಕ್ಲಬ್‌. ಬಡವರಿಗೆ ಉಚಿತ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ, ಜೈಪುರ್‌ ಕೃತಕ ಕಾಲು ಶಿಬಿರಗಳಿಗೆ ದೇಣಿಗೆ ಸಂಗ್ರಹಿಸಲು ರೋಟರಿ ಸಂಸ್ಥೆ ಇತ್ತೀಚೆಗೆ ಈ ಕಾರ್ಯಕ್ರಮ ಆಯೋಜಿಸಿತ್ತು. 

ಮುಂಬೈ ಸಂಗೀತ ತಾರೆ ಬೆಂಗಳೂರಿನಲ್ಲಿ ನೀಡಿದ ಮೊದಲ ಸಂಗೀತ ಸಂಜೆ ಇದಾಗಿತ್ತು ಎನ್ನುವುದು ಈ ಕಾರ್ಯಕ್ರಮದ ಮತ್ತೊಂದು ವೈಶಿಷ್ಟ್ಯ.ಖ್ಯಾತ ಸಂಗೀತ ನಿರ್ದೇಶಕರಾದ ಶಂಕರ್‌–ಜೈಕಿಶನ್‌ ಜೋಡಿಗೆ ಗೀತ ನಮನ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಸುಮನ್‌ ಕಲ್ಯಾಣಪುರ್‌ ಅವರು ತಮ್ಮ ಹಳೆಯ ನೆನಪುಗಳನ್ನು ಹೆಕ್ಕಿ ತೆಗೆದರು. ಸುರಯ್ಯಾ, ಜೋಹ್ರಾಬಾಯಿ, ನೂರ್‌ ಜಹಾನ್‌, ಶಂಕರ್‌–ಜೈಕಿಶನ್‌ ಮುಂತಾದವರು ಅವರ ನೆನಪಿನ ಬಂಡಿಯಲ್ಲಿ ಬಂದು ಹೋದರು. 60–70ರ ದಶಕದ ಹಳೆಯ ಹಿಂದಿ ಚಿತ್ರಲೋಕವೇ ಅಲ್ಲಿ ಅನಾವರಣಗೊಂಡಿತ್ತು. ಈ ಅಪೂರ್ವ ಘಳಿಗೆಗೆ ನೂರಾರು ಜನರು ಸಾಕ್ಷಿಯಾದರು. 

ಮಂಗಳಾ ಖಾಡಿಲ್ಕರ್‌ ಜತೆ ನಡೆದ ಸಂವಾದದಲ್ಲಿ ಶಂಕರ್‌–ಜೈಕಿಶನ್‌ ಸಂಗೀತ ನೀಡಿದ ಹಾಡುಗಳನ್ನು ಗುನುಗಿದರು. 80 ಹರೆಯದ ಸುಮನ್‌ ಕಲ್ಯಾಣಪುರ್‌ ಅವರ ಕಂಚಿನ ಕಂಠಕ್ಕೆ ಇನ್ನೂ ವಯಸ್ಸಾಗಿಲ್ಲ ಎನ್ನುವ ಮಾತಿಗೆ ಅವರು ಗುನುಗಿದ ಹಾಡುಗಳು ಸಾಕ್ಷಿಯಾಗಿ ನಿಂತವು.  

1963ರಲ್ಲಿ ಬಿಡುಗಡೆಯಾದ ದಿಲ್‌ ಏಕ್‌ ಮಂದಿರ್‌ ಚಿತ್ರದ ‘ಜುಹಿ ಕಿ ಕಲಿ ಮೇರಿ ಲಾಡ್ಲಿ’, ಸೂರಜ್‌ ಚಿತ್ರದ ‘ಇತನಾ ಹೈ ತುಮ್‌ ಸೇ ಪ್ಯಾರ್‌ ಮುಝೆ’ ಹಾಡುಗಳು ಸೊಗಸಾಗಿ ಮೂಡಿ ಬಂದವು. ಪ್ರೇಕ್ಷಕರ ಒತ್ತಡಕ್ಕೆ ಮಣಿದು ಪ್ರಸಿದ್ಧ ರಾಕ್‌ ಎನ್‌ ರೋಲ್‌ ಗೀತೆ ‘ಆಜ್‌ ಕಲ್ ತೇರೆ ಮೇರೇ ಪ್ಯಾರ್‌ ಕೆ ಚರ್ಚೆ ಹರ್‌ ಜುಬಾನ್‌ ಪರ್‌’ ಹಾಡಿದರು.

ಕನ್ನಡ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಹಾಡಿರುವ ತಮ್ಮ ಅಪೂರ್ವ ಸಂಗೀತಯಾನದ ಅನುಭವ ಮತ್ತು ರಸಗಳಿಗೆಗಳನ್ನು ಸುಮನ್‌ ಕಲ್ಯಾಣಪುರ್‌ ಹಂಚಿಕೊಂಡರು. ಕನ್ನಡದ ಕಲಾವತಿ ಚಿತ್ರದ ‘ಒಡನಾಡಿ ಬೇಕೆಂದು....’ ಹಾಡನ್ನು ಶ್ರುತಿ ಭಿಂಡೆ ಹಾಡಿ ರಂಜಿಸಿದರು.

ಶ್ರೀನಿವಾಸ ಆಚಾರ್‌ ಮತ್ತು ತಂಡ ಶಂಕರ್‌–ಜೈಕಿಶನ್‌ ನಿರ್ದೇಶನದ ಹಾಡುಗಳಿಗೆ ಸಂಗೀತ ನೀಡಿದರು. ವಿವಿಧ ಕಲಾವಿದರ ಧ್ವನಿಯಲ್ಲಿ ಮೂಡಿಬಂದ ಹಿಂದಿಯ ಹಳೆಯ ಹಾಡುಗಳಾದ ಝನಕ್‌, ಝನಕ್‌ ತೋರೆ ಬಾಜೆ ಪಾಯಲಿಯಾ, ರಸಿಕ್‌ ಬಲ್ಮಾ, ಜಿಂದಗೀ ಏಕ್‌ ಸಫರ್‌ ಹೈ ಸುಹಾನಾ, ಹಮ್‌ ಕಾಲೆ ಹೈ ತೋ ಕ್ಯಾ ದಿಲ್‌ ವಾಲೇ ಹೈ, ಲಿಖೇ ಜೋ ಖತ್‌ ತುಝೆ, ಧೀರೇ ಧೀರೇ ಚಲ್‌ ಚಾಂದ್‌ ಗಗನ್‌ ಮೇ, ಜಾವೋ ರೇ ಜೋಗಿ ತುಮ್‌ ಜಾವೋರೇ... ಗೀತೆಗಳಿಗೆ ಸುಮನ್‌ ಕಲ್ಯಾಣಪುರ್‌ ಕೂಡ ತಲೆದೂಗಿದರು. 

ಇದೇ ಸಂದರ್ಭದಲ್ಲಿ ರೋಟರಿ ವೊಕೇಶನಲ್‌ ಎಕ್ಸೆಲೆನ್ಸ್‌ ಅವಾರ್ಡ್‌ ನೀಡಿ ಹಿರಿಯ ಗಾಯಕಿಯನ್ನು ಸತ್ಕರಿಸಲಾಯಿತು. ರೋಟರಿ 3190 ಡಿಸ್ಟ್ರಿಕ್ಟ್‌ ಗವರ್ನರ್‌ ಡಾ. ಸಮೀರ್‌ ಹಿರಾನಿ, ನಾಗೇಂದ್ರ ಪ್ರಸಾದ್‌, ಅಧ್ಯಕ್ಷ ಸುರೇಶ್‌ ಮತ್ತು ಶ್ರೀನಿವಾಸ್ ಮೂರ್ತಿ, ಗಿರೀಶ್‌ ಹಾಗೂ ರೋಟರಿ ಇತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)