ತಮ್ಮನ ಸುಲಿಗೆಗೆ ಅಣ್ಣನ ಸುಪಾರಿ!

ಭಾನುವಾರ, ಮೇ 26, 2019
32 °C

ತಮ್ಮನ ಸುಲಿಗೆಗೆ ಅಣ್ಣನ ಸುಪಾರಿ!

Published:
Updated:

ಬೆಂಗಳೂರು: ಸ್ನೇಹಿತರಿಗೆ ಸುಪಾರಿ ಕೊಟ್ಟು ತನ್ನ ತಮ್ಮನ ಹಣವನ್ನೇ ಸುಲಿಗೆ ಮಾಡಿಸಿದ್ದ ಮುರುಗನ್ ಎಂಬಾತನನ್ನು ಬಂಧಿಸಿರುವ ಕೋರಮಂಗಲ ಪೊಲೀಸರು, ₹ 6 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಜಪ್ತಿ ಮಾಡಿದ್ದಾರೆ.

ಮೇಸ್ತ್ರಿಪಾಳ್ಯದ ಮುನಿಯಪ್ಪನ್ ಎಂಬುವರು, ಏ.24ರ ಬೆಳಿಗ್ಗೆ ಕೋರ ಮಂಗಲದ ಕೃಪಾನಿಧಿ ಕಾಲೇಜು ಬಸ್ ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು, ಅವರಿಂದ ₹ 6 ಲಕ್ಷ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಮುನಿಯಪ್ಪನ್ ಕೋರಮಂಗಲ ಠಾಣೆಯ ಮೆಟ್ಟಿಲೇರಿದ್ದರು.

ಸೋದರನೇ ಸೂತ್ರಧಾರ: ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಾಳಿ ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊದಲು ಆ ಸ್ಕೂಟರ್ ಮಾಲೀಕನನ್ನು ವಶಕ್ಕೆ ಪಡೆದರು. ಆತನನ್ನು ವಿಚಾರಣೆ ನಡೆಸಿದಾಗ, ಸಂಚು ರೂಪಿಸಿದ್ದೇ ಮುನಿಯಪ್ಪನ್ ಅವರ ಅಣ್ಣ ಮುರುಗನ್ ಎಂಬುದು ಗೊತ್ತಾಗಿದೆ. ಬಳಿಕ, ಈತನಿಂದ ಸುಪಾರಿ ಪಡೆದಿದ್ದ ಹೇಮಂತ್ ಅಲಿಯಾಸ್ ಗೊಳ್ಳು, ಬಸವರಾಜು, ಸಂತೋಷ್ ಹಾಗೂ ಅರುಣ್ ಎಂಬುವರನ್ನೂ ಬಂಧಿಸಿದ್ದಾರೆ.

ಕ್ಯಾಬ್ ಚಾಲಕನಾದ ಮುರುಗನ್, ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದಾಗ ಆತನ ಕಣ್ಣು ಏಜೆನ್ಸಿಗಳಿಂದ ಅಂಗಡಿಗಳಿಗೆ ಗುಟ್ಕಾ ವಿತರಣೆ ಮಾಡುವ ತಮ್ಮನ ಮೇಲೆ ಬಿದ್ದಿತ್ತು ಎಂದು ಪೊಲೀಸರು ಹೇಳಿದರು.

ಮೊದಲ ಯತ್ನ ವಿಫಲ: ಏ.22ರಂದು ಚಂದಾಪುರಕ್ಕೆ ತೆರಳಿದ್ದ ಮುನಿಯಪ್ಪನ್, ‘ವಿಮಲ್’ ಗುಟ್ಕಾ ಸರಕನ್ನು ಪರಮೇಶ್ ಎಂಬುವರ ಅಂಗಡಿಗೆ ವಿತರಣೆ ಮಾಡಿ ಅವರಿಂದ ₹ 6 ಲಕ್ಷ ಪಡೆದಿದ್ದರು. ಈ ವಿಚಾರ ತಿಳಿದುಕೊಂಡ ಮುರುಗನ್, ಕೂಡಲೇ ಸ್ನೇಹಿತರನ್ನು ಕರೆಸಿಕೊಂಡು ಆ ಹಣ ದೋಚುವಂತೆ ಸೂಚನೆ ಕೊಟ್ಟಿದ್ದ. ಸಂತೋಷ್ ಹಾಗೂ ಅರುಣ್ ಅದೇ ದಿನ ಸುಲಿಗೆಗೆ ಯತ್ನಿಸಿದ್ದರೂ, ಜನರ ಓಡಾಟ ಹೆಚ್ಚಿದ್ದ ಕಾರಣ ಸಾಧ್ಯವಾಗಿರಲಿಲ್ಲ.

ಅಂದು ಮೇಸ್ತ್ರಿಪಾಳ್ಯದ ಭಾಮೈದನ ಮನೆಯಲ್ಲಿ ಉಳಿದ ಮುನಿಯಪ್ಪನ್, ಮರುದಿನ ಹಣದ ಬ್ಯಾಗ್ ತೆಗೆದುಕೊಂಡು ಸಿಟಿ ಮಾರ್ಕೆಟ್‌ನಲ್ಲಿರುವ ಏಜೆನ್ಸಿ ಕಡೆಗೆ ಹೊರಟಿದ್ದರು. ಬಸ್ ನಿಲ್ದಾಣದತ್ತ ನಡೆದು ಹೋಗುತ್ತಿದ್ದಾಗ, ಸಂತೋಷ್ ಹಾಗೂ ಅರುಣ್ ಸ್ಕೂಟರ್‌ನಲ್ಲಿ ಬಂದು ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

ಅಣ್ಣನ ಹೆಸರು ಕೇಳಿ ಅಚ್ಚರಿ

‘₹ 15 ಸಾವಿರ ಸಂಬಳ ನೆಚ್ಚಿಕೊಂಡು ಬದುಕುವ ನನಗೆ, ₹ 6 ಲಕ್ಷ ಕಳೆದುಕೊಂಡು ದಿಕ್ಕು ತೋಚದಂತಾಗಿತ್ತು. ಹಣ ಕಳವಾದ ದಿನದಿಂದ, ಒಂದು ರಾತ್ರಿಯೂ ನೆಮ್ಮದಿಯಾಗಿ ಮಲಗಿರಲಿಲ್ಲ. ನನ್ನ ಅಣ್ಣನೇ ಹೀಗೆ ಮಾಡಿಸುತ್ತಾನೆ ಎಂದುಕೊಂಡಿರಲಿಲ್ಲ. ಪೊಲೀಸರು ಆತನ ಹೆಸರು ಹೇಳಿದಾಗ ಅಚ್ಚರಿಯಾಯಿತು’ ಎಂದು ಮುನಿಯಪ್ಪನ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !