ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ‘ಸುಪ್ರೀಂ’

ಬೆಳ್ಳಂದೂರು, ವರ್ತೂರು, ಅಗರ ಕೆರೆಗಳ ಪುನಶ್ಚೇತನಕ್ಕೆ ಎನ್‌ಜಿಟಿ ನೀಡಿದ್ದ ಆದೇಶ
Last Updated 23 ನವೆಂಬರ್ 2019, 5:12 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗಳಿಗೆ ದಂಡ ವಿಧಿಸಿ, ಪುನಶ್ಚೇತನಕ್ಕೆ ನಿರ್ದೇಶನ ನೀಡಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಕೆರೆಗಳ ಸಂರಕ್ಷಣೆಗಾಗಿ ನೀಡಲಾದ ಆದೇಶ ಉಲ್ಲಂಘಿಸಿದ್ದ ರಾಜ್ಯ ಸರ್ಕಾರಕ್ಕೆ ₹50 ಕೋಟಿ ಹಾಗೂ ಬಿಬಿಎಂಪಿಗೆ ₹25 ಕೋಟಿ ದಂಡ ವಿಧಿಸಿದ್ದ ಎನ್‌ಜಿಟಿ, ಕೆರೆಗಳ ಪುನಶ್ಚೇತನಕ್ಕಾಗಿ ₹500 ಕೋಟಿ ಮೀಸಲಿಡಬೇಕು ಎಂದು ಸೂಚಿಸಿತ್ತು.

ದಂಡದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು, ಕೆರೆಗಳ ಅಭಿವೃದ್ಧಿ ಕುರಿತ ಕಾರ್ಯಕ್ಷಮತೆಯ ಖಾತರಿ ಹಣವನ್ನಾಗಿ ₹ 100 ಕೋಟಿಯನ್ನು ಪ್ರತ್ಯೇಕವಾಗಿ ಇರಿಸಬೇಕು ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠ ಕಳೆದ ಡಿಸೆಂಬರ್‌ನಲ್ಲಿ ಆದೇಶಿಸಿತ್ತು.

ಈ ಆದೇಶ ಕುರಿತು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠ, ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.

ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಕಾದಿರಿಸದೇ ಕೆರೆಗಳ ಸಂರಕ್ಷಣೆಗೆ ಭಾರಿ ಪ್ರಮಾಣದ ಹಣ ನೀಡ ಲಾಗದು. ಅಲ್ಲದೆ, ₹ 100 ಕೋಟಿ ಮೀಸಲಿಡುವಂತೆ ಸೂಚಿಸಿದ್ದ ಇದೇ ಮಾದರಿಯ ಆದೇಶಕ್ಕೆ ಸಂಬಂಧಿ ಸಿದಂತೆ ಮೇಘಾಲಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಈ ಹಿಂದೆ ವಿನಾಯಿತಿ ನೀಡಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ದೇವದತ್ತ ಕಾಮತ್‌ ನ್ಯಾಯಪೀಠಕ್ಕೆ ತಿಳಿಸಿದರು.

ಎನ್‌ಜಿಟಿ ಆದೇಶ ಪಾಲನೆಗಾಗಿ ಕ್ರಮ ಕೈಗೊಳ್ಳಲಾಗಿದ್ದು, ಕೆರೆಗಳ ಪುನಶ್ಚೇತನಕ್ಕೆ ಇನ್ನೂ ಹೆಚ್ಚಿನ ಕಾಲಾ ವಕಾಶದ ಅಗತ್ಯವಿದೆ. ದಂಡ, ಠೇವಣಿ ಮತ್ತು ಕಾರ್ಯಕ್ಷಮತೆಯ ಖಾತರಿ ಹಣ ಪಾವತಿಯಲ್ಲಿ ವಿನಾಯಿತಿ ಬೇಕು ಎಂದು ಅವರು ಕೋರಿದರಾದರೂ ನ್ಯಾಯಪೀಠ ಸಮ್ಮತಿ ಸೂಚಿಸಲಿಲ್ಲ.

ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಸಮಿತಿ ಯನ್ನು ಕೆರೆಗಳ ಪುನಶ್ಚೇತನದ ಮೇಲ್ವಿಚಾರಣೆಗಾಗಿ ರಚಿಸುವಂತೆ ಸೂಚಿಸಿದ್ದ ಎನ್‌ಜಿಟಿ, ಕೆರೆ ಅಭಿವೃದ್ಧಿ ಯೋಜನೆ ಜಾರಿಗಾಗಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಬೇಕು. ಅಭಿವೃದ್ಧಿಗೆ ಅವರನ್ನೇ ಜವಾಬ್ದಾರರನ್ನಾಗಿಸಬೇಕು. ಈ ವಿಷಯವನ್ನು ಆಯಾ ಅಧಿಕಾರಿಗಳ ಸೇವಾ ದಾಖಲೆಯಲ್ಲೂ ನಮೂದಿಸಬೇಕು ಎಂದು ಆದೇಶಿಸಿತ್ತು.

ಕೆರೆ ಪುನಶ್ಚೇತನ: ನ್ಯಾಯಪೀಠಕ್ಕೆ ಸರ್ಕಾರ ನೀಡಿದ ಮಾಹಿತಿ

lಎನ್‌ಜಿಟಿ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ. ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಸಮಿತಿಯ ಮೇಲ್ವಿಚಾರಣೆಯಲ್ಲಿ ಕೆರೆಗಳ ಪುನಶ್ಚೇತನದ ಶೇ 60ರಷ್ಟು ಕಾರ್ಯ ಪೂರ್ಣಗೊಂಡಿದೆ. ಒಂದು ವರ್ಷ ದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

lನಿತ್ಯ 150 ದಶಲಕ್ಷ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕ (ಎಸ್‌ಟಿಪಿ)ದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ₹ 297.37 ಕೋಟಿ ವೆಚ್ಚದ ಈ ಕಾಮಗಾರಿ 2020ರ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ

lಬೆಳ್ಳಂದೂರು ಕೆರೆಗೆ ಬೇಲಿ ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣ

lಕೆರೆಗಳಲ್ಲಿ ಮತ್ತು ದಂಡೆಯ ಮೇಲೆ ತ್ಯಾಜ್ಯ ಎಸೆಯುವುದನ್ನು ನಿಯಂತ್ರಣ ಕ್ಕಾಗಿ ನಿರಂತರ ನಿಗಾ ವಹಿಸಲಾಗುತ್ತಿದ್ದು, ಸಿಬ್ಬಂದಿ ನಿಯೋಜಿಸಲಾಗಿದೆ. ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ

lಕೆರೆಗಳ ಹೂಳು ತೆರವು ಹಾಗೂ ಕಳೆ ತೆರವುಗೊಳಿಸುವ ಕುರಿತ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತಲ್ಲಿದ್ದು, ಶೀಘ್ರವೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ತಾಂತ್ರಿಕ ಸಮಿತಿಗೆ ಸಲ್ಲಿಸಲಾಗುವುದು

lಅಂದಾಜು 34 ಲಕ್ಷ ಘನ ಮೀಟರ್ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯ ನಡೆಯಬೇಕಿದೆ. ಡಿಸೆಂಬರ್ ಅಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. 2020ರ ಫೆಬ್ರುವರಿ ಮೊದಲ ವಾರದಲ್ಲಿ ಏಜೆನ್ಸಿಯ ನೇಮಕಾತಿ ಪೂರ್ಣಗೊಳ್ಳಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT