ಬುಧವಾರ, ನವೆಂಬರ್ 13, 2019
21 °C
ಚಿಕಿತ್ಸೆಯಿಂದ ಬಿಳಿ ರಕ್ತಕಣಗಳ ಉತ್ಪತ್ತಿ ಹೆಚ್ಚಳ

ಮೂರು ತಿಂಗಳ ಮಗುವಿಗೆ ರಕ್ತ ಕಾಂಡಕೋಶ ಕಸಿ

Published:
Updated:

ಬೆಂಗಳೂರು: ಕಾಯಿಲೆಯಿಂದ ಬಳಲುತ್ತಿದ್ದ ಮೂರು ತಿಂಗಳ ಮಗುವಿಗೆ ನಗರದ ಆಸ್ಟರ್‌ ಸಿಎಂಐ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ರಕ್ತದ ಕಾಂಡಕೋಶ ಕಸಿ ಮಾಡಿದ್ದಾರೆ.

ಹೈದರಾಬಾದ್‌ನ ಮಗುವಿಗೆ, ಜನಿಸಿದ ಒಂದು ತಿಂಗಳಲ್ಲೇ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಔಷಧೋಪಚಾರಗಳಿಂದ ಕಡಿಮೆಯಾಗದ ಕಾರಣ ಆತಂಕಗೊಂಡ ಪಾಲಕರು, ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರೀಕ್ಷೆ ಮಾಡಿದಾಗ ಮಗುವಿನಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾಗಿರುವುದು ಪತ್ತೆಯಾಯಿತು. ಇದರಿಂದಾಗಿ ಮಗು ದುರ್ಬಲವಾಗಿತ್ತು. ದಂಪತಿಯ ಮೊದಲ ಮಗು ಇದೇ ಸಮಸ್ಯೆಯಿಂದ ಬಳಲಿ ಮೃತಪಟ್ಟಿತ್ತು. 

ಮಗುವಿಗೆ ರಕ್ತ ಕಾಂಡಕೋಶ ಕಸಿ ಮಾಡಿದ ವೈದ್ಯರು, ಆಸ್ಪತ್ರೆಯ ಅಸ್ಥಿ ಮಜ್ಜೆ ಕಸಿ ಘಟಕದಲ್ಲಿ 30 ದಿನ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಮಗುವಿನಲ್ಲಿ ಬಿಳಿ ರಕ್ತಕಣಗಳು ಉತ್ಪತ್ತಿಯಾಗಿ, ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

₹30 ಲಕ್ಷದ ಕಸಿಯನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗಿದೆ. ₹10 ಲಕ್ಷವನ್ನು ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ (ಸಿಎಸ್‌ಆರ್) ಹಾಗೂ ಉಳಿದ ಹಣವನ್ನು ಆಸ್ಟರ್‌ ಸಿಕ್ ಕಿಡ್ಸ್‌ ಫೌಂಡೇಷನ್ ಮತ್ತು ದಾನಿಗಳಿಂದ ಆಸ್ಪತ್ರೆ ಹೊಂದಿಸಿದೆ. ಕಸಿಯಿಂದ ಮಗು ಚೇತರಿಸಿಕೊಂಡಿದ್ದು, ತೂಕ ಹೆಚ್ಚಳವಾಗಿದೆ. ಮಗುವಿನಲ್ಲಿ ಇನ್ನು ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸಾಗರ್ ಭಟ್ ತಿಳಿಸಿದರು.

ಪ್ರತಿಕ್ರಿಯಿಸಿ (+)