ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಕಾಶಿಯಲ್ಲಿನ ಸಮೀಕ್ಷೆ; ಒಳಿತಿನ ನಿರೀಕ್ಷೆ | ಹೂತೋಟ... ಸಮಸ್ಯೆಗಳ ನೋಟ

Last Updated 14 ನವೆಂಬರ್ 2022, 20:54 IST
ಅಕ್ಷರ ಗಾತ್ರ

ಲಾಲ್‌ಬಾಗ್ ಪ್ರವಾಸಿಗರಿಗೆ ಅಷ್ಟೇ ಅಲ್ಲದೆ ನಗರ ನಾಗರಿಕರಿಗೂ ಹೆಮ್ಮೆಯ ತಾಣ. ಅಸಂಖ್ಯ ಜನ ಇಲ್ಲಿ ಹಸಿರಿನ ಉಸಿರು ಪಡೆದುಕೊಂಡು ಹೋಗಲು ಬರುತ್ತಾರೆ. ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ ಇಲ್ಲಿಗೆ ಬರುವ ವಾಯುವಿಹಾರಿಗಳು ಹಾಗೂ ಪ್ರವಾಸಿಗರಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿತು. ಅಲ್ಲಿ ಜನರೇ ತೋಡಿಕೊಂಡ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವೇದಿಕೆಯಾಗಿ ‘ಜನಸ್ಪಂದನ’ ನಡೆಸಲು ಯತ್ನಿಸಿತು. ಆದರೆ, ಅದಕ್ಕೆ ತೋಟಗಾರಿಕಾ ಸಚಿವ ಮುನಿರತ್ನ ಒಪ್ಪಿಗೆ ನೀಡಲಿಲ್ಲ.ಸಮೀಕ್ಷೆಯಲ್ಲಿ ವ್ಯಕ್ತವಾದ, ಹಾಸಿ ಹೊದೆಯುವಷ್ಟು ಇರುವ ಸಮಸ್ಯೆಗಳು ಇದೋ ನಿಮ್ಮ ಓದಿಗೆ....

***

ಬೆಂಗಳೂರು: ಮುರಿದ ಬೆಂಚ್‌ಗಳು, ಹಾಳಾದ ನಡಿಗೆ ಪಥಗಳು, ಎಲ್ಲೆಂದರಲ್ಲಿ ಬೀಳುವ ಪ್ಲಾಸ್ಟಿಕ್ ರಾಶಿ, ಅಪಾಯಕ್ಕೆ ತೆರೆದುಕೊಂಡಿರುವ ವಿದ್ಯುತ್ ಪೆಟ್ಟಿಗೆಗಳು, ಮಾಯವಾದ ದಾಸವಾಳ ಹೂತೋಟ, ಪಾಳು ಬಿದ್ದ ನಂಜಪ್ಪ ಸ್ಮಾರಕ ಭವನ...

ಹಲವು ಇಲ್ಲಗಳ ‌ನಡುವೆ ನಿರ್ವಹಣೆ ಕೊರತೆಯಿಂದ ಬಳಲುತ್ತಿರುವ ಲಾಲ್‌ಬಾಗ್‌ನ ಸದ್ಯದ ಚಿತ್ರಣ ಇದು. ಒಂದು ಕಾಲದಲ್ಲಿ ಸಸ್ಯಕಾಶಿ, ಚಂದವಳ್ಳಿ ಹೂದೋಟ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಲಾಲ್‌ಬಾಗ್ ಈಗ ಕಳೆಗುಂದಿದೆ.

ಸದ್ಯದ ಸ್ಥಿತಿಯ ಬಗ್ಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಸಮೀಕ್ಷೆ ನಡೆಸಿದ್ದು, ಅಭಿವೃದ್ಧಿಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬುದರ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದೆ. 500ಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದೆ. ವಾಯು ವಿಹಾರಿಗಳು, ಪಕೃತಿ ಪ್ರೇಮಿಗಳು, ಪಕ್ಷಿ ವೀಕ್ಷಕರನ್ನೂ ಸಮೀಕ್ಷೆಯಲ್ಲಿ ಒಳಗೊಳ್ಳಲಾಗಿದೆ.‌

ಇದೆಲ್ಲದರ ನಡುವೆ ಲಾಲ್‌ಬಾಗ್‌ನಲ್ಲೇ ಜನಸ್ಪಂದನ ಕಾರ್ಯಕ್ರಮವನ್ನು 2018ರ ನವೆಂಬರ್‌ 25ರಂದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ತಂಡ ಆಯೋಜಿಸಿತ್ತು.

ಅಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಜನರಿಂದಲೇ ಅಧಿಕಾರಿಗಳಿಗೆ ತಿಳಿಸುವ ಪ್ರಯತ್ನವನ್ನು ಮಾಡಿತ್ತು. ಅದರ ಪರಿಣಾಮ ಕೆಲ ಸುಧಾರಣೆಗಳೂ ಆಗಿದ್ದವು. ಸರ್ಕಾರಿ ವಾಹನಗಳು ಉದ್ಯಾನದ ಒಳಗೆ ಬರುವುದು ನಿಂತಿತ್ತು. ಕಸ ನಿರ್ವಹಣೆ, ಬೆಳಕಿನ ಸೌಲಭ್ಯ, ಸುರಕ್ಷತಾ ಕ್ರಮಗಳು, ಶೌಚಾಲಯಗಳ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಆಗಿತ್ತು.

‘ಪ್ರಜಾವಾಣಿ’ ತಂಡ ಶನಿವಾರ(ನ.12ರಂದು) ಮತ್ತೊಮ್ಮೆ ಲಾಲ್‌ಬಾಗ್‌ನಲ್ಲಿ ಸುತ್ತಾಡಿ ಸಮಸ್ಯೆಗಳು ಸುಧಾರಣೆ ಆಗಿದೆಯೇ ಎಂದು ಪರಿಶೀಲಿಸಿತು. ಆದರೆ, ಉದ್ಯಾನ ಇನ್ನಷ್ಟು ಹಾಳಾಗಿರುವುದು ಗೋಚರಿಸಿತು. ಜನ ಕೂಡ ಅವ್ಯವಸ್ಥೆಯ ಆಗರ ಆಗಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪಾದಚಾರಿ ಮಾರ್ಗವೇ ಜಾರುಬಂಡಿ
ಲಾಲ್‌ಬಾಗ್ ಉದ್ಯಾನದ ಕೆಲವೆಡೆ ವಿಶೇಷವಾಗಿ ಕೆರೆಯ ಸುತ್ತಲೂ ಪಾದಚಾರಿಗಳ ಮಾರ್ಗಗಳು ಸುಧಾರಣೆಯಾಗಬೇಕಿದೆ ಎಂಬ ಅಭಿಪ್ರಾಯಗಳು ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರಿಂದ ವ್ಯಕ್ತವಾಗಿವೆ.

ಪಾದಚಾರಿ ಮಾರ್ಗಗಳು ಸಮತಟ್ಟಾಗಿಲ್ಲದ ಕಾರಣ ವಾಯು ವಿಹಾರಿಗಳು ಬೀಳುವ ಆತಂಕದಲ್ಲೇ ನಡೆಯಬೇಕಾದ ಸ್ಥಿತಿ ಇದೆ. ಮಳೆಗಾಲದಲ್ಲಂತೂ ಪಾದಚಾರಿ ಮಾರ್ಗಗಳೇ ಜಾರು ಬಂಡಿಗಳಾಗುತ್ತಿವೆ.

‘ಪ್ಲಾಸ್ಟಿಕ್ ಮುಕ್ತವಾಗಬೇಕು, ಶುದ್ಧ ನೀರು ಬೇಕು’
ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡಿ ಪರಿಸರವನ್ನು ಹಾಳು ಮಾಡಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿರುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ಭದ್ರತೆ ಬಿಗಿಗೊಳಿಸಬೇಕು ಮತ್ತು ಪ್ಲಾಸ್ಟಿಕ್ ಬಿಸಾಡುವವರನ್ನು ಗುರುತಿಸಿ ದಂಡ ವಿಧಿಸಬೇಕು. ಆ ಮೂಲಕ ಲಾಲ್‌ಬಾಗ್‌ ಅನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು ಎಂಬುದು ಜನರ ಸಲಹೆ.

ಉದ್ಯಾನಕ್ಕೆ ಭೇಟಿ ನೀಡುವವರಿಗೆ ಕುಡಿಯಲು ಶುದ್ಧ ನೀರು ಒದಗಿಸುವುದು ನಿರ್ವಹಣೆ ಮಾಡುವವರ ಆದ್ಯ ಕರ್ತವ್ಯ. ಆದರೆ, ಉದ್ಯಾನದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಅದೆಷ್ಟೋ ಕಾಲವಾಗಿದೆ. ಹಲವೆಡೆ ಕುಡಿಯುವ ನೀರೇ ಸಿಗದ ಸ್ಥಿತಿ ಇದೆ. ಕೆಂಪೇಗೌಡ ಗೋಪುರದ ಬಳಿ ಟ್ಯಾಂಕ್‌ ಸ್ವಚ್ಛತೆಯನ್ನೇ ಕಂಡಿಲ್ಲ. ಅವುಗಳನ್ನು ಸ್ವಚ್ಛಗೊಳಿಸುವ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವುದು ಸೂಕ್ತ ಎಂಬುದು ಜನರ ಸಲಹೆ.

ಉದ್ಯಾನದಲ್ಲಿ ಬೀದಿ ದೀಪದ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಶೌಚಾಲಯಗಳ ನಿರ್ವಹಣೆ ಇಲ್ಲದೆ ಅವುಗಳ ಒಳ ಹೋಗಲು ಜನ ಹೆದರುವ ಸ್ಥಿತಿ ಇದೆ. ಇವುಗಳ ಸುಧಾರಣೆ ಆಗಬೇಕಿದೆ. ಹಿರಿಯ ನಾಗರಿಕರಿಗಾಗಿ ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳನ್ನು ನಿರ್ಮಿಸಬೇಕು, ಬೀಗ ಬಿದ್ದಿರುವ ಶೌಚಾಲಯಗಳನ್ನು ತೆರೆದು ಸ್ವಚ್ಛಗೊಳಿಸಬೇಕು ಎಂಬುದು ಪಾದಚಾರಿಗಳ ಮನವಿ.

ಪಕ್ಷಿಗಳಿಗೆ ಆಹಾರ ಹಾಕುವುದರಿಂದ ಅದನ್ನು ತಿನ್ನಲು ಬರುವ ಬೀದಿ ನಾಯಿಗಳಿಂದ ಉಪಟಳ ಹೆಚ್ಚಾಗಿದೆ. ಹಕ್ಕಿಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಬೇಕು ಎಂಬುದನ್ನು ಸಮೀಕ್ಷೆಯಲ್ಲಿ ಜನ ಹೇಳಿದ್ದಾರೆ.

‌ಮಲಗಿರುವ ಬೆಂಚ್‌ಗಳು: ಮಾಯವಾದ ದಾಸವಾಳ ತೋಟ
ಉದ್ಯಾನದಲ್ಲಿ ನಾಗರಿಕರು ಕೂರಲು ಹಾಕಿರುವ ಬೆಂಚ್‌ಗಳು ಅಲ್ಲಲ್ಲೇ ಮಲಗಿವೆ. ಬಹುತೇಕ ಬೆಂಚ್‌ಗಳು ಮುರಿದು ಬಿದ್ದಿವೆ. ಮುರಿದು ಅದೆಷ್ಟೋ ವರ್ಷಗಳಾಗಿದ್ದು, ಅಲ್ಲಲ್ಲಿ ರಾಶಿಯೂ ಬಿದ್ದಿವೆ. ಅವುಗಳನ್ನು ಸರಿಪಡಿಸಬೇಕು. ಕೆರೆಯ ಸುತ್ತಲೂ ಇನ್ನಷ್ಟು ಬೆಂಚ್‌ಗಳನ್ನು ಹಾಕಬೇಕು ಎಂಬುದು ಜನರ ಮನವಿ. ವಯಸ್ಕರಿಗಾಗಿ ತೆರೆದ ಜಿಮ್ ನಿರ್ಮಿಸಿ ಅಗತ್ಯ ಉಪಕರಣಗಳನ್ನು ಒದಗಿಸಬೇಕು ಎಂದೂ ಕೆಲವರು ಕೇಳಿದ್ದಾರೆ.

ದಾಸವಾಳ ಹೂದೋಟ ಇತ್ತು ಎಂದು ಕೆಲವರು ಹೇಳುತ್ತಾರೆ. ಆದರೆ, ಅದಕ್ಕೆ ಯಾವ ಕುರುಹುಗಳೂ ಇಲ್ಲ. ಈ ವನವನ್ನು ಪುನರ್ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂಬುದನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಬಹುತೇಕರ ಅಭಿಪ್ರಾಯ. ಪ್ರಥಮ ಚಿಕಿತ್ಸೆ ಕಿಟ್‌ಗಳು ತಕ್ಷಣ ಲಭ್ಯವಾಗುವ ಸ್ಥಿತಿ ಇಲ್ಲ. ಕೆಲವು ಪೆಟ್ಟಿಗೆಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿವೆ. ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹಾವು ಕಡಿದವರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ. ಆಂಬುಲೆನ್ಸ್‌ ಸೌಲಭ್ಯದ ಜತೆಗೆ ವೈದ್ಯಕೀಯ ನೆರವಿನ ಅಗತ್ಯವಿದೆ ಎಂಬುದು ಪಾದಚಾರಿಗಳ ಮನವಿ.

ಪ್ರತ್ಯೇಕ ಸೈಕಲ್ ಪಥಕ್ಕೆ ಮನವಿ
ವಾಯುವಿಹಾರಿಗಳಿಗೆ ಪ್ರತ್ಯೇಕ ಟ್ರ್ಯಾಕ್‌ ನಿರ್ಮಿಸಬೇಕು. ರಸ್ತೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದು, ಅದನ್ನು ತಪ್ಪಿಸಬೇಕು. ಯೋಗಕ್ಕೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕು. ಉದ್ಯಾನದೊಳಗೆ ಸೈಕ್ಲಿಂಗ್ ಟ್ರ್ಯಾಕ್, ಹಿಂದಿನಂತೆಯೇ ಸೈಕಲ್ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಜನ ಮನವಿ ಮಾಡಿದ್ದಾರೆ.

ಅಂಗವಿಕಲರ ಅನುಕೂಲಕ್ಕೆ ಬೆಳಿಗ್ಗೆ 7ರ ಒಳಗೆ ಹಾಗೂ ಸಂಜೆ 7ರ ನಂತರ ಗಾಲಿಕುರ್ಚಿ ವ್ಯವಸ್ಥೆ ಮಾಡಬೇಕು. ಫಲಪುಷ್ಪ ಪ್ರದರ್ಶನದ ಬಳಿಕ ತಕ್ಷಣವೇ ಉದ್ಯಾನ ಸ್ವಚ್ಛಗೊಳಿಸಬೇಕು. ಜನಪದ ಮೇಳವನ್ನು ಪುನರ್‌ ಆರಂಭಿಸಬೇಕು. ಆಕ್ಯುಪ್ರೆಶರ್ ಕಲ್ಲಿನ ನಡಿಗೆಗೆ ವ್ಯವಸ್ಥೆ ಮಾಡಬೇಕು. ಉದ್ಯಾನದ ಒಳಗೆ ಲಭಿಸುತ್ತಿರುವ ಆಹಾರ, ಹಣ್ಣು, ಜ್ಯೂಸ್‌ಗೆ ಹೆಚ್ಚಿನ ದರವಿದೆ. ಅದನ್ನು ತಪ್ಪಿಸಬೇಕು. ಫುಡ್‌ ಕೋರ್ಟ್‌ ನಿರ್ಮಿಸಬೇಕು ಎಂಬ ಆಗ್ರಹಗಳು ಸಮೀಕ್ಷೆಯಲ್ಲಿ ಬಂದಿವೆ.

ನಗರದ ಮಾಲಿನ್ಯದ ನೀರು ಕೆರೆಯ ಒಡಲು ಸೇರುತ್ತಿದೆ. ಅದನ್ನು ತಪ್ಪಿಸಬೇಕು, ಎಲ್‌ಇಡಿ ಲೈಟ್‌ ವ್ಯವಸ್ಥೆ ಮಾಡಬೇಕು ಎಂದೂ ಜನ ಮನವಿ ಮಾಡಿದ್ದಾರೆ.

‌ಅಭಿವೃದ್ಧಿಗೆ ಜನರ ಸಲಹೆಗಳು
* ಪಶ್ಚಿಮ ಮತ್ತು ಮುಖ್ಯ ದ್ವಾರದಲ್ಲಿನ ವಾಹನ ನಿಲುಗಡೆ ಸಮಸ್ಯೆ ಪರಿಹರಿಸಬೇಕು.
* ವಾಹನ ನಿಲುಗಡೆ ಪ್ರದೇಶ ವ್ಯಾಪಾರ ಕೇಂದ್ರವಾಗಿದ್ದು, ಅದನ್ನು ತಪ್ಪಿಸಬೇಕು.
* ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಮೈಸೂರಿನ ಮಾದರಿಯಲ್ಲಿ ಸಂಗೀತ ಕಾರಂಜಿ ಪರಿಚಯಿಸಬೇಕು.
* ಪ್ರವಾಸಿಗರ ಅನುಕೂಲಕ್ಕಾಗಿ ಲಾಲ್‌ಬಾಗ್ ಆ್ಯಪ್ ಅಭಿವೃದ್ಧಿಪಡಿಸಬೇಕು.
* ಮಳೆ ಬಂದಾಗ ಪಾದಚಾರಿಗಳು ನಿಲ್ಲಲು ಅಲ್ಲಲ್ಲಿ ಶೆಲ್ಟರ್‌ಗಳ ನಿರ್ಮಾಣವಾಗಬೇಕು.
* ಪ್ರವಾಸಿಗರ ಅನುಕೂಲಕ್ಕಾಗಿ ನಾಮಫಲಕಗಳನ್ನು ಅಳವಡಿಸಬೇಕು.
* ಹಣ್ಣುಗಳು ಕೊಳೆತು ತ್ಯಾಜ್ಯವಾಗುತ್ತಿದ್ದು, ಉದ್ಯಾನದೊಳಗೆ ಆಹಾರ ಮತ್ತು ಸಿಹಿ ತಿಂಡಿ ಮಾರಾಟ ನಿಷೇಧಿಸಬೇಕು.
* ಮಕ್ಕಳಿಗೆ ಮೀಸಲಾದ ಪ್ರತ್ಯೇಕ ಆಟದ ಪ್ರದೇಶ ನಿರ್ಮಿಸಬೇಕು.
* ಕಾಫಿ–ಕುರುಕಲು ತಿಂಡಿಗಳನ್ನು ಸೇವಿಸಲು ಪ್ರತ್ಯೇಕ ಕೆಫೆಟೇರಿಯಾ ಸೌಲಭ್ಯ.
* ಓಟಕ್ಕೆ ಪ್ರತ್ಯೇಕ ಪಥ, ಕೆರೆಯ ಉದ್ದಕ್ಕೂ ಜಾಗಿಂಗ್ ಟ್ರ್ಯಾಕ್ ನಿರ್ಮಾಣ.
* ಗುಡ್ಡದ ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸಿ, ಉದ್ಯಾನವಾಗಿ ಪರಿವರ್ತಿಸುವ ಅವಕಾಶ ಪರಿಗಣಿಸಬೇಕು.
* ಪ್ರಾಣಿ ಮತ್ತು ಮೀನು ಸಂಗ್ರಹಾಲಯ ತೆರೆಯಬೇಕು.
* ಸಂಗೀತ ಪ್ರದರ್ಶನಕ್ಕೆ ಪ್ರತ್ಯೇಕ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶ ನಿರ್ಮಿಸಬೇಕು.
* ಗಾಜಿನಮನೆ ಉನ್ನತೀಕರಿಸಬೇಕು. ನಾಲ್ಕೂ ಗೇಟ್‌ಗಳಲ್ಲಿ ಸ್ಕೈವಾಕ್‌ ನಿರ್ಮಿಸಬೇಕು.
*ವಾಯುವಿಹಾರದ ಸಮಯ ವಿಸ್ತರಿಸಬೇಕು. ಪೊಲೀಸ್‌ ಭದ್ರತೆ ಹೆಚ್ಚಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.

'ಬರಕೊಳ್ಳಪ್ಪಾ.. ಇದು ಮುನಿರತ್ನನ ಆದೇಶ'
ಲಾಲ್‌ಬಾಗ್, ಕಬ್ಬನ್‌ ಪಾರ್ಕ್‌ನಲ್ಲಿ ಸರ್ಕಾರ ಬಿಟ್ಟು ಯಾವುದೇಖಾಸಗಿ ಸಂಸ್ಥೆಗೆ ಅವಕಾಶ ಕೊಡುವುದಿಲ್ಲ. ಫಲಪುಷ್ಪ ಪ್ರದರ್ಶನ, ಮಾವು–ಹಲಸು ಮೇಳದಂತಹ ಸರ್ಕಾರ ನಡೆಸುವ ಕಾರ್ಯಕ್ರಮಗಳಿಗೆ ಬಿಟ್ಟು ಬೇರಾರೂ ಮಾಡುವಂತಿಲ್ಲ. ಇದು ಈ ಮುನಿರತ್ನನ ಆದೇಶ ಅಂತ ‘ಪ್ರಜಾವಾಣಿ’ಯವರ ಪತ್ರದ ಮೇಲೆ ಬರೆದು ಆದೇಶ ಹೊರಡಿಸಪ್ಪ. . .

ಹೀಗೆಂದು ತಮ್ಮ ಆಪ್ತ ಸಹಾಯಕರಿಗೆ ಹೇಳಿದವರು ತೋಟಗಾರಿಕೆ ಸಚಿವ ಮುನಿರತ್ನ. ಲಾಲ್‌ಬಾಗ್‌ನಲ್ಲಿ ಜನಸ್ಪಂದನ ಮಾಡಲು ಅವಕಾಶ ಕೋರಿ ಬರೆದ ಪತ್ರ ನೋಡಿದ ಕೂಡಲೇ, ‘ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಈಗಲೇ ಟ್ವಿಟರ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಬರೆದು ದಿನಾ ಕಾಟ ಕೊಡ್ತಾ ಇದ್ದಾರೆ. ಇನ್ನಷ್ಟು ಬೈಯಿಸಿಕೊಳ್ಳಲು ಜನಸ್ಪಂದನಕ್ಕೆ ಅವಕಾಶ ಕೊಡಬೇಕಾ? ನಿಮ್ಮ ಮನವಿಯನ್ನೇ ಆಧಾರವಾಗಿಟ್ಟುಕೊಂಡು ಈ ಮುನಿರತ್ನ ಒಂದು ಐತಿಹಾಸಿಕ ಆದೇಶ ಹೊರಡಿಸುತ್ತಾನೆ. ಯಾರಿಗೂ ಅವಕಾಶ ಕೊಡುವುದಿಲ್ಲ. ನಾಳೆ ಬೆಳಿಗ್ಗೆಯೇ ಆದೇಶ ಹೊರಡಿಸಿ ನನ್ನ ಮುಂದೆ ಇಡಬೇಕು. ಲಾಲ್‌ಬಾಗ್‌ನ ಸಮಸ್ಯೆಯನ್ನು ಪರಿಹರಿಸುವುದಕ್ಕೆ‘ಜನಸ್ಪಂದನ’ ಯಾಕೆ? ಅಲ್ಲಿ ಬಂದಿರುವ ಸಮಸ್ಯೆಯನ್ನುನನ್ನ ಬಳಿಯೇ ಕೊಡಿ. ತಕ್ಷಣವೇ ಬದಲಿಸುತ್ತೇನೆ’ಹೀಗೆಂದು ಅಬ್ಬರಿಸಿ ಬೊಬ್ಬರಿದರು ಮುನಿರತ್ನ.

ಜನರ ಪ್ರತಿಕ್ರಿಯೆಗಳು

ಗಿಡಗಳ ಎಲೆಗಳು ಪಾದಚಾರಿ ಮಾರ್ಗದಲ್ಲಿ ಬಿದ್ದು, ಕೊಳೆಯುತ್ತಿವೆ. ಅವುಗಳನ್ನು ತೆರವು ಮಾಡಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು.ಸುಸಜ್ಜಿತ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕು. ಶೌಚಾಲಯ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ವಿವಿಧ ಬಗೆಯ ಹೂಗಿಡಗಳನ್ನು ಬೆಳೆಸಬೇಕು.
–ಪ್ರಕಾಶ್ ಶಿಗ್ಲಿ,ಕಾಟನ್ ಪೇಟೆ‌

*

ಸಸ್ಯಕಾಶಿ ಎಂದೇ ಹೆಸರಾದ ಲಾಲ್‌ಬಾಗ್‌ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬೀದಿ ದೀಪಗಳು ಹಾಳಾದರೂ ಕೂಡಲೇ ಸರಿಪಡಿಸುತ್ತಿಲ್ಲ.ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ವ್ಯಾಪಾರಿಗಳಿಗೆ ಲಾಲ್‌ಬಾಗ್‌ ಒಳಗಡೆ ಅವಕಾಶ ನೀಡಬಾರದು.
–ನೇತ್ರಾ,ನಾಗಸಂದ್ರ

*

ಮಳೆ ಬಂದಲ್ಲಿ ಲಾಲ್‌ಬಾಗ್‌ನಲ್ಲಿ ಓಡಾಡುವುದು ಕಷ್ಟ. ಆದ್ದರಿಂದ ಸುಸಜ್ಜಿತ ಪಥ ನಿರ್ಮಿಸಬೇಕು. ಮುರಿದು ಬಿದ್ದ ಮರದ ರೆಂಬೆಗಳನ್ನು ವಿಲೇವಾರಿ ಮಾಡಬೇಕು. ಎಲ್ಲ ಪ್ರವೇಶದ್ವಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಲಾಲ್‌ಬಾಗ್‌ನಲ್ಲಿ ಬ್ಯಾಡ್ಮಿಂಟನ್ ಸೇರಿ ವಿವಿಧ ಆಟಗಳಿಗೆ ನಿರ್ಬಂಧ ವಿಧಿಸಬೇಕು.
–ಅನಿಲ್,ಜಯನಗರ

*

ಲಾಲ್‌ಬಾಗ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಕೆರೆಯನ್ನು ಅಭಿವೃದ್ಧಿಪಡಿಸಿ, ಸುತ್ತಲೂ ಇನ್ನಷ್ಟು ಗಿಡಗಳನ್ನು ಬೆಳೆಸಬೇಕು. ಮಳೆ ಬಂದಾಗ ರಕ್ಷಿಸಿಕೊಳ್ಳಲು ಕುಟೀರಗಳನ್ನು ನಿರ್ಮಿಸಬೇಕು. ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ಪುನರುಜ್ಜೀವನ ಮಾಡಬೇಕು.
–ಮಂಜುನಾಥ್,ಬಿಟಿಎಂ ಲೇಔಟ್

*

ಲಾಲ್‌ಬಾಗ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲೆಡೆ ಕಸದ ತೊಟ್ಟಿಗಳನ್ನು ಇರಿಸುವ ಜತೆಗೆ ಪ್ರತಿನಿತ್ಯ ಕಸವನ್ನು ವಿಲೇವಾರಿ ಮಾಡಬೇಕು. ಕುಡಿಯುವ ನೀರಿನ ಘಟಕಗಳನ್ನು ಇನ್ನಷ್ಟು ಕಡೆ ನಿರ್ಮಿಸಬೇಕು. ಕೆಲವೆಡೆ ಹುಲ್ಲು ಹಾಗೂ ಗಿಡಗಂಟಿಗಳು ಬೆಳೆದುಕೊಂಡಿವೆ. ಅವನ್ನು ತೆರವು ಮಾಡಬೇಕು.
–ಮಾಲತಿ,ಜಯನಗರ 4ನೇ ಹಂತ

*

ಲಾಲ್‌ಬಾಗ್‌ ಅಭಿವೃದ್ಧಿಗೆ ಕ್ರಮ: ಕುಸುಮಾ
‘ಲಾಲ್‌ಬಾಗ್‌ನಲ್ಲಿ ಹೊಸದಾಗಿ ಕುಡಿಯುವ ನೀರಿನ ಘಟಕಗಳು, ಮಳೆಯಿಂದ ರಕ್ಷಿಸುವಪರಿಸರ ಸ್ನೇಹಿ ಕುಟೀರ ನಿರ್ಮಿಸಲು ಮತ್ತು ರಸ್ತೆಗಳ ಅಭಿವೃದ್ಧಿ ಪಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಬಜೆಟ್‌ ಇಲ್ಲದ ಕಾರಣ ಕಾಮಗಾರಿ ಪ್ರಾರಂಭವಾಗಿಲ್ಲ. ಲಾಲ್‌ಬಾಗ್‌ನಲ್ಲಿರುವ ವಾಕಿಂಗ್‌ ಪಥ 20 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಈಗ ಎಲ್ಲಾ ಹಾಳಾಗಿವೆ. ಮುಂದಿನ ದಿನಗಳಲ್ಲಿ ಇವುಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಲಾಲ್‌ಬಾಗ್‌ ಉಪನಿರ್ದೇಶಕಿ ಕುಸುಮಾ ತಿಳಿಸಿದರು.

‘ಲಾಲ್‌ಬಾಗ್‌ ಉದ್ಯಾನದಲ್ಲಿ ನಾಯಿಗಳಿದ್ದು, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಇವುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವುದಕ್ಕೆ ಅವಕಾಶವಿಲ್ಲ. ಆದ್ದರಿಂದ, ಎಲ್ಲಾ ನಾಯಿಗಳಿಗೂ ಲಸಿಕೆಯ ಜೊತೆಗೆ ಶೇ 80ರಷ್ಟು ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲಾಗಿದೆ. ಇದುವರೆಗೂ ಯಾವುದೇ ನಾಯಿ ಕಚ್ಚಿರುವ
ಪ್ರಕರಣಗಳಿಲ್ಲ’ ಎಂದು ಮಾಹಿತಿ ನೀಡಿದರು.

‘ಉದ್ಯಾನದ ಕೆಲ ಭಾಗಗಳಲ್ಲಿ ವಿದ್ಯುತ್ ಜಂಕ್ಷನ್‌ ಬಾಕ್ಸ್‌ನ ತುಂಬಾ ಹಳೆದಾಗಿವೆ. ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಜಾಗೃತಿಗಾಗಿ ಫಲಕಗಳನ್ನು ಅಳವಡಿಸಲಾಗಿದೆ. ಕೆರೆ ಮೇಲಿನ ಪಾದಚಾರಿ ಮಾರ್ಗಕ್ಕೆ ಹೊಸಕೋಟೆ ಮಣ್ಣು ಹಾಕಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

‘ಸತತವಾಗಿ ಸುರಿದ ಮಳೆಯ ಕಾರಣ ಬ್ಯಾಂಡ್ ಸ್ಟ್ಯಾಂಡ್‌ ಹತ್ತಿರದ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು, ದುರಸ್ತಿಗೊಳಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಇದನ್ನು ಸರಿಪಡಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಜ್ಞರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

‘ಬೆಳಿಗ್ಗೆ 5.30ಕ್ಕೆ ಲಾಲ್‌ಬಾಗ್‌ ಬಾಗಿಲು ತೆರೆಯಲಾಗುತ್ತಿದೆ. ಉದ್ಯಾನವನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ನಾಲ್ಕು ಪ್ರವೇಶ ದ್ವಾರಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಮುರಿದಿರುವ ಬೆಂಚ್‌ಗಳನ್ನು ದುರಸ್ತಿ ಮಾಡಲಾಗುವುದು. ಲಾಲ್‌ಬಾಗ್‌ ಉದ್ಯಾನದಲ್ಲಿ ಈಗಾಗಲೇ ಒಬ್ಬರು ಶುಶ್ರೂಷಕಿ ಇದ್ದಾರೆ. ಅಲ್ಲಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಲಾಗುವುದು’ ಎಂದರು

‘ಇದು ಜೈವಿಕ ಉದ್ಯಾನವಾಗಿರುವುದರಿಂದ ಇಲ್ಲಿ ಯಾವುದೇ ವಾಣಿಜ್ಯ ವಹಿವಾಟಿಗೆ ಅವಕಾಶವಿಲ್ಲ. ದ್ವಿಪಥ ಇರುವ ಪ್ರವೇಶ ದ್ವಾರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ನಾಲ್ಕು ಪ್ರವೇಶ ದ್ವಾರಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಜಾಗದ ಸಮಸ್ಯೆ ಇದೆ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಎಂ ಜಗದೀಶ್ ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT